ಯಾದಗಿರಿ: ಮನುಷ್ಯ ಮಹಾಂತನಾಗಲು ಗುರುವಿನ ಮಾರ್ಗದರ್ಶನ ಅವಶ್ಯ ಎಂದು ವಿಶ್ಯಾರಾಧ್ಯ ಮಠದ ಪೀಠಾಧಿಪತಿ ಡಾ| ಗಂಗಾಧರ ಸ್ವಾಮೀಜಿ ಹೇಳಿದರು.
ತಾಲೂಕಿನ ಅಬ್ಬೆತುಮಕೂರು ಜಾತ್ರಾ ಮಹೋತ್ಸವ ನಿಮಿತ್ತ ರವಿವಾರ ನಡೆದ ಶರಣ ಸಂಸ್ಕೃತಿ ಶಿಬಿರ ಮತ್ತು ಗುರು ಶಿಷ್ಯರ ಸಮಾಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಯಾರು ಗುರು ಮಹತ್ವ ಅರಿತು ಬಾಳಿ ಬದುಕುತ್ತಾರೋ ಅಂತವರು ಸದ್ಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಳ್ಳೆಯ ಸಂಸ್ಕಾರವಂತನಾಗಿ ರೂಪುಗೊಳ್ಳಬೇಕು. ಹೀಗೆ ರೂಪುಗೊಳ್ಳಲು ಗುರುವಿನ ಪಾತ್ರ ಮುಖ್ಯ. ಗುರುವಿನಿಂದಲೇ ಸಕಲ ಸಂಪದ ಸಾಧ್ಯವಾಗುತ್ತದೆ ಎಂದು ಹೇಳಿದರು.
ನಶ್ವರವಾದ ಜೀವನ ನಂಬಿ ಶಾಶ್ವತ ಘನಸಂಪದ ನೀಡುವ ಗುರುವನ್ನು ಯಾವತ್ತೂ ಮರೆಯಬಾರದು. ಗುರುವಿನ ಪಾದದಲ್ಲಿ ಸಮರ್ಪಣಾಭಾವದಿಂದ ತನುವನ್ನು ತೊಡಗಿಸಿಕೊಂಡು ಮನಪೂರ್ವಕವಾಗಿ ಆರಾಧಿಸಿದರೆ ಗುರು ಶಿಷ್ಯನಿಗೆ ಒಲಿಯುತ್ತಾನೆ ಎಂದು ಹೇಳಿದರು. ಸಾಂಸಾರಿಕ ಜೀವನದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬ ಮನುಷ್ಯರು ಕೇವಲ ಸಂಸಾರಕ್ಕೆ ಅಂಟಿಕೊಳ್ಳಬಾರದು. ಸಾಂಸಾರಿಕ ಜೀವನದಲ್ಲಿ ಸದ್ಗತಿ ಹೊಂದುವುದು ಅವಶ್ಯ. ಸದ್ಗತಿ ಪಡೆಯಬೇಕಾದಲ್ಲಿ ಪ್ರತಿಯೊಬ್ಬರಿಗೂ ಗುರುವಿನ ಅವಶ್ಯಕತೆ ಇದೆ ಎಂದು ಹೇಳಿದರು.
ಕನ್ನಡದ ಕಬೀರ ಮಹಾಲಿಂಗಪುರದ ಇಬ್ರಾಹಿಂ ಸುತಾರ, ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ, ಬಸವರಾಜ ಶಾಸ್ತ್ರಿ ಎಲೆಕೂಡಗಿ, ನಿಜಾನಂದ ಸ್ವಾಮಿಗಳು, ಅನಂತಾನಂದ ಸ್ವಾಮಿಗಳು, ಆನಂದ ಶಾಸ್ತ್ರಿಗಳು, ಸಿದ್ದರಾಮ ದೇವರು, ಅಮರಯ್ಯಸ್ವಾಮಿ ಗುರುಶಿಷ್ಯರ ಸಮಾಗಮದಲ್ಲಿ ಪಾಲ್ಗೊಂಡ ಶಿಷ್ಯ ಸಮೂಹಕ್ಕೆ ದೀಕ್ಷಾ ಸಂಸ್ಕಾರದ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕನ್ನಡದ ಕಬೀರ ಮಹಾಲಿಂಗಪೂರದ ಇಬ್ರಾಹಿಂ ಸುತಾರ ಅವರನ್ನು ಅಬ್ಬೆತುಮಕೂರಿನಲ್ಲಿ ನಡೆದ ಗುರು-ಶಿಷ್ಯರ ಸಮಾಗಮದಲ್ಲಿ ಮಠದ ಪೀಠಾ ಧಿಪತಿ ಡಾ| ಗಂಗಾಧರ ಸ್ವಾಮೀಜಿ ವಿಶೇಷವಾಗಿ ಸತ್ಕರಿಸಿ ಆಶೀರ್ವದಿಸಿದರು. ಡಾ| ಸುಭಾಶ್ಚಂದ್ರ ಕೌಲಗಿ, ಎಸ್.ಎನ್. ಮಿಂಚಿನಾಳ, ಮಹಾದೇವ ಬಬಲಾದ ಇದ್ದರು.