ಸೊಲ್ಲಾಪುರ: ಗೋಮಾತೆಯಲ್ಲಿ ದೇವರು ವಾಸಿಸುತ್ತಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಅನನ್ಯವಾದ ಗೌರವವಿದೆ. ಸಮಾಜದಲ್ಲಿ ಗೋಹತ್ಯೆ ಪ್ರಮಾಣ ಹೆಚ್ಚಾಗಿದೆ. ಗೋಹತ್ಯೆ ತಡೆದು ಅದರ ರಕ್ಷಣೆ ಮಾಡಬೇಕಾಗಿದೆ ಎಂದು ಹೋಠಗಿ ಮಠದ ಪೂಜ್ಯ ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ಅಭಿಪ್ರಾಯಿಸಿದರು.
ಎ. 18 ರಂದು ಬೃಹನ್ಮಠ ಹೋಟಗಿ ಮಠದ ಪರಮಪೂಜ್ಯ ಲಿಂಗೈಕ್ಯ ಷ. ಬ್ರ. ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಸಂಕಲ್ಪಸಿದ್ಧಿ ಕಾರ್ಯ ಮಹೋತ್ಸವದ ಅಂಗವಾಗಿ ನಗರದ ವೀರತಪಸ್ವಿ ಮಂದಿರದಲ್ಲಿ ನಡೆದ ದೀಕ್ಷೆ ಮತ್ತು ಅಯ್ನಾಚಾರ, ಹೋಮ-ಹವನ ಹಾಗೂ ಗೋಮಾತೆ ಪೂಜೆ ಕಾರ್ಯ ಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಬೃಹನ್ಮಠ ಹೋಟಗಿ ಮಠದ ಪರಮಪೂಜ್ಯ ಲಿಂಗೈಕ್ಯ ಷ. ಬ್ರ. ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಗೋಮಾತೆಯ ಮಹತ್ವ ಸಮಾಜಕ್ಕೆ ತಿಳಿಸುವುದಕ್ಕಾಗಿ 1008 ಗೋಮಾತೆಗೆ ಪೂಜೆ ಮಾಡುವ ಸಂಕಲ್ಪ ಮಾಡಿದ್ದರು. ಆದ್ದರಿಂದ ಅವರ ಸಂಕಲ್ಪಸಿದ್ಧಿ ಕಾರ್ಯ ಪೂರ್ಣಗೊಳಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ಗೋಹತ್ಯೆ ಪ್ರಮಾಣ ಹೆಚ್ಚಾಗಿದೆ. ಗೋಹತ್ಯೆ ತಡೆದು ಅದರ ರಕ್ಷಣೆ ಮಾಡಬೇಕಾಗಿದೆ. ಗೋಮಾತೆಯಿಂದ ಮನುಷ್ಯನಿಗೆ ಅನೇಕ ಲಾಭಗಳಿವೆ. ಆದ್ದರಿಂದ ಗೋಮಾತೆಯ ತುಪ್ಪ, ಹಾಲು ಹಾಗೂ ಮಲಮೂತ್ರಕ್ಕೆ ಬಹಳ ಮಹತ್ವವಿದೆ. ಹೀಗಾಗಿ ಮನು ಷ್ಯನ ಆರೋಗ್ಯ ಸದೃಢವಾಗಿರಬೇಕಾದರೆ ಗೋಹತ್ಯೆ ತಡೆ ಯುವ ಸಲುವಾಗಿ ಸಮಾಜ ಜಾಗೃತವಾಗಬೇಕು ಎಂದರು.
