ಕೆಂಭಾವಿ: ಪಟ್ಟಣದಲ್ಲಿ ಮಂಗಳವಾರ ಮತ್ತೆ ಹಿಜಾಬ್ ವಿವಾದ ಭುಗಿಲೆದಿದ್ದು, ಕಾಲೇಜಿನ ಪ್ರಾಚಾರ್ಯರೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಘಟನೆ ಜರುಗಿದೆ.
ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಪ್ರಥಮ ಸೆಮಿಸ್ಟರ್‌ನ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ ನಾಲ್ವರು ವಿದ್ಯಾರ್ಥಿನಿಯರಿಗೆ ಮೊದಲು ಪ್ರವೇಶ ನಿರಾಕರಿಸಲಾಯಿತು.
ಪರೀಕ್ಷೆ ಪ್ರಾರಂಭವಾಗುವ ಮುಂಚೆ ಕಾಲೇಜಿನ ಪ್ರಾಚಾರ್ಯ ಎಚ್. ಎಂ. ವಗ್ಗಾರ್ ವಿದ್ಯಾರ್ಥಿನಿಯರಿಗೆ ನ್ಯಾಯಾಲಯದ ಆದೇಶದ ಬಗ್ಗೆ ತಿಳಿಹೇಳಿ ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು. ಈ ಮಧ್ಯೆ ವಿದ್ಯಾರ್ಥಿನಿಯರು, ಅವರ ಸಂಬಂಧಿಕರು ಮತ್ತು ಪ್ರಾಚಾರ್ಯರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು.
ಈ ಮಧ್ಯೆ ಪ್ರಾಚಾರ್ಯರು ಮತ್ತು ಬೇರೆ ಕಾಲೇಜಿನಿಂದ ಬಂದ ಪರೀಕ್ಷಾ ಮೇಲ್ವಿಚಾರಕರ ಮಧ್ಯೆ ಕೆಲಕಾಲ ನಾಟಕೀಯ ಬೆಳವಣಿಗೆಗಳು ನಡೆದು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು. ನಂತರ ಘಟನೆ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಈ ಬಗ್ಗೆ ಪ್ರಾಚಾರ್ಯರನ್ನು ಪ್ರಶ್ನಿಸಿದಾಗ ವಿದ್ಯಾರ್ಥಿನಿಯರು ಪರೀಕ್ಷೆ ಬರೆದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ಈ ಕುರಿತು ಪರೀಕ್ಷಾ ಮೇಲ್ವಿಚಾರಕರನ್ನು ಮಾಧ್ಯಮದವರು ವಿಚಾರಿಸಿದಾಗ ಮಾನವೀಯತೆ ದೃಷ್ಟಿಯಿಂದ ವಿದ್ಯಾರ್ಥಿನಿಯರಿಂದ ಕಾಲೇಜಿನ ಅಧಿಕೃತ ಪತ್ರ ಪಡೆದು ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು ಎಂದರು.
ಪ್ರಶ್ನೆ ಪತ್ರಿಕೆ ನೀಡಿದ ಒಂದು ಗಂಟೆ ನಂತರ ಪರೀಕ್ಷಾ ಕೋಣೆಗೆ ಆಗಮಿಸಿದ ಪ್ರಾಚಾರ್ಯರು ವಿದ್ಯಾರ್ಥಿನಿಯರಿಗೆ ನೀಡಿದ್ದ ಎಲ್ಲ ಪ್ರಶ್ನೆ ಪತ್ರಿಕೆ ವಾಪಸ್ ಪಡೆದರು. ನಂತರ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಸ್ ಮನೆಗೆ ತೆರಳಿದರು
ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆದ ಬಗ್ಗೆ ಮೊದಲು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರೀಕ್ಷಾ ಮೇಲ್ವಿಚಾರಕರೇ ಹೊಣೆಗಾರರಾಗಿದ್ದು, ನಂತರ ಈ ಬಗ್ಗೆ ತಿಳಿದು ವಿದ್ಯಾರ್ಥಿನಿಯರಿಗೆ ನೀಡಿದ್ದ ಪ್ರಶ್ನೆ ಪತ್ರಿಕೆ ವಾಪಸ್ ಪಡೆಯಲಾಗಿದೆ.
-ಎಚ್.ಎಂ. ವಗ್ಗಾರ್, ಪ್ರಾಚಾರ್ಯ