ಯಾದಗಿರಿ: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ವರ್ಷದಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಬಡಜನರಿಗೆ ತುಂಬಾ ಉಪಯುಕ್ತವಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ನೋಂದಣಿ ಕಡ್ಡಾಯವಾಗಿದೆ. ಆದ್ದರಿಂದ ಸಾರ್ವಜನಿಕರಲ್ಲಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಿ, ಸೌಲಭ್ಯ ಪಡೆಯುವಂತೆ ತಿಳಿಸಬೇಕು ಎಂದು ಹೇಳಿದರು.
34,771 ಕಾರ್ಡ್ ನೋಂದಣಿ: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 34,771 ಕಾರ್ಡ್‌ಗಳು ನೋಂದಣಿಯಾಗಿದ್ದು, 507 ಜನ ಸೌಲಭ್ಯ ಪಡೆದಿದ್ದಾರೆ. ಯಾದಗಿರಿ-8959, ಅರಕೇರಾ ಬಿ-23, ಸೈದಾಪುರ-3306, ಗುರುಮಠಕಲ್-313, ಶಹಾಪುರ-4,752, ದೋರನಹಳ್ಳಿ-734, ವಡಗೇರಾ-3660, ಸುರಪುರ-8491, ಹುಣಸಗಿ-4533 ಕಾರ್ಡ್‌ಗಳು ನೋಂದಣಿಯಾಗಿವೆ. ಶಹಾಪುರ ತಾಲೂಕು ಆಸ್ಪತ್ರೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಹಿಂದೆ ಬಿದ್ದಿದೆ. ಅನಗತ್ಯ ಕಾರಣಗಳನ್ನು ನೀಡದೆ ಯೋಜನೆಯನ್ನು ಜನರಿಗೆ ತಲುಪಿಸುವಂತೆ ತಾಕೀತು ಮಾಡಿದರು.
ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯಗಳು ಸದ್ಯ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿದೆ. ಹಂತ ಹಂತವಾಗಿ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಇ-ಹಾಸ್ಪಿಟಲ್: ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪುರ ಹಾಗೂ ಸುರಪುರ ತಾಲೂಕು ಆಸ್ಪತ್ರೆಗಳನ್ನು ಇ-ಹಾಸ್ಪಿಟಲ್ಗಳಾಗಿ ಪರಿವರ್ತಿಸಲಾಗಿದೆ. ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ಬಿಲ್ಲಿಂಗ್, ಅಪಘಾತ ವಿಭಾಗಗಳನ್ನು ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಬೇಕು. ಆದರೆ, ಒಳರೋಗಿಗಳಾಗಿ ಚಿಕಿತ್ಸೆ ಪಡೆದವರ ಮಾಹಿತಿಯನ್ನು ಅವರು ಆಸ್ಪತ್ರೆಯಿಂದ ಬಿಡುಗಡೆ ವೇಳೆ ನಮೂದು ಮಾಡುತ್ತಿಲ್ಲ. ಇದು ಶೇ. 100ರಷ್ಟು ಆಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಮಲ್ಲಪ್ಪ ಮಾತನಾಡಿ, ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇವೆ. ಇದರಿಂದ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಸಂಜೀವ್‌ಕುಮಾರ್ ರಾಯಚೂರಕರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಲಕ್ಷ್ಮೀಕಾಂತ, ಪೌರಾಯುಕ್ತ ರಮೇಶ ಸುಣಗಾರ, ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ರಾಜ್ಯ ಸಮಾಲೋಚಕ ಮಂಜುನಾಥ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋಜಕ ಶ್ರೀನಿವಾಸರಾವ್ ಉಪಸ್ಥಿತರಿದ್ದರು.