ವರದಿ: ದತ್ತು ಕಮ್ಮಾರ
ಕೊಪ್ಪಳ: ಚೌತಿಯಂದು ಗಣೇಶ ಮೂರ್ತಿಗಳಿಗೆ ನಾಡಿನೆಲ್ಲೆಡೆ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ಕೊಪ್ಪಳ ನಗರ ಸಮೀಪದ ಭಾಗ್ಯನಗರದಲ್ಲಿನ ನೇಕಾರಿಕೆ ಕುಟುಂಬದವರು ಗಣೇಶನಿಗೆ ಪೂಜೆ ಸಲ್ಲಿಸುವ ಜೊತೆಗೆ ಮರುದಿನ ಇಲಿರಾಯನಿಗೆ ವಿಶೇಷ ಪೂಜೆ ಸಲ್ಲಿಸಿ, ಉದ್ಯಮಕ್ಕೆ ತೊಂದರೆ ಮಾಡದಿರಲಿ ಎಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.
ಹೌದು.. ನೇಕಾರಿಕೆ ಕುಟುಂಬ ತಲಾ ತಲಾಂತರದಿಂದಲೂ ಈ ಸಂಪ್ರದಾಯ ಮುನ್ನಡೆಸಿಕೊಂಡು ಬಂದಿದೆ. ಪ್ರತಿ ವರ್ಷದ ಗಣೇಶ ಹಬ್ಬದಂದು ಪದ್ಧತಿಯಂತೆ ಗಣೇಶ ಮೂರ್ತಿಗೆ ವಿವಿಧ ಖಾದ್ಯ ನೈವೇದ್ಯ ಮಾಡಿ ಪೂಜೆ ಸಲ್ಲಿಸಿ, ಚೌತಿಯ ಮರುದಿನದಂದು ಇಲಿರಾಯನಿಗೆ ಪೂಜೆ ಮಾಡಿ ಭಕ್ತಿಯಿಂದಲೇ ಬೇಡಿಕೊಳ್ಳುತ್ತಾರೆ. ನೇಕಾರರು ಬಟ್ಟೆಗಳನ್ನು ನೇಯ್ದು ನಾಡಿನೆಲ್ಲೆಡೆ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ನೇಕಾರಿಕೆಯಿಂದಲೇ ಅವರ ಜೀವನ ನಡೆಯುತ್ತಿದೆ. ಆದರೆ ತಮ್ಮ ಉದ್ಯಮದ ವೇಳೆ ನೂಲು ದಾರವನ್ನು, ಕೈ ಮಗ್ಗಗಳಲ್ಲಿ ಇಲಿಗಳು ಯಾವುದೇ ನೂಲು ದಾರವನ್ನು ಕಡಿಯದೇ ಇರಲಿ. ಹೊಸ ಬಟ್ಟೆಗಳನ್ನು ಕಡಿದು ಹಾಳು ಮಾಡದೇ ತಮ್ಮ ಉದ್ಯಮಕ್ಕೆ ತೊಂದರೆ ಮಾಡದಿರಲಿ ಎನ್ನು ಸಂಕಲ್ಪದಿಂದ ಇಲಿಗಳಿಗೆ ಚೌತಿಯ ಮರುದಿನ ವಿಶೇಷ ಪೂಜೆ ನಡೆಯುತ್ತದೆ.
ಭಾಗ್ಯನಗರದಲ್ಲಿ ಹಲವು ನೇಕಾರರ ಕುಟುಂಬಗಳು ಇಲಿಗಳಿಂದ ಬಟ್ಟೆ ಹಾಗೂ ನೂಲಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣದಿಂದ ಇಲಿಗಳನ್ನು ದೇವರ ರೂಪದಲ್ಲಿ ಕಾಣುತ್ತವೆ. ಪ್ರತಿ ಗಣೇಶ ಚತುರ್ಥಿ ಬಳಿಕ ಇಲಿಗಳಿಗೂ ಹೋಳಿಗೆ, ಕರಿಗಡುಬು, ಸಿಹಿ ಪದಾರ್ಥ ಮಾಡಿ ಕೈ ಮಗ್ಗಗಳಲ್ಲಿಯೇ ತಟ್ಟೆಯನ್ನಿಟ್ಟು ಮಣ್ಣಿನಿಂದ ಇಲಿಗಳನ್ನು ಸಿದ್ಧಪಡಿಸಿ ಅವುಗಳನ್ನು ಅಲಂಕಾರ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಉದ್ಯಮ ಚೆನ್ನಾಗಿ ನಡೆಯಲಿ ಎಂದು ಭಕ್ತಿಯಿಂದಲೇ ಪ್ರಾರ್ಥನೆ ಮಾಡುವ ಸಂಪ್ರದಾಯ ಈ ಹಿಂದಿನಿಂದಲೂ ನಡೆದು ಬಂದಿದ್ದು, ಈ ವರ್ಷದ ಶನಿವಾರವೂ ಆ ಆಚರಣೆ ಮುಂದುವರಿಯಿತು.
ಜೀವಂತ ಇಲಿಗೂ ಪೂಜೆ: ನೇಕಾರಿಕೆ ಕುಟುಂಬದವರು ಕೇವಲ ಮಣ್ಣಿನಿಂದ ಮಾಡಿದ ಇಲಿಗೆ ಪೂಜೆ ಮಾಡದೇ ಜೀವಂತ ಇಲಿಗಳಿಗೂ ಪೂಜೆ ಮಾಡುವ ಪದ್ಧತಿ ಇದೆ. ಮನೆಯಲ್ಲಿ ಹಾಗೂ ಕೈ ಮಗ್ಗಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಇಲಿಗಳಿಗೆ ಹಾಲು, ಹಣ್ಣು, ನೈವೇದ್ಯ ಇಡುವ ಮೂಲಕ ದೂರದಿಂದಲೇ ನಮ್ಮೆಲ್ಲರನ್ನು ಕಾಪಾಡು ಎಂದು ಭಕ್ತಿಯಿಂದ ಕೇಳಿಕೊಳ್ಳುತ್ತಾರೆ. ಇಲಿಗಳೇ ಇವರಿಗೆ ದೇವರಾಗಿವೆ.
ಮುಸ್ಲಿಂರಿದಂಲೂ ಪೂಜೆ: ಭಾಗ್ಯನಗರದಲ್ಲಿ ಕೇವಲ ನೇಕಾರಿಕೆ ಕುಟುಂಬ ಮಾತ್ರ ನೇಕಾರಿಕೆ ಉದ್ಯಮ ನಡೆಸುತ್ತಿಲ್ಲ. ಮುಸ್ಲಿಂ ಸೇರಿ ಹಲವು ವರ್ಗದ ಜನರು ನೇಕಾರಿಕೆ ಉದ್ಯಮ ನಡೆಸುತ್ತಿದ್ದಾರೆ. ಇತ್ತ ಮುಸ್ಲಿಂ ಬಾಂಧವರೂ ಭಕ್ತಿಯಿಂದ ಇಲಿಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ಅವರು ಪ್ರತಿ ವರ್ಷವೂ ಪೂಜೆ ಕಾರ್ಯ ಚಾಚೂ ತಪ್ಪದೇ ನೆರವೇರಿಸುತ್ತಾರೆ.