Advertisement

ಬಸವಣ್ಣನ ಫೋಟೋ ಪೂಜಿಸಿದರೆ ಸಾಲದು ಆದರ್ಶ ಪಾಲಿಸಬೇಕು: ಸಿದ್ದರಾಮಯ್ಯ

05:44 PM May 02, 2022 | Team Udayavani |

ವಿಜಯಪುರ: ಬಸವಣ್ಣನ ಫೋಟೋ ಇಟ್ಡು ಪೂಜಿಸಿದರೆ ಸಾಲದು, ಬಸವ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಪಾಲನೆ ಮಾಡಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

Advertisement

ಸೋಮವಾರ ಬಬಲೇಶ್ವರ ತಾಲೂಕಿನ ಎಸ್.ಎಚ್.ಸಂಗಾಪುರ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದ ಅವರು, ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಒಟ್ಡಿಗೆ ಬಂದಿವೆ, ರಾಜ್ಯದ ಜನರು ಸೌಹಾರ್ದ ಯುತವಾಗಿ ಬಾಳಿ ಎಂದು ರಂಜಾನ್ ಹಾಗೂ ಬಸವ ಜಯಂತಿ ಶುಭಾಶಯ ಕೋರಿದರು.

ಸಮಾನತೆ, ಸಮ ಸಮಾಜ ಕಂಡ ಸಂವಿಧಾನ ಹಾಗೂ ಬಸವಾದಿ ಶರಣರ ಆಶಯದಂತೆ ಆಡಳಿತ ನೀಡಲು ನಾನು ಮುಖ್ಯಮಂತ್ರಿ ಯಾಗಿ ಬಸವ ಜಯಂತಿ ದಿನವೇ ಪ್ರನಾಣ ಸ್ವೀಕರಿಸಿದೆ. ಬಸವ ಆದರ್ಶದ ಆಡಳಿತ ನೀಡಿದ್ದಾಗಿ ಹೇಳಿದರು.

ಕೆಳ ಜಾತಿಯ ಅಲ್ಲಮಪ್ರಭುವಿನ ಅಧ್ಯಕ್ಷತೆಯಲ್ಲಿ ಅನುಭವ ಮಂಟಪದಲ್ಲಿ ಸರ್ವ ಸಮುದಾಯಗಳ ಪ್ರಾತಿನಿಧ್ಯ ನೀಡಲಾಗಿತ್ತು. ಮನುಷ್ಯಿಗಾಗಿ ಧರ್ಮ ಇದೆಯೇ ಹೊರತು, ಧರ್ಮಕ್ಕೋಸ್ಕರ ಮನುಷ್ಯನಿಲ್ಲ. ಶ್ರೇಣಿಕೃತ ವ್ಯವಸ್ಥೆಯನ್ನು ಬೆಂಬಲಿಸಿದರೆ ಅದನ್ನು ಧರ್ಮ ಎನ್ನಲಾಗದು ಎಂದರು.

ಬಸವಾದಿ ಶರಣರು ಪ್ರತಿ ಪಾದಿಸಿದ ಕಾಯಕ (ಪ್ರೊಡಕ್ಷನ್), ದಾಸೋಹ (ಡಿಸ್ಟ್ರೀಬ್ಯೂಷನ್) ಸಾರ್ವಕಾಲಿಕ. ಬಸವ ತತ್ವ ಕಾಯಕವನ್ನು ಪ್ರತಿಪಾದಿಸುವ ಜೊತೆಗೆ, ಮೈಗಳ್ಳತನವನ್ನು ವಿರೋಧಿಸುತ್ತದೆ ಎಂದು ವಿಶ್ಲೇಷಿಸಿದರು.

Advertisement

ನಾನು ಸಿ.ಎಂ. ಆಗುತ್ತಲೇ ರಾಜ್ಯದ ಜನರು ಉಪವಾಸ ಮಲಗದಿರಲಿ ಎಂದು ಎಲ್ಲ ಜಾತಿ ಸಮುದಾಯದ ಬಡವರಿಗೆ 1.25 ಕೋಟಿ ಕುಟುಂಬದ 4.30 ಕೋಟಿ ಜನರಿಗೆ ಉಚಿತವಾಗಿ 7 ಕೆ.ಜಿ. ಅಕ್ಕಿ ನೀಡುವ ಯೋಜನೆ ಘೋಷಿಸಿದ್ದೆ.

ಉಚಿತ ಅಹಾರ ಧಾನ್ಯ ವಿತರಣೆ ಮಾಡುತ್ತಿರುವ ಕಾರಣ ಕಾರ್ಮಿಕರು ಸಿಗುತ್ತಿಲ್ಲ ಎಂದು ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಸದನದಲ್ಲಿ ಆಕ್ಷೇಪಿಸಿದಾಗ, ಇಷ್ಟು ವರ್ಷ ಕಾರ್ಮಿಕರು ದುಡಿದದ್ದು ಸಾಕು. ಇನ್ನು ನೀವು ಕೆಲಸ ಮಾಡಿ ಎಂದು ತಿರುಗೇಟು ನೀಡಿದ್ದೆ ಎಂದು ಸಮರ್ಥಿಸಿಕೊಂಡರು.

