ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಗಾಯದ ಸಮಸ್ಯೆ ಉಲ್ಬಣಿಸಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್, ನಾಯಕನ ಫಾ ಡು ಪ್ಲೆಸಿಸ್ ಬಳಿಕ ಈಗ ಓಪನರ್ ಕಂ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಸರದಿ. ಮಣಿಗಂಣಿನ ನೋವಿನಿಂದಾಗಿ ಅವರು ಭಾರತದೆದುರಿನ ಉಳಿದ ಏಕದಿನ ಪಂದ್ಯ ಹಾಗೂ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು “ಕ್ರಿಕೆಟ್ ಸೌತ್ ಆಫ್ರಿಕಾ’ ತಿಳಿಸಿದೆ.
“ರವಿವಾರ ನಡೆದ ದ್ವಿತೀಯ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಡಿ ಕಾಕ್ ಎಡಗೈ ಮಣಿಗಂಟಿನ ನೋವಿಗೆ ಒಳಗಾಗಿದ್ದಾರೆ. ವಿಪರೀತ ನೋವಿನ ಕಾರಣ ಅವರ ಚೇತರಿಕೆಗೆ ಎರಡರಿಂದ 4 ವಾರ ತಗಲುತ್ತದೆ. ಹೀಗಾಗಿ ಭಾರತದೆದುರಿನ ಉಳಿದ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ’ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮ್ಯಾನೇಜರ್ ಮೊಹಮ್ಮದ್ ಮೂಸಾಜಿ ಹೇಳಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಸರಣಿಗೆ ಡಿ ಕಾಕ್ ಲಭ್ಯರಾಗುವ ಸಾಧ್ಯತೆ ಇದೆ.
ಕ್ವಿಂಟನ್ ಡಿ ಕಾಕ್ ಗೈರಲ್ಲಿ ಹೆನ್ರಿಕ್ ಕ್ಲಾಸೆನ್ ಕೀಪಿಂಗ್ ನಡೆಸಲಿದ್ದಾರೆ. ಇದರೊಂದಿಗೆ ಕ್ಲಾಸೆನ್‌ಗೆ ಏಕದಿನ ಪಾದಾರ್ಪಣೆಯ ಅವಕಾಶ ಲಭಿಸಲಿದೆ. ಏಕದಿನ ಸರಣಿಯ 3ನೇ ಪಂದ್ಯ ಬುಧವಾರ ಕೇಪ್‌ಟೌನ್‌ನಲ್ಲಿ ನಡೆಯಲಿದೆ.
6 ಪಂದ್ಯಗಳ ಸುದೀರ್ಘ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತು ತೀರಾ ಸಂಕಟದಲ್ಲಿರುವ ದಕ್ಷಿಣ ಆಫ್ರಿಕಾ ಪಾಲಿಗೆ ಡಿ ಕಾಕ್ ಗೈರು ಭಾರೀ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ. ಈ ಪಂದ್ಯಗಳಲ್ಲಿ ಡಿ ಕಾಕ್ ಕ್ರಮವಾಗಿ 34 ಮತ್ತು 20 ರನ್ ಹೊಡೆದಿದ್ದರು. ಆದರೆ ಟೆಸ್ಟ್ ಸರಣಿಯಲ್ಲಿ ಡಿ ಕಾಕ್ ತೀವ್ರ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದರು. 6 ಇನ್ನಿಂಗ್ಸ್‌ಗಳಿಂದ 11.83ರ ಸರಾಸರಿಯಲ್ಲಿ ಕೇವಲ 71 ರನ್ ಮಾಡಿದ್ದರು. 3ನೇ ಏಕದಿನ ಪಂದ್ಯದ ಬಳಿಕ ಎಬಿ ಡಿ ವಿಲಿಯರ್ ಆಗಮಿಸುವುದರಿಂದ ದಕ್ಷಿಣ ಆಫ್ರಿಕಾಕ್ಕೆ ಮರುಜೀವ ಲಭಿಸೀತೆಂಬುದೊಂದು ನಿರೀಕ್ಷೆ.