Advertisement

ಬಂಗಾರಕ್ಕಿಂತ ಬರವಣಿಗೆ ಅಂದರೆ ಪ್ರೀತಿ

12:54 AM Jun 03, 2019 | Lakshmi GovindaRaj |

ಬೆಂಗಳೂರು: ಶಾನುಭೋಗರು ಬಳಸುವ ಡೆಸ್ಕ್ ಮತ್ತು ಬಿಳಿ ಹಾಳೆ ಮೇಲಿನ ಬರವಣಿಗೆ ನನಗಿಷ್ಟ. ಒಡವೆ, ಬಂಗಾರಕ್ಕಿಂತಲೂ ಬರವಣಿಗೆ ಅಂದರೆ ನನಗೆ ಪ್ರೀತಿ ಎಂದು ಸಾಹಿತಿ ಡಾ.ಸುಧಾ ಮೂರ್ತಿ ಅಭಿಪ್ರಾಯಪಟ್ಟರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಕರ್ನಾಟಕ ಲೇಖಕಿಯರ ಸಂಘ ನೀಡುವ 2019ನೇ ಸಾಲಿನ “ಅನುಪಮಾ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಸೇವೆಗಾಗಿ ನನಗೆ ಹಲವು ಕಡೆಗಳಲ್ಲಿ ಸನ್ಮಾನಗಳು ದೊರೆತಿವೆ. ಆದರೆ ಕನ್ನಡಿಗರು ಸನ್ಮಾನಿಸಿದಾಗ ಆಗುವ ಖುಷಿ, ಸಂತೋಷ ಹೇಳಲಾಗದು ಎಂದರು.

ಕನ್ನಡ ಸೇರಿದಂತೆ ದೇಶ-ವಿದೇಶದಾದ್ಯಂತ ನನ್ನ ಪುಸ್ತಕದ ಓದುಗರು ಇದ್ದಾರೆ. ಇಂಗ್ಲಿಷ್‌ನಲ್ಲಿ ನಾನು ಪುಸ್ತಕ ಬರೆದರೆ ಕೇಲವೆ ದಿನಗಳಲ್ಲಿ 13 ಭಾಷೆಗಳಿಗೆ ಭಾಷಾಂತರವಾಗುತ್ತದೆ. ಆದರೆ ತಾಯಿ ಭಾಷೆ ಕನ್ನಡದಲ್ಲಿ ಬರೆದಷ್ಟು ಖುಷಿ, ಇಂಗ್ಲಿಷ್‌ ಬರವಣಿಗೆಯಲ್ಲಿ ಸಿಗುವುದಿಲ್ಲ. ತಾಯಿ ಭಾಷೆ ಹೃದಯದ ಭಾಷೆಯಾಗಿದೆ. ಆಂಗ್ಲ ಭಾಷೆಗಿಂತ ಕನ್ನಡ ಭಾಷೆ ಅಂದರೆ ನನಗೆ ಎಲ್ಲಿಲ್ಲದ ಅಕ್ಕರೆ ಎಂದು ಹೇಳಿದರು.

ಲೇಖಕರಿಗೆ ಲಾಭ-ನಷ್ಟದ ಬಗ್ಗೆ ಅರಿವಿರುವುದಿಲ್ಲ.ಹೃದಯದ ಭಾವನೆ ಮಾತನಾಡಿದಾಗ ಆ ಭಾವನೆಗೆ ನಮಗಿಷ್ಟವಾದ ರೀತಿಯಲ್ಲಿ ಜೀವ ನೀಡಬೇಕು. ಅಂತಹ ಸಾಹಿತ್ಯ ಓದುಗರನ್ನು ಬೇಗ ತಲುಪುತ್ತದೆ. ಕಥೆ, ಕಾದಂಬರಿಯಲ್ಲಿ ಬರುವ ಪಾತ್ರಗಳು ತಮ್ಮ ಪಾತ್ರಗಳೇ ಎಂದು ಕೊಂಡು ಓದುಗರು ಓದಿನಲ್ಲಿ ಮುಳುಗತ್ತಾರೆ ಎಂದರು.

ಶಾಲಾ-ಕಾಲೇಜು ದಿನಗಳಲ್ಲೇ ಅನುಪಮಾ ನಿರಂಜನ ಅವರ ಕಾದಂಬರಿಗಳನ್ನು ಓದುತ್ತಿದ್ದೆ. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಕಾದಂಬರಿಗಳು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ನನ್ನ ನೆಚ್ಚಿನ ಕಾದಂಬರಿಗಾರ್ತಿ ಹೆಸರಿನಲ್ಲಿ ದೊರೆತಿರುವ ಪ್ರಶಸ್ತಿ, ಎಲ್ಲಾ ಪ್ರಶಸ್ತಿಗಳಿಗಿಂತಲೂ ದೊಡ್ಡದು ಎಂದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಮಾತನಾಡಿ, ಸುಧಾಮೂರ್ತಿ ಅವರನ್ನು ಹಲವು ವರ್ಷಗಳಿಂದ ಬಲ್ಲೆ.ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದರೂ ಅವರಲ್ಲಿರುವ ಸರಳತನ ನಮಗೆ ಮಾದರಿ ಎಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಸುಧಾಮೂರ್ತಿ ಅವರನ್ನು ಗೌರವಿಸುವುದೇ ಒಂದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು. ಕವಯಿತ್ರಿ ಡಾ.ಟಿ.ಸಿ.ಪೂರ್ಣಿಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next