ಭಾರತೀಯ ಪರಂಪರೆಯಲ್ಲಿ ನಾವೆಲ್ಲ ಹಿಂದೂಗಳು, ಹಿಂದು ಸಂಪ್ರದಾಯದಂತೆ ಸಂಭ್ರಮದಿಂದ ಆಚರಿಸುತ್ತೇವೆ. ಜೊತೆಗೆ ಎಲ್ಲ ಜಾತಿ, ಧರ್ಮಗಳ ಹಾಗೂ ಸುತ್ತಲಿನ ಜನರು ಪಾಲ್ಗೊಳ್ಳುವ ಮೂಲಕ ಬಹುತ್ವದ ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿದಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

ಧರ್ಮ, ಜಾತಿ, ಭಾಷೆಗಳ ಆಧಾರದಲ್ಲಿ ಜನರನ್ನು ವಿಂಗಡಿಸಲು ಸಾಧ್ಯವಿಲ್ಲ. ಜೀವನ್ಮರಣದ ಮಧ್ಯೆ ಹೋರಾಡುವ ವ್ಯಕ್ತಿ ನನ್ನ ಜಾತಿ ವ್ಯಕ್ತಿಯ ರಕ್ತಬೇಕೆಂದರೆ ಆಗದು.ಆದರೆ ರಕ್ತದಾನದಿಂದ ಜೀವನ ಪಡೆದ ಬಳಿಕ ಜಾತಿ, ಮತ ಪಂಥ ಎಂದು ಜಾತೀಯತೆ ಮಾಡುವುದು ಸಮಾಜ ವಿಘಟನೆ ಮನಸ್ಥಿತಿ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ಮೇಲ್ಮನೆ ವಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕರಾದ ಆನಂದ ನ್ಯಾಮಗೌಡ, ಸುನಿಲಗೌಡ ಪಾಟೀಲ, ಸಿ.ಎಸ್.ನಾಡಗೌಡ ಇತರರು ಉಪಸ್ಥಿತರಿದ್ದರು.

ಸರ್ಕಾರ ಎಂಇಎಸ್ ಪುಂಡಾಟಿಕೆ ಹತ್ತಿಕ್ಕಬೇಕು

ಕರ್ನಾಟಕದ ನಕ್ಷೆಯನ್ನು ವಿರೂಪಗೊಳಿಸಿ, ಉದ್ಧಟತನ ಮೆರೆದಿರುವ ಎಂ.ಇ.ಎಸ್. ಪುಂಡಾಟಿಕೆ ತಡೆಯಲು ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಂ.ಇ.ಎಸ್. ಪುಂಡರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಹಿಂಪಡೆದ ಬಳಿಕ ಎಂ.ಇ.ಎಸ್. ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಎಂ.ಇ.ಎಸ್. ವಿಷಯದಲ್ಲಿ ಸರ್ಕಾರ ಮೃದು ಧೋರಣೆ ಅನುಸರಿಸದೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭಾಷಾವಾರು ಪ್ರಾಂತ್ಯ ವಿಭಜನೆಯಲ್ಲಿ ಮಹಾಜನ್ ವರದಿ ಅಂತಿಮವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಕ್ಕೆ ಸೇರಬೇಕಾದ ಪ್ರದೇಶಗಳನ್ನು ಇತ್ಯರ್ಥ ಮಾಡಿದೆ. ಇದೀಗ ರಾಜಕೀಯ ಕಾರಣಕ್ಕೆ ಕ್ಯಾತೆ ತೆಗೆಯುವುದು ಸಲ್ಲದ ಕ್ರಮ ಎಂದು ಎಂ.ಇ.ಎಸ್. ವಿರುದ್ಧ ಹರಿಹಾಯ್ದರು.

ಕರ್ನಾಟಕ ರಾಜ್ಯದ ಅಖಂಡತೆ, ಏಕತೆಗೆ ಧಕ್ಕೆ ತರುವಂತೆ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಬಾಲ್ಕಿ ಸಹಿತ ನೂತನ ನಕ್ಷೆ ತಯಾರಿಸಿ ಎಂ.ಇ.ಎಸ್. ಕಾರ್ಯಕರ್ತರು ಉದ್ದಟನ ಮೆರೆದಿದ್ದಾರೆ. ಹೀಗಾಗಿ ಎಂ.ಇ.ಎಸ್. ಬಾಲ ಬಿಚ್ಚದಂತೆ ಕೂಡಲೇ ಸರ್ಕಾರ ಇವರ ಪುಂಡಾಟಿಕೆ ಹತ್ತಿಕ್ಕಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next