ಯಾದಗಿರಿ: ನಾಡಿನಲ್ಲಿ ಅನೇಕ ಜನ ಸಂತರು ಇದ್ದಾರೆ. ಆದರೆ ಅವಧೂತ ಪರಂಪರೆಯಲ್ಲಿ ಅಬ್ಬೆತುಮಕೂರಿನ ವಿಶ್ವಾರಾಧ್ಯರು ಅಗ್ರಗಣ್ಯರಾಗಿದ್ದಾರೆ ಎಂದು ಪೀಠಾಧಿಪತಿ ಡಾ| ಗಂಗಾಧರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ವಿಶ್ವಾರಾಧ್ಯರ ಜನ್ಮದಿನೋತ್ಸವದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಗಂವ್ಹಾರದ ತೋಪಕಟ್ಟಿ ಹಿರೇಮಠದಲ್ಲಿ ಕರುಳಕುಡಿಯಾಗಿ ಜನಿಸಿದ ವಿಶ್ವಾರಾಧ್ಯರು. ಪಂಡಿತ ನಗರಿ ಕಾಶಿಯಲ್ಲಿ ಅಗಾಧವಾದ ಅಧ್ಯಯನವನ್ನು ಮಾಡಿ ಕಾಶಿ ಘನ ಪಂಡಿತರೆಂದೆ ಖ್ಯಾತಮಾನರಾಗಿ ಈ ನಾಡನ್ನು ಉದ್ದರಿಸಿದ ಮಹಾಂತರಾಗಿದ್ದಾರೆ ಎಂದರು.
ವಿಶ್ವಾರಾಧ್ಯರು ತಮ್ಮ ತಪಃಬಲದಿಂದ ಸಂಪಾದಿಸಿದ ಜ್ಞಾನವನ್ನು ಈ ಲೋಕದ ಜನರಿಗೆ ಉಣಬಡಿಸಿ ಲೌಕಿಕ ಜೀವನದ ಕಾಳಿಕೆಯನ್ನು ಕಳೆದು ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಮಹಾತ್ಮರು ಆಗಿದ್ದಾರೆ ಎಂದು ತಿಳಿಸಿದರು.
ಅಬ್ಬೆತುಮಕೂರು ಕ್ಷೇತ್ರಕ್ಕೆ ಲಕ್ಷ ಲಕ್ಷ ಭಕ್ತರು ಹರಿದು ಬರುತ್ತಿರುವುದು ವಿಶ್ವಾರಾಧ್ಯರ ದಿವ್ಯ ಕೃಪಾಕಟಾಕ್ಷದ ಫಲವಾಗಿದೆ. ನಿಷ್ಠೆ, ಶ್ರದ್ಧೆಯಿಂದ ಆಗಮಿಸುವ ಎಲ್ಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಭಕ್ತರ ಕಾಮಧೇನು ಅವರಾಗಿದ್ದಾರೆ ಎಂದು ಹೇಳಿದರು.
ಬೆಳಗ್ಗೆ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ಅಬ್ಬೆತುಮಕೂರಿನ ಪ್ರಮುಖ ಬೀದಿಗಳಲ್ಲಿ ಶ್ರೀ ವಿಶ್ವಾರಾಧ್ಯರ ಪಲ್ಲಕ್ಕಿ ಉತ್ಸವ ಸುಮಂಗಲೆಯರ ಕಳಸ, ಮಂಗಳವಾದ್ಯಗಳೊಂದಿಗೆ ಭಕ್ತಿಯಿಂದ ನೆರವೇರಿತು. ನಂತರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಪೀಠಾಧಿಪತಿಗಳು ಬಾಲ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.
ಜನ್ಮದಿನೋತ್ಸವದ ಕಾರ್ಯಕ್ರಮಕ್ಕೆ ವಿವಿಧ ಸೇವಾ ಕೈಂಕರ್ಯಗಳನ್ನು ಕೈಗೊಂಡ ದಾಸೋಹಿಗಳಿಗೆ ಪೀಠಾಧಿಪತಿಗಳು ಸತ್ಕರಿಸಿ ಆಶೀರ್ವದಿಸಿದರು. ನಂತರ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಚೆನ್ನಪ್ಪಗೌಡ ಮೋಸಂಬಿ, ಡಾ| ಸುಭಾಶ್ಚಂದ್ರ ಕೌಲಗಿ, ವೆಂಕಟರಡ್ಡಿ ಅಬ್ಬೆತುಮಕೂರ, ರಾಜಪ್ಪಗೌಡ ಅಬ್ಬೆತುಮಕೂರ, ನರಸಣ್ಣಗೌಡ ರಾಯಚೂರು, ಶಾಂತರಡ್ಡಿ ದೇಸಾಯಿ ನಾಯ್ಕಲ್, ಹನುಮಾನ್ ಶೇಠ್, ಎಸ್.ಎನ್. ಮಿಂಚಿನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.