Advertisement

ಮಡಿಕೇರಿ: ವೇಷ ಧರಿಸಿ ದೇವಿಗೆ ಹರಕೆ ಒಪ್ಪಿಸುವ ಬೇಡು ಹಬ್ಬ ಸಂಪನ್ನ

11:03 PM Apr 25, 2019 | sudhir |

ಮಡಿಕೇರಿ: ಗ್ರಾಮಸ್ಥರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹೆಣ್ಣು, ಗಂಡಿನ ಹಾಗೂ ಗಂಡು, ಹೆಣ್ಣಿನ ವೇಷ ಸೇರಿದಂತೆ ವಿವಿಧ ವೇಷಗಳನ್ನು ಧರಿಸಿ ಭದ್ರಕಾಳಿ ದೇವಿಗೆ ಹರಕೆಯನ್ನು ಒಪ್ಪಿಸುವ ಚೆಂಬೆಬೆಳ್ಳೂರು ಬೇಡು ಹಬ್ಬ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತ್ತು.

Advertisement

ವೀರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯ್ತಿಯ ಗ್ರಾಮ ದೇವತೆಯಾದ ಶೀ ಭದ್ರಕಾಳಿ ದೇವಿಯ ವಾರ್ಷಿಕ ಮಹೋತ್ಸವ ಹಲವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಏ.14 ರಂದು ಊರಿಗೆ ಕಟ್ಟು ಬೀಳುವುದರೊಂದಿಗೆ ಆರಂಭವಾಯಿತು. ಕಳೆದ ಶುಕ್ರವಾರದಂದು ಉಪವಾಸ ವ್ರತಾಚರಣೆ, ದೇವರ ನೃತ್ಯ ಬಲಿ, ತೆರೆಗಳು ನಡೆದ ಬಳಿಕ, ದೇವರ ಕುದುರೆಯನ್ನು ದೇವಳಕ್ಕೆ ತರುವ ಧಾರ್ಮಿಕ ಕಾರ್ಯಗಳೊಂದಿಗೆ ಮಂಗಳವಾರದಂದು ವ್ರತಧಾರಿಗಳು ವಿವಿಧ ವೇಷ ಧ‌ರಿಸಿ ತಮ್ಮ ಹರಕೆ ಒಪ್ಪಿಸಿದರು.

ಸೋಮವಾರದಿಂದಲೆ ವ್ರತಧಾರಿಗಳು ತಮ್ಮ ವೇಷಭೂಷಣಗಳನ್ನು ಸಿದ್ಧಪಡಿಸಿಕೊಂಡು ಸಂಜೆಯ ವೇಳೆೆ ವೇಷಧ‌ರಿಸಿ ಮನೆಮನೆಗೆ ತೆರಳಿ ಬೇಡು ಕಳಿಯನ್ನು ಪ್ರದರ್ಶನ ಮಾಡುತ್ತಾ ಮನೆಯವರು ನೀಡಿದ ಕಿರು ಕಾಣಿಕೆಯನ್ನು ಸ್ವೀಕರಿಸಿದರು.

ಗುರುವಾರದ ದಿನವಾದ ಇಂದು ಹರಿಕೆಯನ್ನು ಒಪ್ಪಿಸುವ ಗಂಡು ಮಕ್ಕಳು, ಹೆಣ್ಣಿನ ವೇಷ ಧ‌ರಿಸಿ ಹಾಗೂ ಹೆಣ್ಣು ಮಕ್ಕಳು ಗಂಡು ಮಕ್ಕಳ ವೇಷ ಧ‌ರಿಸಿ ದೇವಾಲಯಕ್ಕೆ ಆಗಮಿಸಿ ಹರಕೆ ಒಪ್ಪಿಸಿದರು. ಮಕ್ಕಳಿಗೆ ವಿವಾಹಾದಿಗಳು ನಡೆಯಬೇಕೆಂದು ಮತ್ತು ಇತರ ದೋಷಗಳನ್ನು ನೀಗಿಸುವಂತೆ ಹರಕೆಯನ್ನು ದೇವಿಗೆ ಒಪ್ಪಿಸುತ್ತಾರೆ ಎಂದು ಗ್ರಾಮಸ್ಥರಾದ ಸಿ. ಅಯ್ಯಪ್ಪ ಅವರು ತಿಳಿಸುತ್ತಾರೆ.

ದೇವಾಲಯದಲ್ಲಿ ನಡೆದ ಬೇಡು ಹಬ್ಬದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದು, ನೂರಕ್ಕೂ ಹೆಚ್ಚಿನ ವ್ರತಧಾರಿಗಳು ವಿವಿಧ‌ ವೇಷ ಧ‌ರಿಸಿ ಹರಕೆಯನ್ನು ಸಮರ್ಪಣೆ ಮಾಡಿದರು.

Advertisement

ಗ್ರಾಮದಲ್ಲಿ ನೆಲೆಸಿರುವ ಪ್ರಮುಖ ಕುಟುಂಬಗಳಾದ ಬಲ್ಯಮಂಡ, ಕೂಳುವಂಡ ಮತ್ತು ಅಚ್ಚನಿಕಂಡ ಮನೆತನಕ್ಕೆ ಸೇರಿದ ಕುಟುಂಬಸ್ಥರು ದೇವಾಲಯದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಮಂಡೇಪಂಡ ಮುತ್ತಪ್ಪ ಅವರು ದೇವಾಲಯದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next