ಕಾಳಗಿ: ವಿಧಾನ ಪರಿಷತ್ ಚುನಾವಣೆ ಯಲ್ಲಿ ಬಿ.ಜಿ ಪಾಟೀಲ ಗೆಲುವು ಸಾಧಿ ಸುತ್ತಾರೆ ಎನ್ನುವುದು ಕಾಂಗ್ರೆಸ್‌ರಿಗೂ ಗೊತ್ತಿದೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಚಿಂಚೋಳಿಗೆ ಬಂದಿದ್ದು ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಅವರನ್ನು ಗೆಲ್ಲಿಸಲು ಅಲ್ಲ. ಬದಲಾಗಿ ಶಾಸಕ ಡಾ| ಅವಿನಾಶ ಜಾಧವ ಮತು ನನ್ನ ಬಗ್ಗೆ ಅಪಪ್ರಚಾರ ಮಾಡಲು ಎಂದು ಸಂಸದ ಡಾ| ಉಮೇಶ ಜಾಧವ ಟೀಕಿಸಿದರು.
ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಶ್ರೀ ಡಾ| ರಾಮರಾವ್ ಮಹಾರಾಜರ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದೆವು. ಆದರೆ ಶಾಸಕ ಪ್ರಿಯಾಂಕ್ ಖರ್ಗೆ ಮನವಿಯಲ್ಲಿನ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ನನ್ನ ವಿರುದ್ಧ ಬಂಜಾರಾ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದರೂ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿ ಕಾರಿಯೊಬ್ಬ ವಿಮಾನ ನಿಲ್ದಾಣದಲ್ಲಿ ಸೇವಲಾಲ್ ಮರಿಯಮ್ಮ ದೇವಿ ಮಂದಿರ ಉರುಳಿಸಿ ಮೂರ್ತಿಗಳನ್ನು ಪುಡಿ ಮಾಡಿದ್ದರು. ಇದರಿಂದ ಬಂಜಾರಾ ಸಮುದಾಯದವರು ಪ್ರತಿಭಟನೆ ಮಾಡಿದ್ದರು.
ಈ ಘಟನೆಯನ್ನು ಲೋಕಸಭೆ ಗಮನಕ್ಕೆ ತಂದು ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಮಹಾರಾಜರ ಹೆಸರಿಡಬೇಕು. ಇದು ಬಂಜಾರಾ ಸಮುದಾಯದ ಭಾವನೆ ವಿಷಯ ಎಂದಿದ್ದೆ. ವಿಮಾನ ನಿಲ್ದಾಣಕ್ಕೆ ಬಸವಣ್ಣ ಅವರ ಹೆಸರು ಇಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ಸಂಸತ್‌ನಲ್ಲಿ ಎರಡು ಬಾರಿ ಪ್ರಯತ್ನಿಸಿದ್ದೇನೆ. ಆದರೆ ನೂರು ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿರುವ ಪ್ರಿಯಾಂಕ್ ಖರ್ಗೆ ಕೋಲಿ, ಕುರುಬ, ಲಿಂಗಾಯಿತ, ಬಂಜಾರಾ ಸಮುದಾಯವನ್ನು ನನ್ನ ವಿರುದ್ಧ ಎತ್ತಿ ಕಟ್ಟಿ ಸೋಲಿಸಲು ಬಂದಿದ್ದರು ಎಂದು ಆರೋಪಿಸಿದರು.
ಚಿಂಚೋಳಿ ಮತಕ್ಷೇತ್ರದಲ್ಲಿ ಶೇ.95ರಷ್ಟು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿಗಳು ಅ ಧಿಕಾರದಲ್ಲಿವೆ. ಆದರೆ ಪ್ರಿಯಾಂಕ್ ಖರ್ಗೆ ಅವರನ್ನು ಮೆಚ್ಚಿಸಲು ಸ್ಥಳೀಯ ನಾಯಕರು ಸುಳ್ಳು ಹೇಳುತ್ತಾ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಹಣವಂತ, ಗುಣವಂತ ಜತೆಗೆ ಜನರ ಬಗ್ಗೆ ಕಾಳಜಿ ಹೊಂದಿರುವ ಬಿಜೆಪಿ ಅಭ್ಯರ್ಥಿ ಬಿ.ಜಿ ಪಾಟೀಲ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿ ಸಲಿದ್ದಾರೆ ಎಂದು ಹೇಳಿದರು. ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಚುನಾವಣೆ ಬಂದಾಗಲೊಮ್ಮೆ ಅಪಪ್ರಚಾರ ಮಾಡುವಲ್ಲಿ ಕಾಂಗ್ರೆಸ್ಸಿಗರು ನಿಸ್ಸಿಮ್ಮರು. ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಯಾರೂ ಕಿವಿಗೊಡದೇ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರಿಗೆ ಮತಚಲಾಯಿಸಬೇಕು ಎಂದು ಕೋರಿದರು.
ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಮಾತನಾಡಿ 13ವಿಧಾನ ಸಭೆಗಳಿರುವ ವಿಶಾಲ ಕ್ಷೇತ್ರದಲ್ಲಿ ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ನನಗಿರುವ ಅನುದಾನದ ಇತಿಮಿತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನ್ನ ಅಭಿವೃದ್ಧಿ ಕೆಲಸ ಮೆಚ್ಚಿ ಪಕ್ಷ ಮತ್ತೂಮ್ಮೆ ಟಿಕೆಟ್ ನೀಡಿದೆ. ನೀವೆಲ್ಲರೂ ಆಶೀರ್ವದಿಸಿ ಎಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸುನೀಲ ವಲ್ಲಾÂಪುರೆ, ಮುಕುಂದ ದೇಶಪಾಂಡೆ, ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ಮಾತನಾಡಿದರು. ಬಿಜೆಪಿ ಮುಖಂಡರಾದ ಶಶಿಕಲಾ ಟೆಂಗಳಿ, ರಾಮಲಿಂಗರೆಡ್ಡಿ ದೇಶಮುಖ, ರೇವಣ ಸಿದ್ಧಪ್ಪ ಮಾಸ್ಟರ್ ಚಿಂಚೋಳಿ (ಎಚ್), ಮಲ್ಲಿನಾಥ ಪಾಟೀಲ ಕಾಳಗಿ, ಸಂತೋಷ ಜಾಧವ, ನಿಂಬೆಣಪ್ಪ ಮಂಗಲಗಿ, ಸಂತೋಷ ಪಾಟೀಲ ಮಂಗಲಗಿ, ರಾಮು ರಾಠೊಡ, ಜಗ ದೀಶ ಪಾಟೀಲ ರಾಜಾಪುರ, ಶ್ರೀಕಾಂತ ತಾಂಡೂರ, ಸಂಜುಕುಮಾರ ತೆಳಮನಿ ಮತ್ತಿತರರು ಇದ್ದರು. ಚಿಂಚೋಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೇಖರ ಪಾಟೀಲ ಕಾಳಗಿ ನಿರೂಪಿಸಿ, ವಂದಿಸಿದರು.