Advertisement

ಮನೆಯಲ್ಲೇ ಪರೀಕ್ಷೆ ಬರೆದರು!

03:03 AM May 13, 2019 | sudhir |

ರಾಯಚೂರು: ಪರೀಕ್ಷೆ ಎಂದರೆ ಎಲ್ಲೆಡೆ ಕಣ್ಗಾವಲು, ಬಿಗಿ ಬಂದೋಬಸ್ತ್ ಇರುತ್ತದೆ. ಆದರೆ, ಗುಲ್ಬರ್ಗ ವಿವಿ ಬಿಕಾಂ ಪರೀಕ್ಷೆಯನ್ನು ಮನೆಯಲ್ಲಿಯೇ ಕುಳಿತು ಬರೆಯಬಹುದು!

Advertisement

ಒಂದಲ್ಲ ಒಂದು ಅಕ್ರಮಗಳಿಗೆ ಹೆಸರಾಗುತ್ತಿರುವ ಗುಲ್ಬರ್ಗ ವಿವಿ ಮತ್ತೆರಡು ಎಡವಟ್ಟುಗಳನ್ನು ಮಾಡಿಕೊಂಡಿದೆ. ರವಿವಾರ ವಿವಿಯಿಂದ ನಡೆಸಲ್ಪಟ್ಟ ಪರೀಕ್ಷೆಗಳಲ್ಲಿ ಬಿಕಾಂ ಪರೀಕ್ಷೆಯನ್ನು ಕೆಲವು ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಬರೆದರೆ, ಬಿಎಸ್ಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 39 ವಿದ್ಯಾರ್ಥಿಗಳು, ನ್ಯೂ ಚೈತನ್ಯ ಕಾಲೇಜು ಮುಖ್ಯಸ್ಥ ಪವನಕುಮಾರ ಸಹಿತ 40 ಜನರನ್ನು ಬಂಧಿಸಲಾಗಿದೆ. ಘಟನೆಯಿಂದ ಕಂಗಾಲಾಗಿರುವ ಗುಲ್ಬರ್ಗ ವಿವಿ ಕುಲಪತಿ ಪ್ರೊ| ಎಸ್‌.ಆರ್‌.ನಿರಂಜನ್‌ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ| ಡಿ.ಎಂ. ಮದರಿ ಸೋಮವಾರ ರಾಯಚೂರಿಗೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.

ರವಿವಾರ ಬಿಕಾಂ ಎರಡನೇ ಸೆಮಿಸ್ಟರ್‌ ಪರೀಕ್ಷೆ ನಡೆಯುತ್ತಿತ್ತು. ಕೆಲವು ವಿದ್ಯಾರ್ಥಿಗಳು ನಗರದ ಐಡಿಎಸ್‌ಎಂಟಿ ಲೇಔಟ್‌ನ ಮನೆಯೊಂದರಲ್ಲಿ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿರುವ ಮಾಹಿತಿ ಅರಿತ ಜಾಗೃತ ದಳದ ಸಿಬಂದಿ ದಾಳಿ ನಡೆಸಿ, ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ 39ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪುಸ್ತಕಗಳನ್ನಿಟ್ಟುಕೊಂಡು ಸಾಮೂಹಿಕ ನಕಲು ಮಾಡುತ್ತಿದ್ದರು. ಇದರಲ್ಲಿ ವಿದ್ಯಾರ್ಥಿನಿಯರು ಕೂಡ ಇದ್ದರು. ಮಾಧ್ಯಮಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಕೆಲವು ವಿದ್ಯಾರ್ಥಿಗಳು ಪರಾರಿಯಾದರೆ, ಇನ್ನೂ ಕೆಲವರು ಮನೆಯ ಕೋಣೆಯಲ್ಲಿ ತಲೆಮರೆಸಿಕೊಂಡಿದ್ದರು.

ಈ ವೇಳೆ ಮಾತನಾಡಿದ ಜಾಗೃತ ದಳದ ಅಧಿಕಾರಿ ಡಾ| ಎಸ್‌.ಎಸ್‌.ನಾಯಕ, ಕ್ಲಸ್ಟರ್‌ ಕೇಂದ್ರದಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮನೆಯೊಂದರಲ್ಲಿ ನಡೆಸುತ್ತಿರುವ ಮಾಹಿತಿ ಸಿಕ್ಕಿತು. ಹೀಗಾಗಿ ಬಂದು ಪರಿಶೀಲಿಸಿದಾಗ ನೈಜ ಪ್ರಶ್ನೆ ಪತ್ರಿಕೆಗಳೇ ಸಿಕ್ಕಿವೆ. ಉತ್ತರ ಪತ್ರಿಕೆಗಳು, ಓಎಂಆರ್‌ ಶೀಟ್‌ಗಳು, ಹಾಲ್‌ ಟಿಕೆಟ್‌ಗಳನ್ನು ವಶಕ್ಕೆ ಪಡೆದಿದ್ದು, ಇವು ಯಾವ ಕಾಲೇಜಿಗೆ ಸಂಬಂಧಿ ಸಿದ್ದು ಎಂದು ಪರಿಶೀಲಿಸಿ ಮುಂದಿನ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ.

ಬಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರವಿವಾರ ನಡೆದ ಬಿಎಸ್ಸಿ 6ನೇ ಸೆಮಿಸ್ಟರ್‌ನ ರಸಾಯನಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೂಡಲೇ ಬೇರೆ ಪ್ರಶ್ನೆಪತ್ರಿಕೆ ಹಂಚಿಕೆ ಮಾಡಿದ ಘಟನೆ ನಡೆದಿದೆ. ರವಿವಾರ ಅಪರಾಹ್ನ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರಗಳಿಗೆ ಭದ್ರವಾಗಿ ರವಾನಿಸಲಾಗಿತ್ತು. ಆದರೆ 2 ಗಂಟೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಅದೇ ವಿಷಯದ ಪ್ರಶ್ನೆ ಪತ್ರಿಕೆ ರವಿವಾರ ಬೆಳಗ್ಗೆಯಿಂದಲೇ ವಾಟ್ಸ್‌ಆ್ಯಪ್‌ಗ್ಳಲ್ಲಿ ಹರಿದಾಡಿತ್ತು. ವಿವಿ ಅಧಿಕಾರಿಗಳು ಇದನ್ನು ಪರಿಶೀಲಿಸಿದ್ದು, ಪರೀûಾ ಕೇಂದ್ರಗಳಿಗೆ ರವಾನಿಸಿದ ಪ್ರಶ್ನೆಪತ್ರಿಕೆಗಳ ಲಕೋಟೆ ಒಡೆಯದಂತೆ ಸೂಚಿಸಿದ್ದಾರೆ. ಪ್ರಾಧ್ಯಾಪಕರ ತಂಡ 2.15ರೊಳಗೆ ಹೊಸ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಇ-ಮೇಲ್‌ ಮೂಲಕ ರವಾನಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next