Advertisement
ಪ್ರಿಯ ಮಾಲತಿ,ನನಗೆ ನಿಮ್ಮ ಕುಟುಂಬ ಹೊಸತೇನಲ್ಲ. ನಾನು ನಿಮ್ಮ ತಂದೆ ಶೇಷಗಿರಿ ನಾಯಕ್ ನಡೆಸುತ್ತಿದ್ದ ಸಾಗರದ ಮಾರಿಗುಡಿಯ ಎದುರಿನ ಸಾಲಿನ ಮೂರನೇ ಜೈಹಿಂದ್ ಬೇಕರಿಗೆ ಸಾಗರದಲ್ಲಿ ಓದುತ್ತಿದ್ದಾಗ ಅಪರೂಪಕ್ಕಾದರೂ ಹೋಗಿ ಬನ್ಸ್ ತಗೊಂಡು ತಿನ್ನುತ್ತಿದ್ದೆ. ಆಗ ಬನ್ಸ್ ಬೆಲೆ ಆರು ಪೈಸೆ ಇತ್ತು. ಸಾಗರದಲ್ಲಿ ನಿಮ್ಮದೇ ಫೇಮಸ್ ಆಗಿರೋ ಬೇಕರಿ ಅಥವಾ ನಿಮ್ಮದೊಂದೇ ಬೇಕರಿ. ಬೇಕರಿಯಲ್ಲಿ ಸದಾ ಕಾರ್ಯತತ್ಪರರಾದ ಬಿಳಿ ಬಿಳಿಯಾಗಿದ್ದ ನಿಮ್ಮ ತಂದೆಯ ನೆನಪು ನನಗಿನ್ನೂ ಕಾಣಿಸುತ್ತದೆ.
Related Articles
Advertisement
ಆಮೇಲೆ ದಿಢೀರನೆ ನೀವು ಎಡಪಂಥೀಯ ರಂಗ ಚಳುವಳಿಯನ್ನು ಹುಟ್ಟುಹಾಕಿದ ಸಮುದಾಯದಲ್ಲಿ ಪ್ರಧಾನ ಪಾತ್ರ ವಹಿಸಿ ನಾಡಿನಾದ್ಯಂತ ಪರಿಚಯವಾದಿರಿ. ಮತ್ತೆ ನಮ್ಮ ಭೇಟಿಯಾದದ್ದು ಉಡುಪಿಯಲ್ಲಿ “ಬಂಡಾಯದ ಸಮಾವೇಶ’ದಲ್ಲಿ. ಆಗ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಇದೇ ಸೆಮಿನಾರ್‌ನಲ್ಲಿ ಬರಗೂರು, ಡಿ.ಆರ್. ನಾಗರಾಜ, ಪ್ರಸನ್ನರ ಭಾಷಣದ ಆವೇಶಗಳಿದ್ದವು. ಒಂದು ಸಂದರ್ಭದಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಕೋಪಾವಿಷ್ಟರಾದ ಪ್ರಸನ್ನ ಸಿಟ್ಟಿನಿಂದ ಎದ್ದಾಗ ಅವರನ್ನು ಕೈಹಿಡಿದು ಕೂರಿಸಿದಿರಿ.
ಆನಂತರ ಜೀವನಕ್ಕೆ ಸೆಡ್ಡು ಹೊಡೆದವರಂತೆ ಬೆಂಗಳೂರಲ್ಲೇ ನೆಲೆಸಿ ಏಕಾಂಗಿಯಾಗಿ ಸಿನೆಮಾ, ದೂರದರ್ಶನದ ಧಾರಾವಾಹಿಯಲ್ಲಿ ಮಿಂಚತೊಡಗಿದಿರಿ. ಬದುಕನ್ನು ಕಟ್ಟಿಕೊಳ್ಳುವ ಹೊಸ ಹುಮ್ಮಸ್ಸು ನಿಮ್ಮಲ್ಲಿತ್ತು. ರಾಷ್ಟ್ರೀಯ ನಾಟಕಶಾಲೆ (ಎನ್‌ಎಸ್ ಡಿ) ಪದವೀಧರೆಯೂ ಆಗಿ ರಂಗಭೂಮಿಯ ಹಿಡಿತ ಸಾಧಿಸಿದ್ದ ನಿಮಗೆ ಸಿನೆಮಾ, ಧಾರಾವಾಹಿ ಒಂದು ದೊಡ್ಡ ಸಂಗತಿಯಾಗಿರಲಿಲ್ಲ. ಹೀಗಾಗಿ, ಶಿವರಾಜಕುಮಾರ ಜೊತೆಯಲ್ಲಿ ಆಸೆಗೊಬ್ಬ ಮೀಸೆಗೊಬ್ಬ , ಮಾವನಿಗೆ ತಕ್ಕ ಅಳಿಯ, ಸವ್ಯಸಾಚಿ ಚಿತ್ರಗಳ ಜೊತೆಯಲ್ಲಿ ಮಾಲ್ಗುಡೀಸ್ (ಹಿಂದಿ ಮತ್ತು ಕನ್ನಡದಲ್ಲಿ) ಅಭಿನಯಿಸಿ ಖ್ಯಾತರಾದಿರಿ. ಆದರೆ, ನಿಮ್ಮ ಅಂತರಂಗ ಏಕಾಂತವನ್ನು ಬಯಸುತ್ತಿತ್ತು. ಏಕಾಂತದಲ್ಲಿ ಕುಳಿತು ಕೃತಿಗಳನ್ನು ರಚಿಸತೊಡಗಿದಿರಿ. ಬಲರಾಜ ಸಹಾನಿ ಬಗ್ಗೆ , ಸೀತಾಚರಿತ, ಭೀಮ ಕಥಾನಕ, ಪೂಲನ್‌ದೇವಿ, ಹೊಸದಿಕ್ಕು (ನಾಟಕದ ಬಗ್ಗೆ ಪಠ್ಯಪುಸ್ತಕ ರೀತಿಯಲ್ಲಿ) ಹೀಗೆ ಹಿಂದಿ ಪರಿಣತರಾದ ನೀವು ಅನೇಕ ಕಥಾ ಪುಸ್ತಕಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಗಾಗಿ ಕನ್ನಡಕ್ಕೆ ಭಾಷಾಂತರಿಸಿಕೊಟ್ಟಿರಿ. ಒಟ್ಟು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿರಿ. ನಿಮ್ಮ ಪುಸ್ತಕ ಗಾಂಧಿ- ಒಂದು ಬೆಳಕು ಮುದ್ರಿತವಾಗಿ ನವಕರ್ನಾಟಕದವರಿಂದ ಕೊರಿಯರ್ ಬಂದಾಗ ನೀವು ಇರಲಿಲ್ಲ- ಶವಯಾತ್ರೆ ಶುರುವಾಗಿಬಿಟ್ಟಿತ್ತು! ನಿಮ್ಮ ಸ್ವಪ್ನ ಸಾರಸ್ವತ (ಗೋಪಾಲಕೃಷ್ಣ ಪೈ ಅವರ ಕಾದಂಬರಿಯ ನಾಟಕ ರೂಪ)ಕ್ಕೆ ಕರ್ನಾಟಕ ಸಂಘದ ಕೆ. ವಿ. ಸುಬ್ಬಣ್ಣ ಪ್ರಶಸ್ತಿ ಬಂತು. ಕರ್ನಾಟಕದ ಉದ್ದಗಲಕ್ಕೂ ಪ್ರಯಾಣಿಸಿ ಯಯಾತಿ, ಸೀತಾಚರಿತ, ಗಾಂಧಿ ಒಂದು ಬೆಳಕು, ಭೀಮ ಕಥಾನಕ, ವಾಸಂತಿ, ಮೀಡಿಯಾ, ಈಡಿಪಸ್, ಮ್ಯಾಕ್‌ಬೆತ್… ನಾಟಕಗಳನ್ನು ನಿರ್ದೇಶನ ಮಾಡಿ ಇಡೀ ರಂಗ ಚಳುವಳಿಯನ್ನು ಬೆಳೆಸಿದಿರಿ. ನಾನು ಬರೆದ ರೂಪಾಂತರ ನಾಟಕವನ್ನು ಮೂಡುಬಿದಿರೆ, ಕಾರ್ಕಳದಲ್ಲಿ ನಿರ್ದೇಶಿಸಿ ದೂರದರ್ಶನದಲ್ಲಿ ನಿರಂತರ ಪ್ರಸಾರವಾಗಿದ್ದನ್ನು ನಾನು ಹೇಗೆ ಮರೆಯಲಿ?
ಲೋಕಾಂತ ಸಾಕು ಏಕಾಂತ ಬೇಕೆನ್ನಿಸಿತೇನೋ ಪುನಃ ಸಾಗರಕ್ಕೆ ಹೋಗಿ, ನಿಮ್ಮ ಕುಟುಂಬದವರ ಜೊತೆಯಲ್ಲಿದ್ದಿರಿ. ಸಜ್ಜನ, ಪ್ರತಿಭಾವಂತ, ಮೃದುಭಾಷಿ ಪುರುಷೋತ್ತಮ ತಲವಾಟ ರನ್ನು ಮದುವೆಯಾಗಿ ನೆಮ್ಮದಿಯನ್ನು ಕಂಡಿರಿ. ಏಕಾಂತಕ್ಕೆ ಹೋದಾಗ ಲೋಕಾಂತದ ಬಗ್ಗೆಯೂ, ಲೋಕಾಂತಕ್ಕೆ ಹೋದಾಗ ಏಕಾಂತದ ಬಗ್ಗೆಯೂ ಪಟಪಟಿಸಿದ ನಿಮ್ಮ ಮನಸ್ಸು ಸಿಗರೇಟು ಸುಟ್ಟಂತೆ ಸುಡುತ್ತಿತ್ತು ಎಂದೇ ನನಗನ್ನಿಸುತ್ತದೆ.
ಈಗ ಎಲ್ಲಾ ಮುಗಿದ ಮೇಲೆ- ಸಾಗರಕ್ಕೆ ಬಂದಾಗಲೆಲ್ಲ ನಿಮ್ಮ ಮನೆಗೆ ಫೋನು ಮಾಡಿದಾಗ “ಹೇ ಮಾವಿನಕುಳಿ, ಯಾವಾಗ ಬಂದಿರಿ. ಊಟಕ್ಕೆ ಬನ್ನಿ, ನೀವು ಕೊಟ್ಟ ಹಲಸಿನ ಕಾಯಿ ತುಂಬಾ ಚೆನ್ನಾಗಿತ್ತು, ಹಣ್ಣುಮಾಡಿ ಮನೆಯವ ರೆಲ್ಲ ತಿಂದೆವು’ ಎಂಬ ಅಕ್ಕರೆಯ, ಪ್ರೀತಿ-ವಾತ್ಸಲ್ಯದ ಧ್ವನಿ ಎಲ್ಲಿ? ಕಳೆದು ಹೋಯಿತಲ್ಲ… ಮರೆಯಾಗಿ ಬಿಟ್ಟೆಯಲ್ಲ.
ಜಯಪ್ರಕಾಶ ಮಾವಿನಕುಳಿ