ಅವತ್ತು ಬೀಳ್ಕೊಡುವ ಮುನ್ನ, ಮೆಜೆಸ್ಟಿಕ್‌ನಲ್ಲಿ ನನ್ನ ನಂಬರ್ ಕೊಟ್ಟಿದ್ದೆ. ಅದ್ಯಾಕೋ ನೀನು ಇನ್ನೂ ಕಾಲ್ ಮಾಡಿಲ್ಲ. ಒಂದ್ಸಲ ಕಾಲ್ ಮಾಡಿಬಿಡು. ತುಂಬಾ ಮಾತನಾಡುವುದಿದೆ, ಪ್ಲೀಸ್..
ಹಾಯ್, ಕೆಂಪು ಗುಲಾಬಿ
ಹೇಗಿದ್ದೀಯಾ? ತುಂಬಾ ದಿನಗಳಾದವಲ್ಲಾ ನಾವಿಬ್ಬರೂ ಭೇಟಿಯಾಗಿ. ಕಾಲೇಜು ಮುಗಿದ ಮೇಲೆ ಒಂದೇ ಸಲ ಸಿಕ್ಕಿದ್ದು, ಅದೂ ಮೆಜೆಸ್ಟಿಕ್‌ನಲ್ಲಿ. ಅವತ್ತು ನೀನು ತುಂಬಾ ಅವಸರದಲ್ಲಿದ್ದೆ. ಹೆಚ್ಚಿಗೆ ಏನೂ ಮಾತನಾಡಲಾಗಲಿಲ್ಲ. ಇರಲಿ, ಮೊನ್ನೆ ಹಬ್ಬಕ್ಕೆಂದು ಮನೆಯನ್ನು ಒಪ್ಪವಾಗಿಸುತ್ತಿದ್ದಾಗ ನಿನ್ನ ನೆನಪನ್ನು ಮರುಕಳಿಸುವ ಪಳೆಯುಳಿಕೆಗಳು ಕಣ್ಣಿಗೆ ಬಿದ್ದವು. ಕೂಡಲೇ ಮನಸ್ಸು ಅಂದಿನ ಸಿಹಿ ಕ್ಷಣಗಳೆಡೆಗೆ ಜಾರಿತು. ಹೃದಯ ನಿನ್ನ ಸಾಮೀಪ್ಯವನ್ನು ಬಯಸಿತು. ಈ ಒಲವಿನ ಓಲೆಯ ಮೂಲಕ ನಿನ್ನನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇನೆ.
ಹೀಗೆ ನಿನ್ನೊಂದಿಗೆ ಮನಸ್ಸು ಬಿಚ್ಚಿ ಮಾತಾಡಲು ಹಂಬಲಿಸಿದ ದಿನಗಳೆಷ್ಟೋ? ಅವತ್ತು ಅಕೌಂಟೆನ್ಸಿ ಎಕ್ಸಾಂ ಇತ್ತು. ಅದೇ ಯೋಚನೆಯಲ್ಲಿ ಮುಳುಗಿದ್ದಾಗ ಅದ್ಯಾವ ಲೋಕದಿಂದ ಬಂದೆಯೋ? ಉದ್ದ ಜಡೆ ಬಿಟ್ಟುಕೊಂಡು ಸರಸರನೆ ನನ್ನೆದುರು ಹಾದುಹೋದೆ, ನೋಡಿದರೂ ನೋಡದವಳಂತೆ! ನನಗಂತೂ ವಿದ್ಯುತ್ ಶಾಕ್ ತಗುಲಿದ ಅನುಭವ. ಹೇಳಿಕೊಳ್ಳಲಾಗದ ಉತ್ಸಾಹ, ಅದೆಂಥಾ ಸೆಳೆತ ನಿನ್ನದು? ಅಂದಿನಿಂದ, ನಮ್ಮಿಬ್ಬರ ಭವಿಷ್ಯವನ್ನು ಟ್ಯಾಲಿ ಮಾಡುವುದೇ ನನ್ನ ಕೆಲಸವಾಯ್ತು.
ಎಲ್ಲರಿಗಿಂತ ಮೊದಲು ಕ್ಯಾಂಪಸ್ಸಿನಲ್ಲಿ ಹಾಜರಾಗಿ ನಿನ್ನ ಬರುವಿಕೆಯನ್ನೇ ಕಾಯುತ್ತಿದ್ದೆ. ಆದರೆ ನೀನು ಯಾವಾಗಲೂ ಗೆಳತಿಯರೊಟ್ಟಿಗೆ ಗುಂಪಿನಲ್ಲಿ ಬರುತ್ತಿದ್ದೆ. ಇದೇ ಕಾರಣದಿಂದ, ನನ್ನೊಳಗಿನ ಭಾವನೆಗಳನ್ನು ಹೊರಹಾಕಲು ಮುಜುಗರವಾಗಿ ಹಿಂದಡಿಯಿಡುತ್ತಿದ್ದೆ. ಒಮ್ಮೆ ಸೀನಿಯರ್ ಹುಡುಗನೊಬ್ಬ ಕೆಂಪು ಗುಲಾಬಿ ಹಿಡಿದು ನಿನ್ನೆದುರು ನಿಂತಾಗ ನೀನು ಪಟಾರನೆ ಅವನ ಕೆನ್ನೆಗೆ ಬಾರಿಸಿದ್ದೆ! ನನಗೆ ಮತ್ತೂಮ್ಮೆ ಶಾಕು. ಅಂದಿನಿಂದ ಕೆಂಪು ಗುಲಾಬಿ ಎಂಬ ಹೆಸರೇ ನಿನಗೆ ನಿಕ್ಕಿಯಾಯಿತು.
ಹೀಗೇ ದಿನಗಳು ಉರುಳಿದವು. ಅಂತೂ ಕಡೆಗೊಂದು ದಿನ ಧೈರ್ಯ ಮಾಡಿ ನಿನ್ನನ್ನು ಮಾತನಾಡಿಸಿಯೇಬಿಟ್ಟೆ. ತೊದಲುತ್ತಾ ನಿಮ್ಮ ಹೆಸರೇನು? ಎಂದು ಕೇಳಿದಾಗ, ಹೆಸರಲ್ಲೇನಿರುತ್ತೆ ಎಂದು ನನ್ನೆಡೆಗೆ ಒಂದು ಮುಗುಳ್ನಗೆ ಚೆಲ್ಲಿ ನೀನು ಹೋಗೇಬಿಟ್ಟೆ! ಆಗ ನನಗೆ ತುಂಬಿದ ಮೆಟ್ರೋದಲ್ಲಿ ಸೀಟ್ ಸಿಕ್ಕಷ್ಟೇ ಖುಷಿಯಾಗಿತ್ತು. ಕಾಲೇಜಿನಲ್ಲಿ ಹಾಡಿನ ಸ್ಪರ್ಧೆ ನಡೆದಾಗ ನೀನು, “ಶ್ರೀಕಾರನೇ ಶ್ರೀನಿವಾಸನೇ’ ಎಂದು ಹಾಡಿದ್ದೆಯಲ್ಲ? ಅಬ್ಟಾ! ಎಂಥಾ ಸುಮಧುರ ಧ್ವನಿ ನಿನ್ನದು. ಅಂದಹಾಗೆ, ಇವತ್ತಿಗೂ ಅದೇ ಹಾಡು ನನ್ನ ರಿಂಗ್ ಟೋನ್. ಅದನ್ನ ಕೇಳಿ ಕೇಳಿ ಸಾಕಾಗಿದೆ, ಮೊದಲು ಚೇಂಜ್ ಮಾಡಪ್ಪಾ ಅಂತ ಸ್ನೇಹಿತರು ಬಯ್ದರೂ ನಾನು ಕೇಳಿಲ್ಲ.
ನಾವಿಬ್ಬರೂ ಹತ್ತಿರವಾದೆವು ಎನ್ನುತ್ತಿದ್ದಾಗಲೇ ಬಂತೊಂದು ಆಘಾತಕಾರಿ ಸುದ್ದಿ. ತಂದೆಗೆ ಹುಷಾರಿಲ್ಲ ಎಂದು ನೀನು ಊರಿಗೆ ಹೊರಟಿದ್ದೆ. ನೆನಪಿಗೆ ಎಂದು ಕೈಲಿದ್ದ ಕೊಡೆಯನ್ನು ನನಗೆ ಕೊಟ್ಟು “ಚೆನ್ನಾಗಿರು’ ಅಂತ ಹೇಳಿಯೇ ಹೋದೆ. ನೀನು ವಾಪಸ್ ಬರ್ತೀಯಾ ಅಂತ ದಿನಗಳನ್ನು ಎಣಿಸಿದ್ದೇ ಬಂತು. ಕಾಲೇಜು ಮುಗಿಯಿತೇ ಹೊರತು ನಿನ್ನ ಸುಳಿವಿಲ್ಲ. ಹಾಂ, ಮರೆತಿದ್ದೆ. ಅವತ್ತು ಬೀಳ್ಕೊಡುವ ಮುನ್ನ, ಮೆಜೆಸ್ಟಿಕ್‌ನಲ್ಲಿ ನನ್ನ ನಂಬರ್ ಕೊಟ್ಟಿದ್ದೆ. ಅದ್ಯಾಕೋ ನೀನು ಇನ್ನೂ ಕಾಲ್ ಮಾಡಿಲ್ಲ. ಒಂದ್ಸಲ ಕಾಲ್ ಮಾಡಿಬಿಡು. ತುಂಬಾ ಮಾತನಾಡುವುದಿದೆ, ಪ್ಲೀಸ್..
ನಿನ್ನ ಧ್ವನಿಗಾಗಿ, ನಿನ್ನ ಕರೆಗಾಗಿ ಕಾದಿರುವ
ನಾಗರಾಜ್ ಬಿ. ಚಿಂಚರಕಿ