Advertisement

ಕುಸ್ತಿ ಆಡೋಕೆ ಅಪ್ಪ-ಮಗ ರೆಡಿ!

09:00 PM May 09, 2018 | |

ಚುನಾವಣೆ ಅಖಾಡದಲ್ಲಿ ಅಪ್ಪ-ಮಕ್ಕಳ ಕಾರುಬಾರು ಜೋರಿರುವಾಗಲೇ, ಇನ್ನೊಂದು ಕಡೆ ಚಿತ್ರರಂಗದ ಅಖಾಡದಲ್ಲಿ ಅಪ್ಪ-ಮಗನ ಕಾರುಬಾರು ಶುರುವಾಗಿದೆ. “ದುನಿಯಾ’ ವಿಜಯ್‌ ಮತ್ತು ಅವರ ಪುತ್ರ ಸಾಮ್ರಾಟ್‌ “ಕುಸ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಈಗಾಗಲೇ ಸಾಮ್ರಾಟ್‌, ಕುಸ್ತಿ ಪಟುವಾಗಿ ತಯಾರಿ ಪಡೆಯುತ್ತಿರುವ ಫೋಟೋವೊಂದನ್ನೂ ಕೂಡ ಪ್ರಕಟಿಸಲಾಗಿತ್ತು.

Advertisement

ಈಗ ಹೊಸ ಸುದ್ದಿಯೆಂದರೆ, “ಕುಸ್ತಿ’ಗಾಗಿ ಅಪ್ಪ-ಮಗ ಇಬ್ಬರೂ ಸಜ್ಜಾಗಿದ್ದಾರೆ. ದಿನವೊಂದಕ್ಕೆ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ. “ದುನಿಯಾ’ ವಿಜಯ್‌, ದೇಹವನ್ನು ಹುರಿಗೊಳಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅವರಂತೆ ಅವರ ಪುತ್ರ ಸಾಮ್ರಾಟ್‌ ಕೂಡ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿದ್ದಾನೆ. “ಕುಸ್ತಿ’ ಚಿತ್ರ ನೋಡಿದವರಿಗೆ, ಅಪ್ಪ-ಮಗನ ಸಾಮರ್ಥ್ಯ ಎಂಥದ್ದು ಎಂಬುದು ಗೊತ್ತಾಗಬೇಕಾದರೆ,

ಸಿಕ್ಕಾಪಟ್ಟೆ ಕಸರತ್ತು ನಡೆಸಬೇಕು ಎಂಬ ಕಾರಣಕ್ಕೆ, ವಿಜಯ್‌ ದಿನವೊಂದಕ್ಕೆ ಐದು ತಾಸು ವರ್ಕೌಟ್‌ ಮಾಡಿದರೆ, ಸಾಮ್ರಾಟ್‌ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು ತಾಸು ವರ್ಕೌಟ್‌ ಮಾಡುತ್ತಿದ್ದಾನೆ. “ಕುಸ್ತಿ’ಗೋಸ್ಕರ ಪಕ್ಕಾ ಪೈಲ್ವಾನ್‌ಗಳಂತೆ ರೆಡಿಯಾಗಬೇಕೆಂಬುದು ವಿಜಯ್‌ ಆಸೆ. ಅದಕ್ಕಾಗಿಯೇ, ಯಾವ ಚಿತ್ರವನ್ನೂ ಒಪ್ಪಿಕೊಳ್ಳದೆ, ಬರೀ “ಕುಸ್ತಿ’ಗಾಗಿಯೇ ಬೆಳಗ್ಗೆ, ಸಂಜೆ ತಯಾರಿ ನಡೆಸುತ್ತಿದ್ದಾರೆ.

ಚಿತ್ರದಲ್ಲಿ ರಿಯಲ್‌ “ಕುಸ್ತಿ’ ಇರತ್ತದೆ. ಅದಕ್ಕೆ ಪಕ್ಕಾ ಕುಸ್ತಿಪಟುವಿನಂತೆಯೇ ಅಣಿಯಾಗಬೇಕು. ಹಾಗಾಗಿ, ಸಾಮ್ರಾಟ್‌ಗೆ ಈಗಾಗಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಡುತ್ತಿದ್ದಾರಂತೆ. ವಿಜಯ್‌ ಅವರೂ ಕೂಡ “ಕುಸ್ತಿ’ಪಟ್ಟುಗಳನ್ನು ಹೇಗೆಲ್ಲಾ ಹಿಡಿಯಬೇಕೆಂಬ ಬಗ್ಗೆಯೂ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರಂತೆ. ಒಟ್ಟು ಮೂವರು ಪ್ರಸಿದ್ಧ ಕುಸ್ತಿಪಟುಗಳಿಂದ ಅಪ್ಪ-ಮಗ ತರಬೇತಿ ಪಡೆಯುತ್ತಿದ್ದಾರೆ.