ಈ ಸಂದರ್ಭದಲ್ಲಿ ಡಾ| ವೀರುಪಾಕ್ಷ ಶಿವಾಚಾರ್ಯ ಶ್ರೀಗಳು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ವೀರಶೈವ ಧರ್ಮದಲ್ಲಿ ದೀಕ್ಷೆ ಮತ್ತು ಅಯ್ನಾಚಾರ ಸಂಸ್ಕಾರಕ್ಕೆ ಬಹಳ ಮಹತ್ವವಿದೆ. ಇಂಥ ಸಂಸ್ಕಾರದಿಂದ ಭಕ್ತರ ಮನಸ್ಸು ಶುದ್ಧಿಕರಣವಾಗುತ್ತದೆ. ಇದರಿಂದ ಮನುಷ್ಯ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಈ ಐದು ಜ್ಞಾನೇಂದ್ರೀಯಗಳ ಶುದ್ಧಿಕರಣವಾಗುತ್ತಿರುವುದರಿಂದ ನಮ್ಮ ಮನಸ್ಸು ಪ್ರಸನ್ನವಾಗುತ್ತದೆ ಎಂದು ಹೇಳಿದರು.
ಬೃಹನ್ಮಠ ಹೋಟಗಿ ಮಠದ ಪರಮಪೂಜ್ಯ ಲಿಂಗೈಕ್ಯ ಷ. ಬ್ರ. ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಸಂಕಲ್ಪಸಿದ್ಧಿ ಕಾರ್ಯ ಮಹೋತ್ಸವದಂದು ಬುಧವಾರ ಬೆಳಗ್ಗೆ 7 ರಿಂದ ವೀರತಪಸ್ವಿ ಮಂದಿರದಲ್ಲಿ ದೀಕ್ಷೆ ಮತ್ತು ಅಯ್ನಾಚಾರ, ಹೋಮ ಹವನ ಹಾಗೂ ಗೋಮಾತೆ ಪೂಜೆ ಬಹಳ ಉತ್ಸಾಹದಿಂದ ಜರಗಿತು. ಹೋಟಗಿ ಮಠದ ಪೂಜ್ಯ ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಹಾಗೂ ಜಿಂತೂರದ ಅಮೃತೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಹಸ್ತದಿಂದ ಸುಮಾರು 200 ಜನ ಭಕ್ತರಿಗೆ ದೀಕ್ಷೆ ಮತ್ತು 150 ಜಂಗಮ ವಟುಗಳಿಗೆ ಅಯ್ನಾಚಾರ ನೀಡಿದರು. ಈ ಸಂದರ್ಭದಲ್ಲಿ ಚಿಟಗುಪ್ಪದ ಗುರುಲಿಂಗ ಶಿವಾಚಾರ್ಯ ಶ್ರೀಗಳು, ದವಿವಾಡಿಯ ಮನಿಕಂಠ ಶಿವಾಚಾರ್ಯ ಶ್ರೀಗಳು, ಮೈಹಸಾಳದ ಶಿವಯೋಗಿ ಶ್ರೀಗಳು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು. ಡಾ| ಶಿವಯೋಗಿ ಶಾಸ್ತ್ರೀ ಹೋಳಿಮಠ, ಕಲ್ಲಯ್ನಾ ಶಾಸ್ತ್ರೀ ಗಣೇಚಾರಿ, ಸಿದ್ಧಯ್ನಾ ಹಲ್ಲಾಳಿ ಶಾಸ್ತ್ರೀ, ಪರಮೇಶ್ವರ ಶಾಸ್ತ್ರೀ ಇವರು ಶಾಸ್ತ್ರೋಕ್ತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಬೃಹನ್ಮಠ ಹೋಟಗಿ ಮಠದ ಪರಮಪೂಜ್ಯ ಲಿಂಗೈಕ್ಯ ಷ. ಬ್ರ. ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಸಂಕಲ್ಪಸಿದ್ಧಿ ಕಾರ್ಯ ಮಹೋತ್ಸವದಂದು ಪೂಜ್ಯ ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಎ. 27 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ದಿನ ಬೆಳಗ್ಗೆ 7 ರಿಂದ 1008 ಗೋಮಾತೆ ಪೂಜೆ, ಪ್ರತಿ ದಿನ ಸಂಜೆ 7 ರಿಂದ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಜರಗಲಿದೆ.