ಗೋಲ್ಡ್ ಕೋಸ್ಟ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದ್ದು, 9 ನೇ ದಿನವಾದ ಶುಕ್ರವಾರ 3 ಚಿನ್ನದ ಪದಕಗಳು ಭಾರತಕ್ಕೆ ಒಲಿದಿವೆ. ಶೂಟರ್ ತೇಜಸ್ವಿನಿ ಸಾವಂತ್,15 ರ ಹರೆಯದ ಶೂಟರ್ ಅನೀಶ್ ಬನ್ವಾಲಾ 16 ನೇ ಚಿನ್ನ ಗೆದ್ದು ದೊಡ್ಡ ಸಾಧನೆ ಮಾಡಿದ ಬೆನ್ನಲ್ಲೇ ಕುಸ್ತಿ ಪಟು ಭಜರಂಗ್ ಪೂನಿಯಾ ಚಿನ್ನದ ಪದಕ ಜಯಿಸಿದ್ದಾರೆ.
ಭಜರಂಗ್ ಅವರು ಪುರುಷರ 65 ಕೆಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಪದಕ ಗೆದ್ದಿದ್ದಾರೆ. 57 ಕೆಜಿ ವಿಭಾಗದಲ್ಲಿ ಪೂಜಾ ದಂಡಾ ಅವರು ಫೈನಲ್‌ನಲ್ಲಿ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ಈಗ ಪದಕ ಪಟ್ಟಿಯಲ್ಲಿ 17 ಚಿನ್ನ,9 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಭಾರತ 3 ನೇ ಸ್ಥಾನದಲ್ಲಿದೆ.
25 ಮೀಟರ್ ರ್ಯಾಪಿಡ್ ಫೈರ್ ಸುತ್ತಿನಲ್ಲಿ ಚಿನ್ನದ ಪದಕವನ್ನುಅನೀಶ್ ಗೆದ್ದಿದ್ದಾರೆ. ಇದರಿಂದಾಗಿ ತೀ ಕಡಿಮೆ ವಯಸ್ಸಿನಲ್ಲಿ ಚಿನ್ನ ಗೆದ್ದ ದಾಖಲೆಯನ್ನು ತನ್ನದಾಗಿಸಿಕೊಂಡು ಭಾರತದ ಮನು ಭಾಕರ್ ಅವರ ದಾಖಲೆಯನ್ನು ಮುರಿದರು. ಇದೇ ಪಂದ್ಯಾವಳಿಯಲ್ಲಿ 16 ರ ಹರೆಯದ ಮನು ಭಾಕರ್ ಚಿನ್ನ ಗೆದ್ದಿದ್ದರು.
ಮಹಿಳೆಯರ 50ಎಂ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ತೇಜಸ್ವಿನಿ 50 ಎಮ್ ರೈಫಲ್‌ನಲ್ಲಿ ಚಿನ್ನ ಗೆದ್ದರು. ಅಂಜುಮ್ ಮೌದ್‌ಗಿಲ್ ಅವರು ಬೆಳ್ಳಿ ಪದಕ ಜಯಿಸಿದರು.