ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಆಡಿಯೋ ಸಂಸ್ಥೆಯು ಈಗಾಗಲೇ “ಅಂಜನಿಪುತ್ರ’ ಮತ್ತು “ಟಗರು’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ “ಪಡ್ಡೆಹುಲಿ’ ಚಿತ್ರದ ಹಾಡುಗಳ ಹಕ್ಕುಗಳನ್ನು ಪಡೆದಿರುವ ಸುದ್ದಿ ಇದೆ. ಈ ಮಧ್ಯೆ ವಿಜಯಲಕ್ಷ್ಮೀ ಸಿಂಗ್ ಅವರ ಹೊಸ ಚಿತ್ರ “ಯಾನ’ ಚಿತ್ರದ ಹಾಡುಗಳ ಹಕ್ಕುಗಳನ್ನು ಸಹ ಪಿಆರ್‌ಕೆ ಆಡಿಯೋ ಕೊಂಡುಕೊಂಡಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಿದೆ.
ವಿಶೇಷವೆಂದರೆ, ಪುನೀತ್ ಈ ಚಿತ್ರದ ಮುಹೂರ್ತಕ್ಕೆ ಬಂದು ವಿಜಯಲಕ್ಷ್ಮೀ ಸಿಂಗ್ ಮತ್ತು ತಂಡಕ್ಕೆ ಶುಭ ಕೋರಿ ಹೋಗಿದ್ದರು. ಈಗ ಅವರ ಪಿಆರ್‌ಕೆ ಆಡಿಯೋ ಮೂಲಕವೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. “ಯಾನ’ ಚಿತ್ರದ ಮೂಲಕ ನಟಿ-ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಅವರು ತಮ್ಮ ಮಕ್ಕಳನ್ನು ನಾಯಕಿಯರಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ವೈಭವಿ, ವೈನಿಧಿ ಮತ್ತು ವೈಸಿರಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದು, ಅವರಿಗೆ ನಾಯಕರಾಗಿ ಸುಮುಖ ಅಭಿಷೇಕ್ ಮತ್ತು ಚಕ್ರವರ್ತಿ ನಟಿಸುತ್ತಿದ್ದಾರೆ. ಈ ಮೂವರನ್ನೂ ಆಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ. ಬರೀ ನಾಯಕರಷ್ಟೇ ಅಲ್ಲ, ಈ ಚಿತ್ರದಲ್ಲಿ 25 ಹೊಸ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿ, ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ.
ಅವರೆಲ್ಲರ ಜೊತೆಗೆ ಅನಂತ್‌ನಾಗ್, ಸುಹಾಸಿನಿ, ಸಾಧು ಕೋಕಿಲ, ಜೈಜಗದೀಶ್, ಸುಂದರ್ ರಾಜ್‌ರಂತಹ ಹಿರಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ. “ಯಾನ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಹೃದಯಶಿವ, ಶಶಾಂಕ್ ಮತ್ತು “ಬಹದ್ದೂರ್’ ಚೇತನ್ ಬರೆದಿದ್ದಾರೆ.
ಇನ್ನು ಸಿದ್ಧಾರ್ಥ್ ಸುರೇಶ್ ಎನ್ನುವವರು ಪ್ರೋಮೋ ಟ್ರಾಕ್ ಮಾಡಿಕೊಟ್ಟಿದ್ದಾರೆ. ಈ ಚಿತ್ರವನ್ನು ಹರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್, ವೈಭವಿ, ವೈನಿಧಿ ಮತ್ತು ವೈಸಿರಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಮೆಲೊಡಿ ಹಾಡುಗಳಿಗೆ ಜನಪ್ರಿಯರಾಗಿರುವ ಜೋಶ್ವಾ ಶ್ರೀಧರ್, ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.