Advertisement

ಆತ್ಮರಕ್ಷಣೆಗೆ ಕುಸ್ತಿ, ಕರಾಟೆ ಕಲಿಯಲು ಸಲಹೆ

11:45 AM Oct 01, 2018 | Team Udayavani |

ಮೈಸೂರು: ಕುಸ್ತಿ, ಕಬಡ್ಡಿ ಸೇರಿದಂತೆ ಗ್ರಾಮೀಣ ಕ್ರೀಡೆ ಉಳಿಸಿ, ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

Advertisement

ನಗರದ ದೊಡ್ಡಕೆರೆ ಮೈದಾನದ ವಸ್ತು ಪ್ರದರ್ಶನದ ಆವರಣದ ಬಿ.ವಿ.ಕಾರಂತ ರಂಗಮಂದಿರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್‌ ಅಸೋಸಿಯೇಷನ್‌ ಹಾಗೂ ಕರ್ನಾಟಕ ರೆಸ್ಲಿಂಗ್‌ ಅಸೋಸಿಯೇಷನ್‌ ಆಯೋಜಿಸಿದ್ದ ನಾಡಕುಸ್ತಿ ಪಂದ್ಯಾವಳಿಗೆ ಜೋಡಿ ಕಟ್ಟುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಕ್ರೀಡೆಗಳಿಗೆ ಜೀವ ತುಂಬಿ: ಆಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಆದರೆ ಯುವಕರು ಹಳೆಯ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಜೀವ ತುಂಬುತ್ತಿದ್ದಾರೆ. ಪುರುಷರಿಗೆ ಸೀಮಿತ ಎಂಬಂತಿದ್ದ ಕುಸ್ತಿ, ಕಬಡ್ಡಿ ಪಂದ್ಯಗಳಲ್ಲಿ ಮಹಿಳೆಯರು ಭಾಗವಹಿಸಿ ಪ್ರಶಸ್ತಿ ಪಡೆಯುತ್ತಿರುವುದು ಪ್ರೋತ್ಸಾಹದಾಯಕ ಬೆಳವಣಿಗೆ.

ಮಹಿಳೆಯರು ಕುಸ್ತಿಯೊಂದಿಗೆ ಕರಾಟೆಯನ್ನೂ ಕಲಿತರೆ ಆತ್ಮರಕ್ಷಣೆ ಮಾಡಿಕೊಳ್ಳಬಹುದು. ಯುವಕರು ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ನಶಿಸಿ ಹೋಗುತ್ತಿರುವ ಕ್ರೀಡೆಗಳ ಉಳಿವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. 

ಇದೇ ಸಂದರ್ಭದಲ್ಲಿ ಕುಸ್ತಿಪಟುಗಳಾದ ಕನಕಪುರದ ಸ್ವರೂಪ್‌ಗೌಡ, ಬಾಬೂರಾಯನ ಕೊಪ್ಪಲಿನ ಕಿರಣ್‌ ಹಾಗೂ ರೆಹಮಾನ್‌, ಸುಹಾಷ್‌ ಜೋಡಿ ಕಟ್ಟಲಾಯಿತು. ಇದೇ ವೇಳೆ ಬಸ್ಕಿ, ದಂಡ, ಸಪೋರ್ಟ್‌ ಹಾಗೂ ಕಲ್ಲನ್ನು ಹೆಗಲ ಮೇಲೆ ಹೊತ್ತು ಬಸ್ಕಿ ಹೊಡೆಯುವ ಸ್ಪರ್ಧೆಗಳು ನಡೆದವು. 

Advertisement

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಕರ್ನಾಟಕ ಕುಸ್ತಿ ಅಸೋಸಿಯೇಷನ್‌ ಕಾರ್ಯದರ್ಶಿ ಪ್ರೊ.ರಂಗಯ್ಯ, ಕುಸ್ತಿ ಉಪವಿಶೇಷಾಧಿಕಾರಿ ಪಿ.ವಿ.ಸ್ನೇಹ, ಕಾರ್ಯಾಧ್ಯಕ್ಷ ಅರುಣಾಂಶು ಗಿರಿ, ಕುಸ್ತಿ ಪೈಲ್ವಾನರುಗಳಾದ ಕೆಂಪೇಗೌಡ, ಗಣೇಶ್‌, ಅಮೃತ್‌ ಸೇನ್‌ ಇನ್ನಿತರರು ಹಾಜರಿದ್ದರು.

ಅ.14ರಂದು ಜಂಬೂಸವಾರಿ ಉತ್ಸವ: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ವಿಶ್ವದ ನಾನಾ ಮೂಲೆಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಜಂಬೂ ಸವಾರಿಯಂದು ಅರಮನೆ ಅಂಗಳದಲ್ಲಿ ಕೇವಲ 29 ಸಾವಿರ ಮಂದಿ ಮಾತ್ರ ಕೂರಲು ಸ್ಥಳಾವಕಾಶವಿದ್ದು, ಎಲ್ಲರಿಗೂ ಜಂಬೂ ಸವಾರಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಹೀಗಾಗಿ ದಸರಾ ವೀಕ್ಷಣೆಗೆಂದು ಆಗಮಿಸುವ ಪ್ರವಾಸಿಗರು ಮಾತ್ರವಲ್ಲದೆ, ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರಿಗೆ ನಿರಾಸೆಯಾಗಲಿರುವ ಹಿನ್ನೆಲೆಯಲ್ಲಿ ಅ.14ರಂದು ಜಂಬೂ ಸವಾರಿ ಉತ್ಸವ ಆಯೋಜಿಸಲಾಗಿದೆ.

ಅಂಬಾರಿ, ಸ್ತಬ್ಧಚಿತ್ರ ಬಿಟ್ಟರೆ ಸ್ಥಳೀಯ ಕಲಾವಿದರು, ಜಾನಪದ ಕಲಾತಂಡಗಳು, ಆನೆಗಳು, ಕುದುರೆಗಳು ಭಾಗವಹಿಸುತ್ತವೆ. ಪ್ರವಾಸಿಗರಿಗೆ ಇದರಿಂದ ಅನುಕೂಲವಾಗಲಿದ್ದು, ಜಂಬೂ ಸವಾರಿಯ ಅಂದ ಸವಿಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next