Advertisement
ಕಳೆದ 35 ವರ್ಷದಿಂದ ರಿಂಗ್ ರಸ್ತೆಯ 450 ಕ್ಕೂ ಹೆಚ್ಚು ಕುಟುಂಬಗಳು ಶಾಶ್ವತ ಪರಿಹಾರ ಕೋರಿ ಜನಪ್ರತಿನಿಧಿಗಳು, ಅಧಿಕಾರಿಗಳ ಮೊರೆ ಹೋಗುತ್ತಲೇ ಇದ್ದಾರೆ. ಮಾಡೋಣ…, ನೋಡೋಣ…, ಅನುಕೂಲ ಮಾಡಿಕೊಡುತ್ತೇವೆ… ಎಂಬ ಪುಂಖಾನುಪುಂಖ ಭರವಸೆಯ ಮಾತುಗಳಿಗೆ ಕೊರತೆ ಇಲ್ಲ. ಆದರೆ ಈ ಕ್ಷಣಕ್ಕೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.
1983ರಲ್ಲಿ ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿರ್ಮಾಣಗೊಂಡವು. ಆಗ ದಾವಣಗೆರೆ ಇಷ್ಟೊಂದು ಬೆಳೆದಿರಲಿಲ್ಲ, ರಿಂಗ್ ರಸ್ತೆ ನಿರ್ಮಾಣವಾಗಲಿದೆ ಎಂಬ ಪರಿಕಲ್ಪನೆಯೂ ಯಾರಿಗೂ ಇರಲಿಲ್ಲ. ಪ್ರಾರಂಭದಲ್ಲಿ 200-250 ಕುಟುಂಬಗಳು ಅಲ್ಲಲ್ಲಿ ಗುಡಿಸಲು, ಸಣ್ಣದಾಗಿ ಮನೆ ಕಟ್ಟಿಸಿಕೊಂಡು ಜೀವನ ನಡೆಸುತ್ತಿದ್ದವು. ದಾವಣಗೆರೆ ಬೆಳೆದಂತೆ ಬೇಡಿಕೆಯೂ ಹೆಚ್ಚಾದವು. ಅದರಲ್ಲಿ ರಿಂಗ್ ರಸ್ತೆಯೂ ಒಂದು. ರಿಂಗ್ ರಸ್ತೆಯ ಸಮೀಕ್ಷೆ ಕಾರ್ಯ ಪ್ರಾರಂಭವೂ ಆಯಿತು. ಶಾಮನೂರು ರಸ್ತೆ, ದೇವರಾಜ ಅರಸು ಬಡಾವಣೆಯ ದೂಡಾ ಕಚೇರಿ ಮುಂದೆ, ಈಗಿನ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಪಕ್ಕ.. ಹೀಗೆ ಸಾಗಿದ ರಿಂಗ್ ರಸ್ತೆ ಬಂದು ನಿಂತಿದ್ದು ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರಕ್ಕೆ.
Related Articles
Advertisement
“30-35 ವರ್ಷದಿಂದ ಜೀವ ಮಾಡ್ಕೊಂಡು ಬಂದೀವಿ. ಅದೇನೋ ರಿಂಗ್ ರಸ್ತೆ ಮಾಡ್ತೀವಿ. ನೀವು ಮನೆ ಬಿಡಬೇಕು. ಬೇರೆ ಕಡೆ ಹೋಗ್ಬೇಕು ಅಂತಾ ಹೇಳ್ತಾರೆ. ಒಂದೇ ಪಟ್ಟಿಗೆ ಎಲ್ಲನೂ ಬಿಟ್ಟು ಹೋಗಬೇಕು ಅಂದ್ರೆ ಹೆಂಗೆ. ಮಕ್ಳು-ಮರಿ ಕಟ್ಕೊಂಡು ಎಲ್ಲೋ ಹೋಗಿ ಜೀವಾ° ಮಾಡೋಕೆ ಆಗ್ತಾತಾ. ನಮ್ಮಂತೋರಿಗೆ ಎಲ್ಲಾದ್ರೂ ಜಾಗ ಮಾಡಿ, ಮನೆ ಕಟ್ಟಿಕೊಟ್ರೆ ಹೋಗ್ತಿವಿ. ಅದನ್ನ ಮಾಡೊಲ್ಲ. ಹೋಗ್ರಿ, ಹೋಗ್ರಿ ಅಂದ್ರೆ ಎಲ್ಲಿಗೆ ಹೋಗ್ಬೇಕು’… ಎಂದು ರಿಂಗ್ ರಸ್ತೆಯ ಬಶೀರ್ ಬಾಷಾ, ಮಹಬೂಬ್, ಅಬ್ದುಲ್ಲಾ… ಇತರರು ಪ್ರಶ್ನಿಸುತ್ತಾರೆ.
ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ರಿಂಗ್ ರಸ್ತೆಯಲ್ಲಿನ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಅಹೋರಾತ್ರಿ ಧರಣಿ, ಹೋರಾಟ ಮಾಡಲಾಗಿದೆ. ಆಶ್ರಯ ಸಮಿತಿ ಸ್ವಾಧೀನದಲ್ಲಿರುವ ಸರ್ವೇ ನಂಬರ್ 144/2 ರಲ್ಲಿನಜಮೀನಿನಲ್ಲಾಗಲಿ ಅಥವಾ ನಗರ ವ್ಯಾಪ್ತಿಯ ಬೇರೆ ಕಡೆ ಜಮೀನು ಗುರುತಿಸಿ, ಇಲ್ಲಿನ ಜನರನ್ನು ಸ್ಥಳಾಂತರಿಸಿ, ಶಾಶ್ವತ ಪರಿಹಾರ ಒದಗಿಸಬೇಕು ಎಂದು ಹೋರಾಟ ನಡೆಸಲಾಗುತ್ತಿದೆ ಎನ್ನುತ್ತಾರೆ ನಾಗರಿಕ ಮೂಲ ಸೌಕರ್ಯ ಹೋರಾಟ ವೇದಿಕೆ ಅಧ್ಯಕ್ಷ ಜೆ. ಅಮಾನುಲ್ಲಾಖಾನ್.
ವೇದಿಕೆಯಿಂದ ಹೋರಾಟ ತೀವ್ರಗೊಳಿಸಿದ್ದರ ಪರಿಣಾಮ ಎಸ್‌ಟಿಪಿ ಪಕ್ಕದ ಕ್ರೀಡಾಂಗಣದ ಸಮೀಪ 1 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅರ್ಧದಷ್ಟು ಶೆಡ್‌ಗಳ ತಗಡು ಹಾರಿ ಹೋಗಿವೆ. ಕೆಲವಾರು ಯಾವಾಗ ಬೇಕಾದರೂ ಬೀಳುವಂತಹ ಸ್ಥಿತಿಯಲ್ಲಿವೆ. ಮುಖ್ಯವಾಗಿ ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳೇ ಇಲ್ಲದ ಕಾರಣಕ್ಕೆ ಯಾರೂ ಸಹ ಅಲ್ಲಿಗೆ ಹೋಗುತ್ತಿಲ್ಲ. ಇಲ್ಲಿನ ಜನರು ಪ್ರತಿನಿತ್ಯ ಅನುಭವಿಸುವ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಒದಗಿಸುವುದೊಂದೇ ಸೂಕ್ತ ಪರಿಹಾರ ಎನ್ನುತ್ತಾರೆ ಅಮಾನುಲ್ಲಾ ಅಶೋಕ ನಗರದ ಸರ್ವೇ ನಂಬರ್ 144/2ಎ ರಲ್ಲಿ 5.36 ಎಕರೆ, ಬಾತಿ ಬಳಿ 41 ಎಕರೆ ಜಾಗದಲ್ಲಿ ಮನೆ ಕಟ್ಟಿಸಿಕೊಡುವ ಪ್ರಸ್ತಾವನೆಯೂ ಇದೆ. ಫಲಾನುಭವಿಗಳನ್ನು ಗುರುತಿಸುವ ಕಾರ್ಯವೂ ನಡೆದಿದೆ. ಪ್ರಸ್ತಾವನೆಯಂತೆ ಮನೆಗಳು ನಿರ್ಮಾಣಗೊಂಡು ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ರಿಂಗ್ ರಸ್ತೆಯಲ್ಲಿನ ನಿರಾಶ್ರಿತರು ಶಾಶ್ವತ ಪರಿಹಾರ ಕಂಡುಕೊಳ್ಳಲಿಕ್ಕೆ ಕನಿಷ್ಠ 1-2 ವರ್ಷವಾದರೂ ಬೇಕು. ಅಲ್ಲಿಯವರೆಗೆ ದಿನ ನಿತ್ಯ ಆತಂಕದಲ್ಲೇ ಕಾಲ ದೂಡಬೇಕಾಗಿದೆ. ರಾ. ರವಿಬಾಬು