Advertisement

ಕಳವಳಕಾರಿ ಕೊರೊನಾ ವೈರಸ್‌

11:27 PM Jan 24, 2020 | mahesh |

ಹೊಸ ವರ್ಷದ ಆರಂಭದಲ್ಲೇ ಮನುಕುಲ ಬೆಚ್ಚಿ ಬೀಳುವ ಕಾಯಿಲೆಯೊಂದು ಸುದ್ದಿ ಮಾಡಿದೆ. ಚೀನದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್‌ ಕ್ಷಿಪ್ರವಾಗಿ ಹರಡುತ್ತಿರುವುದರಿಂದ ಜಗತ್ತಿನಾದ್ಯಂತ ಆತಂಕ ಮಡುಗಟ್ಟಿದೆ. ಮುಂಬಯಿಯಲ್ಲೂ ಚೀನದಿಂದ ಬಂದಿರುವ ಇಬ್ಬರು ಭಾರತೀಯರಲ್ಲಿ ಈ ಶಂಕಿತ ವೈರಸ್‌ನ ಲಕ್ಷಣ ಕಾಣಿಸಿಕೊಂಡಿದ್ದು, ಅವರನ್ನು ಪ್ರತ್ಯೇಕ ವಾರ್ಡಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೌದಿ ಅರೇಬಿಯದ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ದುಡಿಯುತ್ತಿರುವ ಕೇರಳ ಮೂಲದ ಮಹಿಳೆಯಲ್ಲೂ ಕೊರೊನಾವೈರಸ್‌ ಲಕ್ಷಣ ಕಾಣಿಸಿಕೊಂಡಿದ್ದು, ಆಕೆಯೂ ಸೇರಿದಂತೆ ಸುಮಾರು 30 ನರ್ಸ್‌ಗಳನ್ನು ಪ್ರತ್ಯೇಕವಾಗಿರಿಸಲಾಗಿದೆ. ಹೀಗೆ ಈ ಹೊಸ ವೈರಸ್‌ ಈಗ ಜಗತ್ತಿನಾದ್ಯಂತ ಕಳವಳಕ್ಕೆ ಕಾರಣವಾಗಿದೆ.

Advertisement

ಬಹುತೇಕ ವೈರಸ್‌ಗಳಂತೆ ಇದು ಕೂಡ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎನ್ನಲಾಗುತ್ತಿದೆ. ಹಾವಿನಿಂದ ಹರಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದ್ದರೂ ಇದಿನ್ನೂ ದೃಢಪಟ್ಟಿಲ್ಲ. 18 ವರ್ಷದ ಹಿಂದೆ ಕಾಣಿಸಿಕೊಂಡಿದ್ದ ಸಾರ್ ವೈರಸ್‌ನ ಹಾವಳಿಯನ್ನು ಕೊರೊನಾವೈರಸ್‌ ನೆನಪಿಸಿದೆ. ವಿಶೇಷವೆಂದರೆ ಸಾರ್ ವೈರಸ್‌ನ ಮೂಲವೂ ಚೀನವೇ ಆಗಿತ್ತು. 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹಬ್ಬಿದ ಸಾರ್ ಸುಮಾರು 800 ಮಂದಿಯನ್ನು ಬಲಿತೆಗೆದುಕೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಆಗ ಕೆಲವು ದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತ್ತು.

