Advertisement

ತಿರುಗೇಟು ಕೊಟ್ಟ ಕಾಪಿ!

09:22 AM Jul 25, 2017 | |

ಪ್ರಥಮ ವರ್ಷದ ಪಿ. ಯು. ಪರೀಕ್ಷೆಯ ದಿನ. ಕನ್ನಡ ಪರೀಕ್ಷೆ ಅಂತ ಅಂದುಕೊಂಡು ಕವಿ ಪರಿಚಯ, ಗದ್ಯ- ಪದ್ಯವನ್ನು ಬಾಯಿಪಾಠ ಮಾಡಿಕೊಂಡು ಈ ಸಲ ನಾನೇ ಕ್ಲಾಸಿಗೆ ಫ‌ಸ್ಟು ಅಂತೆಲ್ಲ ಕನಸು ಕಾಣುತ್ತ ಕ್ಲಾಸಿಗೆ ಬಂದೆ. ಕಾಲೇಜಿನಲ್ಲಿ ಎಲ್ಲರೂ ಪುಸ್ತಕ ಓದುತ್ತಾ ಬಿಝಿಯಾಗಿದ್ದರೆ ಕೆಲವು ಹುಡುಗರು ಇಂಗ್ಲೀಷ್‌ ಪುಸ್ತಕ ಹಿಡಿದು ಆ ಕಡೆಗೊಮ್ಮೆ ಈ ಕಡೆಗೊಮ್ಮೆ ನಡೆದಾಡುತ್ತಿದ್ದರು. ಪರೀಕ್ಷೆಗಳು ಇವತ್ತು ಬರುತ್ತೆ ನಾಳೆ ಹೋಗುತ್ತೆ ಅಂತ ಅಂದುಕೊಂಡು ಅದನ್ನು ಅಷ್ಟೊಂದು ಆಳವಾಗಿ ತೆಗೆಯದಿರುತ್ತಿದ್ದ ಕ್ಲಾಸಿನ ಹುಡುಗರ ಕೈಯಲ್ಲಿ ಇಂಗ್ಲೀಷ್‌ ಪಾಠ ಪುಸ್ತಕ ನೋಡಿ ಬೆರಗಾದದ್ದು ನಿಜ. ಇರೋದು ಕನ್ನಡ ಪರೀಕ್ಷೆ. ಇವರ್ಯಾಕೆ ಇಂಗ್ಲೀಷ್‌ ಬುಕ್‌ ಹಿಡ್ಕೊಂಡಿದ್ದಾರೆ ಎಂದು ಯೋಚಿಸುತ್ತಿದ್ದಾಗಲೇ ನನ್ನ ಹೆಗಲು ತಟ್ಟಿದ ಗೆಳತಿ ಶ್ರೀಜಾ, “ಲೇಯ…,  ಇವತ್ತು ಇಂಗ್ಲೀಷ್‌ ಪರೀಕ್ಷೆ, ಕನ್ನಡ ನಾಳೆ’ ಎಂದಳು. ಉಳಿದ ಐದು ನಿಮಿಷದಲ್ಲಿ ಯಾರದೋ ಪುಸ್ತಕ ತೆಗೆದು ಅರ್ಥವಾಗದಂತೆ ಗಡಿಬಿಡಿಯಲ್ಲಿ ಓದಿದೆ.

Advertisement

ಪರೀಕ್ಷಾ ಕೊಠಡಿ ಹಾಗು ಇಂಗ್ಲೀಷ್‌ ಮೇಷ್ಟ್ರ ಮುಖ ಆ ಕ್ಷಣದಲ್ಲಿ ಭಯಾನಕವಾಗಿ ಕಾಣುತ್ತಿತ್ತು! ಅಷ್ಟೊತ್ತಿಗೆ ನಾನು ನನ್ನ ಶತ್ರು ಅಂತ ಹೇಳುತ್ತಿದ್ದ ಒಬ್ಬಳು ನನ್ನ ಪಕ್ಕದಲ್ಲೇ ಬಂದು ಕುಳಿತುಕೊಳ್ಳಬೇಕಾ? ನನಗೆ ಸಹಾಯ ಮಾಡುವಂತೆ ತುಸು ಹಿಂಜರಿಯುವಿಕೆಯಿಂದಲೇ ಅವಳನ್ನು ಕೇಳಿದೆ. ಅವಳು ಬರೆದ ಉತ್ತರಪತ್ರಿಕೆಯನ್ನು ತೋರಿಸಲು ಒಪ್ಪಿದಳು. ನನ್ನ ಕೆಲಸ ಅದನ್ನು ನೋಡಿ ಬರೆಯುವುದೊಂದೇ ಆಗಿತ್ತು. ಅಷ್ಟೊತ್ತಿಗೆ ಹೊರಗಡೆ ನಿಂತಿದ್ದ ಲೆಕ್ಚರರ್‌ ಬಂದು ನಮ್ಮಿಬ್ಬರ ಮುಖ ನೋಡಿ ಬೈಯಲು ರೆಡಿಯಾಗುವಾಗ ಉತ್ತರಪತ್ರಿಕೆ ತೋರಿಸಿದವಳು- “ಸಾರ್‌, ಇವಳು ನನ್ನಲ್ಲಿ ಉತ್ತರ ಪತ್ರಿಕೆಯನ್ನು ತೋರಿಸಲು ಹೇಳಿದ್ದಳು’ ಅಂತ ಹೇಳಿಬಿಟ್ಟಳು. ಶತ್ರುವಾಗಿದ್ದವಳು ಮಿತ್ರಳಾದಳು ಅಂತ ಅಂದುಕೊಂಡಿದ್ದೆ ಸ್ವಲ್ಪಹೊತ್ತಿಗೆ ಮುಂಚೆ. ಯಾವಾಗ ನನ್ನನ್ನು ಹಿಡಿದುಕೊಟ್ಟಳ್ಳೋ, ಆವಾಗ ಅವಳು ಮತ್ತೆ ಶತ್ರುವಾದಳು!

ಶೋಭಿತಾ ಮಿಂಚಿಪದವು, ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next