ನವದೆಹಲಿ: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಚೀನಾ ಮೂಲದ ಶಿಯೋಮಿ ಸ್ಮಾರ್ಟ್ ಫೋನ್ ಕಂಪನಿಯ 5,000ಕೋಟಿಗೂ ಅಧಿಕ ನಗದನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಂಜಿ ಕುಡಿದು ಬದುಕುತ್ತೇನೆ ಹೊರತು ಭ್ರಷ್ಟಾಚಾರ ಮಾಡಲ್ಲ; ಹಾಲಪ್ಪ ಅವರಿಗೆ ಬೇಳೂರು ಟಾಂಗ್
ಶಿಯೋಮಿ ಕಂಪನಿಯ ಅಕ್ರಮ ಹಣಕಾಸು ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯ ತನಿಖೆಯನ್ನು ಆರಂಭಿಸಿತ್ತು. ಇ.ಡಿ ಮಾಹಿತಿ ಪ್ರಕಾರ, 2014ರಲ್ಲಿ ಭಾರತದಲ್ಲಿ ಶಿಯೋಮಿ ಕಂಪನಿ ಆರಂಭಗೊಂಡಿತ್ತು. 2015ರಿಂದ ಹಣಕಾಸು ವರ್ಗಾವಣೆ ಮಾಡಲು ಆರಂಭಿಸಿತ್ತು. ಈವರೆಗೆ ಶಿಯೋಮಿ 5,551.27 ಕೋಟಿ ರೂಪಾಯಿಗೆ ಸಮನಾದ ವಿದೇಶಿ ಕರೆನ್ಸಿಯನ್ನು ಮೂರು ವಿದೇಶಿ ಮೂಲದ ಸಂಸ್ಥೆಗಳಿಗೆ ವರ್ಗಾಯಿಸಿರುವುದಾಗಿ ತನಿಖಾ ಸಂಸ್ಥೆ ಇ.ಡಿ. ವಿವರ ನೀಡಿದೆ.
ರಾಯಲ್ಟಿ ಹೆಸರಿನಲ್ಲಿ ಭಾರೀ ಮೊತ್ತದ ಹಣವನ್ನು ಅವರ ಚೀನಾ ಮೂಲದ ಪೇರೆಂಟ್ ಗ್ರೂಪ್ ಸೂಚನೆ ಮೇರೆಗೆ ಹಣವನ್ನು ವರ್ಗಾಯಿಸಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ. ಅಷ್ಟೇ ಅಲ್ಲ ತಮಗೆ ಸಂಬಂಧವಿಲ್ಲದ ಅಮೆರಿಕ ಮೂಲದ ಎರಡು ಸಂಸ್ಥೆಗಳಿಗೆ ಶಿಯೋಮಿ ಗ್ರೂಪ್ ಕಂಪನಿಯಿಂದ ಹಣ ವರ್ಗಾವಣೆಯಾಗಿರುವುದಾಗಿ ಇ.ಡಿ ತಿಳಿಸಿದೆ.
ಶಿಯೋಮಿ ಇಂಡಿಯಾ MI ಬ್ರ್ಯಾಂಡ್ ಹೆಸರಿನಲ್ಲಿ ಭಾರತದಲ್ಲಿ ಮೊಬೈಲ್ ಫೋನ್ ಗಳ ಮಾರಾಟ ಮತ್ತು ವಿತರಣೆ ಮಾಡುತ್ತಿದೆ. ಭಾರತದಲ್ಲಿ ಸಂಪೂರ್ಣವಾಗಿ ತಯಾರಿಸಲ್ಪಟ್ಟ ಮೊಬೈಲ್ ಸೆಟ್ ಮತ್ತು ಇತರ ಉತ್ಪನ್ನಗಳನ್ನು ಶಿಯೋಮಿ ಪಡೆಯುತ್ತಿರುವುದಾಗಿ ವರದಿ ತಿಳಿಸಿದೆ.