Advertisement

ಬೆಳಗಾವಿಯಲ್ಲಿ 7ರಿಂದ ಕುಸ್ತಿ ಸಂಭ್ರಮ

09:39 AM Feb 03, 2019 | Team Udayavani |

ಬೆಳಗಾವಿ: ಭಾರತೀಯ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪುರುಷ ಹಾಗೂ ಮಹಿಳಾ ವಿಭಾಗದ ಕರ್ನಾಟಕ ಕುಸ್ತಿ ಹಬ್ಬ ಫೆ. 7ರಿಂದ 10ರ ವರೆಗೆ ಕುಂದಾನಗರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಡಾ| ಎ.ಬಿ. ಬೊಮ್ಮನಹಳ್ಳಿ, ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ಕರ್ನಾಟಕ ಕುಸ್ತಿ ಹಬ್ಬ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ಆರು ಹಂತದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಕೊನೆಯ ದಿನ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕುಸ್ತಿ ಪಟುಗಳ ಕಾಳಗ ಇದೆ. ಲಕ್ಷಕ್ಕೂ ಹೆಚ್ಚು ಜನ ಕುಸ್ತಿ ಆಸಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಫೆ. 7ರಂದು ಕುಸ್ತಿ ಪಂದ್ಯಾವಳಿಗೆ ಚಾಲನೆ ಸಿಗಲಿದ್ದು, ರಾಜ್ಯದ ಮೂಲೆ ಮೂಲೆಯಲ್ಲಿರುವ ಕುಸ್ತಿ ಪಟುಗಳಿಗೆ ಅವಕಾಶ ನೀಡಲಾಗುವುದು. ಇದಕ್ಕಾಗಿ 2 ಕೋಟಿ ರೂ. ಬಿಡುಗಡೆ ಆಗಿದ್ದು, ಹೆಚ್ಚುವರಿಯಾಗಿ 75 ಲಕ್ಷ ರೂ. ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. 700ರಿಂದ 750 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಅಜರ್‌ಬೈಜಾನ್‌, ಜಾರ್ಜಿಯಾ ದೇಶದ ನಾಲ್ವರು, ಪಂಜಾಬ್‌, ಹರಿಯಾಣಾ ಸೇರಿದಂತೆ ವಿವಿಧ ರಾಜ್ಯಗಳಿಂದ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ. ವಸತಿ, ಊಟೋಪಚಾರ, ಸಾರಿಗೆ ವ್ಯವಸ್ಥೆ, ವೈದ್ಯಕೀಯ ಸೇವೆ ಒದಗಿಸಲಾಗುವುದು. ಈಗಾಗಲೇ ಮೈದಾನ ತಯಾರಿಕೆ ಕಾರ್ಯ ಭರದಿಂದ ಸಾಗಿದ್ದು, ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಗರಡಿ ಮನೆ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ರಾಜ್ಯಕ್ಕೆ ಮಂಜೂರಾದ 10 ಗರಡಿ ಮನೆಗಳ ಪೈಕಿ 5 ಬೆಳಗಾವಿ ಜಿಲ್ಲೆಗೆ ಬಂದಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ. ಶ್ರೀನಿವಾಸ, ಜಿಲ್ಲಾ ಉಪನಿರ್ದೇಶಕ ಸಿ.ಬಿ. ರಂಗಪ್ಪ, ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ರತನಕುಮಾರ ಮಠಪತಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next