ಚೀನ ಕೊರೊನಾವೈರಸ್‌ಗೆ ಪ್ರತಿಸ್ಪಂದಿಸಿದ ರೀತಿ ಮಾತ್ರ ಮೆಚ್ಚುವಂತಿದೆ. ವೈರಸ್‌ ಹಾವಳಿಯಿರುವ 13 ನಗರಗಳನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿದೆ. ಈ ನಗರಗಳಿಂದ ಹೊರ ಹೋಗುವುದಾಗಲಿ, ಒಳ ಹೋಗುವುದಾಗಲಿ ಸಾಧ್ಯವಿಲ್ಲ. ಔಷಧದ ಅಂಗಡಿಗಳು, ಆಸ್ಪತ್ರೆಗಳು ಸೇರಿದಂತೆ ತುರ್ತು ಸೇವೆಯನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲ ಸೇವೆಗಳು ಬಂದ್‌ ಆಗಿವೆ. ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಆದರೆ ಅಲ್ಲಿ ಯಾರೂ ತಮ್ಮ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಹೇಳಿಕೊಂಡು ಪ್ರತಿಭಟನೆಗಿಳಿದಿಲ್ಲ. ಜನರು ಆಡಳಿತದ ಜೊತೆಗೆ ಸಹಕರಿಸುತ್ತಿದ್ದಾರೆ. ಜೊತೆಗೆ ಅಲ್ಲಿನ ಸರಕಾರ ಬರೀ ಹತ್ತು ದಿನಗಳ ಒಳಗಾಗಿ ಕೊರೋನಾವೈರಸ್‌ ರೋಗಿಗಳ ಚಿಕಿತ್ಸೆಗೆಂದೇ 1000 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿದೆ.ಚೀನಕ್ಕೆ ಇದು ಹೊಸದೇನೂ ಅಲ್ಲ. ಸಾರ್ ವೈರಸ್‌ ಹಾವಳಿ ಕಾಣಿಸಿದಾಗ ಒಂದು ವಾರದಲ್ಲಿ ಆಸ್ಪತ್ರೆ ನಿರ್ಮಿಸಿತ್ತು. ಇದು ಒಂದು ಆಡಳಿತ ವ್ಯವಸ್ಥೆ ಕಾರ್ಯವೆಸಗಬೇಕಾದ ರೀತಿ. ಅಲ್ಲಿ ಸರ್ವಾಧಿಕಾರ ನಡೆಯುತ್ತದೋ, ಜನತಂತ್ರವಿದೆಯೋ ಎಂಬುದೆಲ್ಲ ಈ ಸಂದರ್ಭದಲ್ಲಿ ಮುಖ್ಯವಲ್ಲ. ಸರಕಾರ ಜನರ ಆರೋಗ್ಯದ ಬಗ್ಗೆ ವಹಿಸಿದ ಕಾಳಜಿ ಪ್ರಶಂಸಾರ್ಹ. ಮಾನವ ಸಂಪನ್ಮೂಲವನ್ನು ಯಾವ ರೀತಿ ದೇಶ ನಿರ್ಮಾಣದಲ್ಲಿ ಬಳಸಿಕೊಳ್ಳಬಹುದು ಎನ್ನುವುದನ್ನು ಚೀನವನ್ನು ನೋಡಿ ಕಲಿಯಬೇಕು.

ನಮ್ಮ ದೇಶದಲ್ಲಿ ಇಂಥ ಒಂದು ಪ್ರತಿಸ್ಪಂದನೆಯನ್ನು ನಿರೀಕ್ಷಿಸಲು ಸಾಧ್ಯವೆ? ಹತ್ತು ದಿನ ಬಿಡಿ ಹತ್ತು ವರ್ಷಗಳಾದರೂ ಒಂದು ಸಾಮಾನ್ಯ ಫ್ಲೈಓವರ್‌ ನಿರ್ಮಿಸಿಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ.ಮಲೇರಿಯ , ಡೆಂ , ಇಲಿಜ್ವರದಂಥ ವೈರಸ್‌ ಮೂಲಕ ಹರಡುವ ಸಾಂಕ್ರಾಮಿಕ
ರೋಗಗಳು ಪ್ರತಿ ಮಳೆಗಾಲದಲ್ಲಿ ಸಾಮಾನ್ಯ ವೆಂಬಂತೆ ಬಂದು ಹೋಗುತ್ತಿವೆ. ಇವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವಿಧಾನವಿನ್ನೂ ನಮಗೆ ಗೊತ್ತಿಲ್ಲ.

ಕೊರೊನಾವೈರಸ್‌ಗೆ ಇನ್ನೂ ಔಷಧವನ್ನು ಕಂಡು ಹಿಡಿದಿಲ್ಲ. ಔಷಧಿ ಕಂಡು ಹಿಡಿಯಬೇಕಾದರೆ ವೈರಸ್‌ನ ಮೂಲ, ಸ್ವರೂಪ ಇತ್ಯಾದಿಗಳು ತಿಳಿಯಬೇಕು. ಹೀಗಾಗಿ ಸದ್ಯಕ್ಕೆ ರೋಗ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಜನರು ಕೂಡ ಆಡಳಿತದ ಜೊತೆಗೆ ಸಹಕರಿಸುವ ಅಗತ್ಯವಿದೆ. ಕೊರೊನಾವೈರಸ್‌ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕು ಆಗಿರುವುದರಿಂದ ಸ್ವತ್ಛತೆಗೆ
ಗರಿಷ್ಠ ಆದ್ಯತೆಯನ್ನು ಕೊಡಬೇಕು. ರೋಗ ಲಕ್ಷಣವೇನಾದರೂ ಕಂಡು ಬಂದರೆ ಕೂಡಲೇ
ವೈದ್ಯರ ಬಳಿಗೆ ಧಾವಿಸಬೇಕು. ಜೊತೆಗೆ ಆಡಳಿತ ವ್ಯವಸ್ಥೆ ವಿಧಿಸುವ ಪ್ರಯಾಣ ನಿರ್ಬಂಧ ಇತ್ಯಾದಿ
ಸಲಹೆ ಸೂಚನೆಗಳನ್ನು ಪಾಲಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next