ಮಗನ ಶಿಸ್ತು, ಶ್ರದ್ಧೆ ಬಗ್ಗೆ ಮಾತನಾಡುವ ದುನಿಯಾ ವಿಜಯ್‌, “ಅವನಲ್ಲಿ ಕಲೆ ತುಂಬಿಕೊಂಡಿದೆ. ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಾನೆ. ಹುಮ್ಮಸ್ಸಿದೆ, ಉತ್ಸಾಹವೂ ಇದೆ. ಅವನ ಶ್ರದ್ಧೆ ಗಮನಿಸುತ್ತಿದ್ದರೆ, ಮುಂದೊಂದು ದಿನ, ನನಗೇ ಕಾಂಪಿಟೇಷನ್‌ ಕೊಡ್ತಾನೇನೋ ಎನಿಸುತ್ತದೆ. ಅಷ್ಟರಮಟ್ಟಿಗೆ ಶ್ರದ್ಧೆಯಿಂದ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾನೆ’ ಎನ್ನುತ್ತಾರೆ ಅವರು.

Advertisement

ಬೇಸಿಗೆ ರಜೆಯಲ್ಲಿ ಸಾಮ್ರಾಟ್‌ಗೆ ಎಲ್ಲಿಗೂ ಕಳುಹಿಸಿಲ್ಲವಂತೆ. “ರಜೆಯ ಮಜ ಅನುಭವಿಸಲು ಬಿಟ್ಟಿಲ್ಲ. “ಕುಸ್ತಿ’ ಪಾತ್ರಕ್ಕೆ ಏನೆಲ್ಲಾ ಬೇಕೋ ಅದರ ತಯಾರಿ ಮಾಡಿಕೋ ಅಂತ, ದಿನ ನಿತ್ಯ ವರ್ಕೌಟ್‌ ಬಿಟ್ಟರೆ, ಕುಸ್ತಿ ಪಟ್ಟುಗಳ ಬಗ್ಗೆ ತಿಳಿದುಕೊಳ್ಳುವುದನ್ನು ಬಿಟ್ಟರೆ, ಬೇರೆ ಕಡೆ ಗಮನಹರಿಸಲು ಬಿಟ್ಟಿಲ್ಲ. ಏಕೆಂದರೆ, “ಕುಸ್ತಿ’ ನನ್ನ ಬಹುನಿರೀಕ್ಷೆಯ ಚಿತ್ರ. ನಾನೇ ಬರೆದ ಕಥೆ.

ಒಂದು ತಂಡದ ಜೊತೆಗೆ ಕುಳಿತು ಚಿತ್ರಕಥೆಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಸಾಮ್ರಾಟ್‌ ನನ್ನ ಆಸೆಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದ್ದಾನೆ’ ಎನ್ನುತ್ತಾರೆ ದುನಿಯಾ ವಿಜಯ್‌. ಸದ್ಯಕ್ಕೆ ವಿಜಯ್‌ ಅವರ “ಕುಸ್ತಿ’ಗೆ ನಿರ್ದೇಶಕರು ಯಾರೆಂಬುದು ಗೌಪ್ಯ. ಈಗ ಸ್ಕ್ರಿಪ್ಟ್ ಬಗ್ಗೆಯಷ್ಟೇ ಹೆಚ್ಚು ಗಮನಹರಿಸಿರುವ ಅವರು, ಇಷ್ಟರಲ್ಲೇ ನಿರ್ದೇಶಕರ್ಯಾರು,

ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬ ಕುರಿತು ವಿವರ ಕೊಡುತ್ತಾರಂತೆ. ಬಹುತೇಕ ಕರ್ನಾಟಕದಲ್ಲೇ “ಕುಸ್ತಿ’ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ “ಕುಸ್ತಿ’ಯ ಆಟ ನಡೆಯಲಿದೆ. ಚಿತ್ರದಲ್ಲಿ ರಿಯಲ್‌ ಕುಸ್ತಿ ಪಟುಗಳು ತುಂಬಿಕೊಳ್ಳುತ್ತಾರೆ ಎನ್ನುವ ವಿಜಯ್‌, ಇಷ್ಟರಲ್ಲೇ ಯಾರೆಲ್ಲಾ ಕುಸ್ತಿ ಅಖಾಡಕ್ಕೆ ಬರುತ್ತಾರೆ ಎಂಬುದನ್ನು ಹೇಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next