Advertisement
ಬರೆ ಜರಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಗುಡ್ಡದ ಮೇಲ್ಭಾಗ ಗಿರಿಜಾ ಅವರ ಮನೆಯಿದ್ದು, ಇಬ್ಬರು ಹೆಣ್ಣುಮಕ್ಕಳ ಜತೆ ಅವರು ವಾಸ್ತವ್ಯವಿದ್ದಾರೆ. ಮನೆಯ ಮುಂಭಾಗದಲ್ಲೇ ಗುಡ್ಡ ಕುಸಿದಿದೆ. ಈ ಕುಸಿತದಿಂದ ಮನೆಗೆ ಹಾನಿ ಆಗಿಲ್ಲವಾದರೂ ಮಳೆ ಹೆಚ್ಚಾಗಿ ಇನ್ನಷ್ಟು ಕುಸಿತ ಸಂಭವಿಸಿದರೆ ಸಮಸ್ಯೆ ಸೃಷ್ಟಿಯಾಗಲಿದೆ. ಮಹಿಳೆ ಮತ್ತು ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇರುವ ಕುಟುಂಬ ಈಗ ಆತಂಕಕ್ಕೆ ಒಳಗಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಸುಬ್ರಹ್ಮಣ್ಯ -ಮಂಜೇಶ್ವರ ರಸ್ತೆ ಪರ್ವತಮುಖೀ ಬಳಿ ಹಾದು ಹೋಗುತ್ತಿದೆ. ಗುಡ್ಡದ ಮೇಲಿರುವ ಮರಗಳ ಬುಡದಲ್ಲಿ ಮಣ್ಣಿನ ಸವಕಳಿಯಾಗಿ ಉರುಳಲು ಸಿದ್ಧವಾಗಿವೆ. ರಸ್ತೆ ಬದಿ ಗುಡ್ಡ ಜರಿದು ಅಪಾಯವಾಗುತ್ತಿದೆ. ಈ ಕುರಿತು ಆ. 25ರಂದು ಸುದಿನದಲ್ಲಿ ವರದಿ ಪ್ರಕಟಗೊಂಡಿತ್ತು. ಆದರೂ ಗುಡ್ಡ, ಮರಗಳಿಂದ ಆಗುವ ಅಪಾಯ ನಿವಾರಿಸಲು ಅಧಿಕಾರಿಗಳು ಪ್ರಯತ್ನಿಸಿಲ್ಲ. ಈಗ ಇಲ್ಲೇ ಗುಡ್ಡ ಜರಿಯಲಾರಂಭಿಸಿದೆ. ಇನ್ನಾದರೂ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪರ್ಯಾಯ ವ್ಯವಸ್ಥೆಗೆ ಮನವಿ
ಮಳೆಗೆ ಮತ್ತಷ್ಟೂ ಈ ಗುಡ್ಡ ಜರಿದಲ್ಲಿ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಳ್ಳುವುದಲ್ಲದೆ ಗುಡ್ಡದ ಮೇಲೆ ವಾಸವಿರುವ ಕುಟುಂಬ ತೊಂದರೆಗೆ ಒಳಗಾಗಲಿದೆ. ಈ ಬಡ ಕುಟುಂಬವನ್ನು ಸ್ಥಳಾಂತರಿಸಿ ಪರ್ಯಾಯ ಮನೆ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆಗೆ ಹಕ್ಕುಪತ್ರ ಇಲ್ಲದೆ ಎಲ್ಲ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ನಮಗೆ ಬೇರೆಡೆ ಮನೆ ಒದಗಿಸುವಂತೆ ನೊಂದ ಮಹಿಳೆ ಗಿರಿಜಾ ಅವರು ಮನವಿ ಮಾಡಿಕೊಂಡಿದ್ದಾರೆ.