ಭಾರತದ ಗಡಿಯಂಚಿನ ಲಡಾಖ್‌ನಲ್ಲಿ ವಿಶ್ವದ ಅತೀ ಎತ್ತರದ ರಸ್ತೆಯನ್ನು ನಿರ್ಮಿಸಲಾಗಿದೆ. ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (ಬಿಆರ್‌ಒ)ಯು ಸಿಯಾಚಿನ್ ಹಿಮನದಿಗಿಂತ ಎತ್ತರದಲ್ಲಿರುವ ಪೂರ್ವ ಲಡಾಖ್‌ನ ಉಮ್ಲಿಂಗ್ ಲಾ ಪಾಸ್‌ನಲ್ಲಿ ಸಮುದ್ರಮಟ್ಟ ಕ್ಕಿಂತ 19,300 ಅಡಿಗಳಷ್ಟು ಎತ್ತರ ದಲ್ಲಿ ಈ ರಸ್ತೆಯನ್ನು ನಿರ್ಮಿಸಿದೆ.
ಎವರೆಸ್ಟ್ ಬೇಸ್ ಕ್ಯಾಂಪ್‌ಗಿಂತಲೂ ಎತ್ತರ :
ಈ ರಸ್ತೆಯು ಎವರೆಸ್ಟ್ ಬೇಸ್ ಕ್ಯಾಂಪ್‌ಗಿಂತಲೂ ಎತ್ತರದಲ್ಲಿದೆ. 52 ಕಿ.ಮೀ. ಉದ್ದದ ಈ ಟಾರು ರಸ್ತೆಯಲ್ಲಿ ವಾಹನಗಳು ಸುಗಮ ವಾಗಿ ಸಂಚರಿಸಬಹುದಾಗಿದೆ. ಉಮ್ಲಿಂಗ್ ಲಾ ಪಾಸ್ ಮೂಲಕ ಪೂರ್ವ ಲಡಾಖ್‌ನ ಚುಮಾರ್ ಸೆಕ್ಟರ್‌ನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಟಿಬೆಟ್‌ನಲ್ಲಿರುವ ಮೌಂಟ್ ಎವರೆಸ್ಟ್‌ನ ಉತ್ತರ ಬೇಸ್ 16,900 ಅಡಿ ಎತ್ತರದಲ್ಲಿದ್ದರೆ, ನೇಪಾಲದಲ್ಲಿರುವ ದಕ್ಷಿಣ ಬೇಸ್ 17,598 ಅಡಿಗಳಷ್ಟು ಎತ್ತರದಲ್ಲಿದೆ. ಮೌಂಟ್ ಎವರೆಸ್ಟ್‌ನ ಎತ್ತರವು 29,000 ಅಡಿಗಳಿಗಿಂತ ಕೊಂಚ ಅಧಿಕವಾಗಿದೆ. ಸಿಯಾಚಿನ್ ಹಿಮನದಿಯು 17,700 ಅಡಿಗಳಷ್ಟು ಎತ್ತರದಲ್ಲಿದ್ದರೆ ಲೇಹ್‌ನ ಖರ್ದುಂಗ್ ಲಾ ಪಾಸ್ 17,582 ಅಡಿ ಎತ್ತರದಲ್ಲಿದೆ.
ಬೊಲಿವಿಯಾವನ್ನು ಹಿಂದಿಕ್ಕಿದ ಭಾರತ :
ಬೊಲಿವಿಯಾವು ಸಮುದ್ರ ಮಟ್ಟಕ್ಕಿಂತ 18,953 ಅಡಿಗಳಷ್ಟು ಎತ್ತರದಲ್ಲಿ ರಸ್ತೆಯನ್ನು ಈ ಹಿಂದೆ ನಿರ್ಮಿಸಿದ್ದು ಇದು ಈವರೆಗೆ ವಿಶ್ವದಲ್ಲಿಯೇ ಅತ್ಯಂತ ಎತ್ತರದ ರಸ್ತೆ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಇದೀಗ ಭಾರತ ಲಡಾಖ್‌ನಲ್ಲಿ 19,300 ಅಡಿಗಳಷ್ಟು ಎತ್ತರದಲ್ಲಿ ರಸ್ತೆಯನ್ನು ನಿರ್ಮಿಸುವ ಮೂಲಕ ಈ ದಾಖಲೆಯನ್ನು ಮುರಿದಿದೆ.
ದುರ್ಗಮ ಪ್ರದೇಶ :
ಲಡಾಖ್‌ನ ಉಮ್ಲಿಂಗ್ ಲಾ ಪಾಸ್ ಅತ್ಯಂತ ಸಂಕೀರ್ಣ ಮತ್ತು ಕಠಿನ ಭೂ ಪ್ರದೇಶ ಮತ್ತು ಅತ್ಯಂತ ಕಡಿಮೆ ಎಂದರೆ ಚಳಿಗಾಲದಲ್ಲಿ ಮೈನಸ್ 40 ಡಿ. ಸೆ. ತಾಪಮಾನ ಇರುತ್ತದೆ. ಅಲ್ಲದೆ ಇಲ್ಲಿ ಆಮ್ಲಜನಕದ ಮಟ್ಟ ಸಾಮಾನ್ಯ ಸ್ಥಳಗಳಿಗೆ ಹೋಲಿಸಿದರೆ 50 ಪ್ರತಿಶತ ಕಡಿಮೆ ಇರುತ್ತದೆ. ಇಂತಹ ಕ್ಲಿಷ್ಟಕರ ಸನ್ನಿವೇಶದ ಹೊರತಾಗಿಯೂ ಬಿಆರ್‌ಒ ಈ ರಸ್ತೆಯನ್ನು ನಿರ್ಮಿ ಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಸ್ಥಳೀಯರಿಗೆ ವರದಾನ :
ಲೇಹ್‌ನಿಂದ ಚಿಸುಮ್ಲೆ ಮತ್ತು ಡೆಮ್ಲೊಕ್ ಅನ್ನು ಸಂಪರ್ಕಿಸುವ ನೇರ ರಸ್ತೆ ಇದಾಗಿರುವುದರಿಂದ ಸ್ಥಳೀಯರಿಗೆ ವರದಾನವಾಗಿದೆ. ಲೇಹ್‌ಗೆ ನೇರ ರಸ್ತೆ ಸಂಪರ್ಕ ಸಾಧ್ಯವಾಗಿರುವುದರಿಂದ ಈ ಪ್ರದೇಶಗಳ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳ್ಳಲಿದೆ. ಅಲ್ಲದೆ ಲಡಾಖ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ಸಹಕಾರಿಯಾಗಲಿದೆ.