ಹೊಸದಿಲ್ಲಿ: ಮಾರ್ಚ್ ತಿಂಗಳಿನಲ್ಲಿ ಆಹಾರ ವಸ್ತುಗಳ ದರ ಏರಿಕೆಯಾದರೂ ಇತರ ಹಲವು ವಸ್ತುಗಳು ಹಾಗೂ ತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಹಣದುಬ್ಬರದ ಹೊರೆಯೂ ತಗ್ಗಿತ್ತು. ಹೀಗಾಗಿ ಸಗಟು ದರ ಆಧರಿತ ಹಣದುಬ್ಬರವು ಮಾರ್ಚ್‌ನಲ್ಲಿ 29 ತಿಂಗಳಲ್ಲೇ ಕನಿಷ್ಠಕ್ಕೆ ಅಂದರೆ, ಶೇ. 1.34ಕ್ಕೆ ತಲುಪಿದೆ. ಈ ಮೂಲಕ ಸತತ 10ನೇ ತಿಂಗಳಲ್ಲಿ ಸಗಟು ಹಣದುಬ್ಬರ ಇಳಿಕೆಯಾದಂತಾಗಿದೆ.
ಫೆಬ್ರವರಿ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಹಣದುಬ್ಬರ ಶೇ. 3.85 ಆಗಿತ್ತು. 2022ರ ಮಾರ್ಚ್ ತಿಂಗಳಿನಲ್ಲಿ ಇದು ಶೇ. 14.63ರಷ್ಟಿತ್ತು. ಉಕ್ಕು, ಆಹಾರ ಉತ್ಪನ್ನಗಳು, ಜವಳಿ ಉತ್ಪನ್ನಗಳು, ಆಹಾರೇತರ ವಸ್ತುಗಳು, ಖನಿಜ, ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಾಗದ ಮತ್ತು ಕಾಗದದ ಉತ್ಪನ್ನಗಳ ದರ ಇಳಿಕೆಯಾದದ್ದೇ ಹಣದುಬ್ಬರ ಇಳಿಕೆಗೆ ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.
ಕಳೆದ ತಿಂಗಳು ಆಹಾರ ಹಣದುಬ್ಬರವು ಶೇ. 5.48ಕ್ಕೆ ಏರಿಕೆಯಾಗಿದ್ದು, ಫೆಬ್ರವರಿಯಲ್ಲಿ ಇದು ಶೇ. 3.81ರಷ್ಟಿತ್ತು. ಗ್ರಾಹಕ ದರ ಆಧರಿತ ಹಣದುಬ್ಬರವು ಮಾರ್ಚ್‌ನಲ್ಲಿ 15 ತಿಂಗಳ ಕನಿಷ್ಠ ಅಂದರೆ ಶೇ. 5.66 ಆಗಿತ್ತು.