Advertisement

ನಾಡಪ್ರಭು ಬಗೆಗಿನ ತಪ್ಪು ಕಲ್ಪನೆ ದೂರಾಗಿಸಿ

11:59 AM Jun 10, 2018 | Team Udayavani |

ಬೆಂಗಳೂರು: ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಗೆಗಿನ ತಪ್ಪು ಕಲ್ಪನೆ ಹಾಗೂ ಗೊಂದಲಗಳನ್ನು ಪರಿಹರಿಸಿ, ಯುವ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಹಾಗೂ ಕೃಷಿಕ ಸಾಹಿತ್ಯ ಪರಿಷತ್‌ ಜಂಟಿಯಾಗಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ “ಕರ್ನಾಟಕ ನಿರ್ಮಾಣದಲ್ಲಿ ಕೆಂಪೇಗೌಡರ ರಾಜ ವಂಶಸ್ಥರ ಕೊಡುಗೆಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬಹಳಷ್ಟು ಜನರಿಗೆ ಕೆಂಪೇಗೌಡರು ಬೆಂಗಳೂರು ನಿರ್ಮಿಸಿದರು ಎಂಬುದಷ್ಟೇ ಗೊತ್ತಿದ್ದು, ಇತಿಹಾಸದಲ್ಲಿ ಮುಚ್ಚಿ ಹೋಗಿರುವ ಅವರ ಬಗೆಗಿನ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ಕೆಲಸವಾಗಬೇಕಿದೆ ಎಂದರು. ಕೆಂಪೇಗೌಡರು ಆಧುನಿಕತೆಗೆ ಹೊಂದಿಕೊಳ್ಳುವ ರೀತಿಯಲ್ಲಿ ಬೆಂಗಳೂರನ್ನು ನಿರ್ಮಿಸಿದ್ದು, ಒಂದೊಂದು ಕಸುಬಿಗೆ ಒಂದೊಂದು ಜಾಗವನ್ನು ವಿಂಗಡಿಸಿರುವುದು ವಿಶೇಷವಾಗಿದೆ.

1940ರಲ್ಲಿ ಸಾಮಾನ್ಯ ಪಟ್ಟಣವಾಗಿದ್ದ ಬೆಂಗಳೂರು ಇಂದು ಏಷ್ಯಾದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣವಾದವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು. ನಗರದ ಅಭಿವೃದ್ಧಿಯ ಕುರಿತು ದೂರಾಲೋಚನೆ ಹೊಂದಿದ್ದ ಕೆಂಪೇಗೌಡರು ನಗರದ ನಾಲ್ಕು ದಿಕ್ಕುಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಿಸಿದ್ದರು.

ಅದನ್ನು ಮೀರಿ ಬೆಂಗಳೂರು ಬೆಳೆದಿದ್ದು, ಕೇವಲ 200 ಚದರ ಕಿ.ಮೀ. ವ್ಯಾಪ್ತಿಯಿಂದ ನಗರ ಇಂದು 800 ಚದರ ಕಿ.ಮೀ.ಗೆ ವ್ಯಾಪಿಸಿದ ಪರಿಣಾಮ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಹೇಳಿದರು.

Advertisement

ಚೆನ್ನೈ ಹೈಕೋರ್ಟ್‌ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್‌ ಮಾತನಾಡಿ, ಬೆಂಗಳೂರಿನ ಉಪನಗರಗಳೆಂದು ಘೋಷಿಸಿರುವ ನಗರಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸುವುದರಿಂದ ಬೆಂಗಳೂರಿನ ಸಂಚಾರ ದಟ್ಟಣೆ, ನೀರಿನ ಸಮಸ್ಯೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನೂತನ ಸಚಿವರು ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ, ಸಂಶೋಧಕ ಎಂ.ಜಿ.ನಾಗರಾಜು, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಎಲ್‌.ಎನ್‌.ಮುಕುಂದರಾಜು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎನ್‌.ಸತ್ಯಪ್ರಕಾಶ್‌, ನಾಡಪ್ರಭು ರಾಜ್ಯ ಒಕ್ಕಲಿಗರ ಕೇಂದ್ರದ ಅಧ್ಯಕ್ಷ ನಾಡಪ್ರಭು ಲಕ್ಕೇಗೌಡ ಸೇರಿದಂತೆ ಪ್ರಮುಖರಿಗೆ ಸನ್ಮಾನಿಸಲಾಯಿತು. 

ಬೆಂಗಳೂರನ್ನು ಎಷ್ಟು ಅಭಿವೃದ್ಧಿ ಮಾಡಬೇಕು?- ಪರಮೇಶ್ವರ್‌: ಬೆಂಗಳೂರನ್ನು ಇನ್ನೆಷ್ಟು ಅಭಿವೃದ್ಧಿ ಮಾಡಬೇಕು ಎಂಬ ದೊಡ್ಡ ಸವಾಲು ಮುಂದಿದ್ದು, ನಗರದ ಜನಸಂಖ್ಯೆ 1.30 ಕೋಟಿಗೆ ತಲುಪಿದೆ. ಜನಸಾಂದ್ರತೆಗೆ ಅನುಗುಣವಾಗಿ ಸಮಸ್ಯೆಗಳು ಸೃಷ್ಟಿಯಾಗಿತ್ತಿರುವುದರಿಂದ ತುಮಕೂರು, ಕೋಲಾರ, ರಾಮನಗರ ಸೇರಿದಂತೆ ಇತರೆ ನಗರಗಳ ಅಭಿವೃದ್ಧಿಗೊಳಿಸಲು ಚಿಂತಿಸಬೇಕಿದೆ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು. 

ನಗರದ ಜನಸಂಖ್ಯೆ ಹೆಚ್ಚುತ್ತಿದ್ದರೆ ಕಾವೇರಿ ನೀರು ಇನ್ನೆಷ್ಟು ತರಲು ಸಾಧ್ಯ? ಕಳೆದ ಬೇಸಿಗೆಯಲ್ಲಿಯೇ ಕಾವೇರಿ ನೀರಿನ ಕೊರತೆಯಿಂದ ಜನರು ತೊಂದರೆ ಅನುಭವಿಸುವಂತಾಗಿತ್ತು. ಒಂದೊಮ್ಮೆ ನಗರಕ್ಕೆ ಬರುವ ಕಾವೇರಿ ನೀರು ನಿಂತು ಹೋದರೆ, ಇಲ್ಲಿನ ಜನರ ಪರಿಸ್ಥಿತಿಯೇನು ಎಂಬುದನ್ನು ಯೋಚಿಸಿದರೆ, ಬೆಂಗಳೂರು ಅಭಿವೃದ್ಧಿಯ ಬದಲಿಗೆ ಪರ್ಯಾಯ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದರು. 

ಬಿಬಿಎಂಪಿ ವಿಭಜನೆ ಮಾಡದಂತೆ ಮನವಿ: ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರನ್ನು ವಿಭಜನೆ ಮಾಡಲು ಯಾವುದೇ ಕಾರಣಕ್ಕೂ ಸರ್ಕಾರ ಮುಂದಾಗಬಾರದು. ಆಡಳಿತದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ತರುವ ಮೂಲಕ ನಗರದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು, ವಿಭಜನೆಗೆ ಕ್ರಮ ಸರಿಯಲ್ಲ ಎಂದು ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿ ಶನಿವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮನವಿ ಪತ್ರ ಸಲ್ಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next