Advertisement

ಕೇಂದ್ರ ಸರ್ಕಾರದಿಂದ ಬಡವರ ಹೊಟ್ಟೆಗೆ ಬರೆ

03:21 PM Nov 10, 2018 | Team Udayavani |

ಬಳ್ಳಾರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 500, 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ನ.8ಕ್ಕೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಸಮಿತಿ ಪದಾಧಿಕಾರಿಗಳು ಕರಾಳದಿನವನ್ನಾಗಿ ಆಚರಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು. ನಂತರ ರಾಯಲ್‌ ವೃತ್ತದ ಬಳಿ ಜಮಾಯಿಸಿ ಕೇಂದ್ರ ಸರ್ಕಾರ ವಿರುದ್ಧ ವಿವಿಧ ಘೋಷಣೆ ಕೂಗಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಕೇಂದ್ರ ಸರ್ಕಾರ ಕಳೆದ 2016 ನ.8 ರಂದು 500 ಹಾಗೂ 1000 ರೂ. ಮುಖಬೆಲೆಯ ನೋಟ್‌ ಗಳನ್ನು ಅಮಾನ್ಯಗೊಳಿಸಿದ್ದರು. ಇದರಿಂದ ಸಾಮಾನ್ಯ ಜನರು ಎಟಿಎಂಗಳಲ್ಲಿ ಹಣ ದೊರೆಯದೆ, ಹೊಸದಾಗಿ ಬಿಡುಗಡೆಗೊಳಿಸಿದ್ದ 2000 ರೂ. ನೋಟಿಗೆ ಚಿಲ್ಲರೆ ದೊರೆಯದೆ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಯಿತು. 

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಎಲ್ಲ ವರ್ಗದ ಜನರು ಪರದಾಡುವಂತಾಗಿತ್ತು. ವಿಶೇಷವಾಗಿ ಗ್ರಾಮೀಣ ಭಾಗದ ಜನರು ಚಿಲ್ಲರೆಗಾಗಿ ನಿತ್ಯ ಹರಸಹಾಸ ಪಡುವಂತಾಗಿತ್ತು. ಈ ಕುರಿತು ಕಾಂಗ್ರೆಸ್‌ ಆಶ್ರಯದಲ್ಲಿ ಇಲ್ಲಿಯವರೆಗೆ ಸಾಕಷ್ಟು ಬಾರಿ ಕೇಂದ್ರ ಸರ್ಕಾರದ ಜನವಿರೋಧಿ ನಡೆ ವಿರುದ್ಧ ಪ್ರತಿಭಟನೆ ನಡೆಸಿದರೂ ಕ್ರಮವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್‌. ಆಂಜಿನೇಯಲು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಿತ್ಯ ಪೆಟ್ರೋಲ್‌, ಡಿಸೇಲ್‌ ಬೆಲೆಗಳು ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರು ಪರದಾಡುವಂತಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಬಡ ಜನರ ಜೀವನ ದುಸ್ತರವಾಗಿದೆ. ಈ ಕುರಿತು ಸರ್ಕಾರದ ಗಮನ ಸೆಲೆದರೂ ಡಿಸೇಲ್‌ ಹಾಗೂ ಪೆಟ್ರೋಲ್‌ ಬೆಲೆ ಕಡಿಮೆ ಮಾಡಲು ಮುಂದಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Advertisement

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ ದುಪ್ಪಟ್ಟಾಗಿದ್ದು, ಸಾಮಾನ್ಯ ಜನರು ಹೈರಾಣರಾಗಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಚ್ಚೆ ದಿನ್‌ ಆನೆವಾಲಾ ಹೈ ಎಂದು ಸ್ವಲ್ಪ ದಿನ ನನಗೆ ಸಹಕರಿಸಿ ಎಂದು ಪ್ರಧಾನಿ ಮೋದಿ ಜನರಿಗೆ ನೀಡಿದ ಭರವಸೆ ಹುಸಿಯಾಗಿದೆ. ಇಲ್ಲಿಯವರೆಗೆ ಯಾವ ಅಚ್ಚೆ ದಿನಗಳೂ ಬರಲಿಲ್ಲ. ಮೋದಿ ಸರ್ಕಾರ ಬಂದಾಗಿನಿಂದಲೂ ಇಲ್ಲಿಯವರೆಗೆ ಕಳೆದ ದಿನಗಳೆಲ್ಲವೂ ಕೆಟ್ಟ ದಿನಗಳಾಗಿವೆ ಎಂದು ದೂರಿದರು.

ದೇಶದ ಪ್ರಬುದ್ಧ ಜನರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದು, ಕಾಂಗ್ರೆಸ್‌ಗೆ ಬೆಂಬಲಿಸುವ ವಿಶ್ವಾಸವಿದೆ. ಮೋದಿ ಎಷ್ಟೇ ಹರಸಹಾಸಪಟ್ಟರೂ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಮಹಮ್ಮದ್‌ ರಫಿಕ್‌, ಬಳ್ಳಾರಿ ನಗರದ ಸಮಿತಿ ಅಧ್ಯಕ್ಷ ವಿಷ್ಣುವರ್ಧನ ಬೋಯಪಾಟಿ, ಯುವ ಮುಖಂಡರಾದ ವೆಂಕಟೇಶ್‌ ಹೆಗ್ಡೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪದ್ಮಾವತಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಕಳೆದ 2016 ನ.8 ರಂದು 500 ಹಾಗೂ 1000 ರೂ. ಮುಖಬೆಲೆಯ ನೋಟ್‌ಗಳನ್ನು ಅಮಾನ್ಯಗೊಳಿಸಿದ್ದರು. ಇದರಿಂದ ಸಾಮಾನ್ಯ ಜನರು ಎಟಿಎಂಗಳಲ್ಲಿ ಹಣ ದೊರೆಯದೆ, ಹೊಸದಾಗಿ ಬಿಡುಗಡೆಗೊಳಿಸಿದ್ದ 2000 ರೂ. ನೋಟಿಗೆ ಚಿಲ್ಲರೆ ದೊರೆಯದೆ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಯಿತು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಎಲ್ಲ ವರ್ಗದ ಜನರು ಪರದಾಡುವಂತಾಗಿತ್ತು.
 ಬಿ.ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next