Advertisement

ಆತ್ಮ ಪರಮಾತ್ಮನ ನಡುವಿನ ಸೇತುವೆ ಯೋಗ: ಡಾ.ಜನಾರ್ಧನ ನಾಯಕ್‌

03:45 PM Jun 21, 2019 | Vishnu Das |

ವಿದ್ಯಾನಗರ: ಭಾರತೀಯ ಸಂಸ್ಕೃತಿ ಶ್ರೇಷ್ಟವಾದ ಜೀವನ ಸೂತ್ರಗಳನ್ನು ಒಳಗೊಂಡಿದ್ದು ಯೋಗವು ಅದರ ಒಂದು ಪ್ರಮುಖ ಭಾಗ. ಸುಸಂಸ್ಕೃತ ಬದುಕಿಗೆ ರಹದಾರಿಯಾಗಿರುವ ಯೋಗದಲ್ಲಿ ಮಾನಸಿಕ ದೈಹಿಕ ಆರೋಗ್ಯದ ರಹಸ್ಯ ಅಡಕವಾಗಿದೆ. ದೇಶ ವಿದೇಶಗಳಲ್ಲಿ ಯೋಗ ತನ್ನ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಆಧುನಿಕ ವೈದ್ಯಶಾಸ್ತ್ರದಲ್ಲಿಯೂ ಯೋಗಕ್ಕೆ ವಿಶಿಷ್ಟವಾದ ಸ್ಥಾನವಿದೆ. ಹಿತ್ತಿಲ ಗಿಡ ಮದ್ದಲ್ಲ ಎನ್ನುವಂತೆ ಭಾರತೀಯ ಸಂಸ್ಕೃತಿಯ, ಜೀವನ ಪದ್ಧತಿಯ ಭಾಗವಾಗಿದ್ದರೂ ಕಾಲಕ್ರಮೇಣ ಮಹತ್ವ ಕಳೆದುಕೊಂಡ ಯೋಗದ ಅಗತ್ಯವನ್ನು ಅರಿತ ವಿಧೇಶಿಯರು ಯೋಗ ಅಭ್ಯಾಸವನ್ನು ಪ್ರಾರಂಭಿಸಿದಾಗ ಮತ್ತೆ ಭಾರತೀಯರಲ್ಲಿ ಆ ಬಗ್ಗೆ ಪ್ರಜ್ಞೆ ಜಾಗೃತವಾಯಿತು. ಕಳೆದ ಐದು ವರ್ಷಗಳಿಂದ ನಾವು ಯೋಗಕ್ಕೆ ನೀಡುವ ಪ್ರಾಮುಖ್ಯತೆ ಹೆಚ್ಚಾಗಿದೆ. ವಿಶ್ವ ಯೋಗ ದಿನಾಚರಣೆಯ ಪ್ರಾರಂಭವೇ ಇದಕ್ಕೆ ಕಾರಣ ಎಂದು ಡಾ,ಜನಾರ್ಧನ ನಾಯಕ್‌ ಹೇಳಿದರು. ಅವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯೋಗ ತರಬೇತಿ ಕೇಂದ್ರದ ಆಶ್ರಯದಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆಯನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಕಾಲೇಜುಗಳಲ್ಲೂ ಯೋಗ ಪಠ್ಯ ವಿಷಯವಾಗಿರುವುದು ಸಂತಸದ ಸಂಗತಿ. ಆಧುನಿಕ ವೈದ್ಯಶಾಸ್ತ್ರದಲ್ಲಿ ಯೋಗಕ್ಕೆ ವಿಶಿಷ್ಟ ಸ್ಥಾನವಿದೆ. ಯಮ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು ಪ್ರಜ್ಞಾವಂತನಾಗಿ ಬದುಕುವ ಕಲೆ ಯೋಗದಲ್ಲಿದೆ. ಆತ್ಮ ಪರಮಾತ್ಮನ ನಡುವಿನ ಸೇತುವೆ ಯೋಗ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿರು.

Advertisement

ನಗರದ ದ್ವಾರಕಾನಗರ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿಯ ಉಪಾಧ್ಯಕ್ಷ ಪ್ರೋ .ಶ್ರೀನಾಥ್‌ ಅಧ್ಯಕ್ಷತೆವಹಿಸಿ ಮಾತನಾಡಿ ಎರಡು ವರ್ಷಗಳಿಂದ ಉಚಿತ ಯೋಗ ತರಭೇತಿ ನೀಡುತ್ತಿರುವ ಈ ಯೋಗ ಕೇಂದ್ರವು ಆಸಕ್ತರಿಗೆ ಆಶ್ರಯವಾಗಿದೆ. ಇಲ್ಲಿನ ಹಲವಾರು ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಯೋಗ ಪ್ರದರ್ಶನ ನೀಡಿದ್ದಾರೆ. ಯೋಗ ನಮ್ಮ ಬದುಕಿನ ಭಾಗವಾದಾಗ ವೇಗದ ಯುಗದಲ್ಲೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಶಾರೀರಿಕ ಬೌದ್ಧಿಕ ಆರೋಗ್ಯದ ನಿಜವಾದ ಸಂರಕ್ಷಕ ಯೋಗ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸಚಿನ್‌ ಕುಮಾರ್‌ ಯೋಗದಿಂದ ಸಮಚಿತ್ತವನ್ನು ಕಾಯ್ದುಕೊಳ್ಳುವ ಮಕ್ಕಳು ಮುಂದಿನ ಸುದೃಢ ಭಾರತದ ನಿಜವಾದ ಆಸ್ತಿ ಎಂದು ಹೇಳಿದರು. ಯೋಗ ಗುರು ದೇವದಾಸ್‌ ಕೊರಕ್ಕೋಡು ಯೋಗ ತರಗತಿ ನಡೆಸಿದರು. ಚೈತನ್ಯ ಟ್ರಸ್ಟ್‌ನ ಕಾರ್ಯದರ್ಶಿ ಮೋಹನ್‌ ಕುಮಾರ್‌ ಪಾರೆಕಟ್ಟ ಹಾಗೂ ಮಮತಾ ಆಚಾರ್ಯ ಕರಂದಕ್ಕಾಡು ಶುಭಾಶಂಸನೆಗೈದರು.ಮಂಜುನಾಥ್‌ ಶೆಣೈ ಪ್ರಾರ್ಥನೆ ಹಾಡಿದರು. ಜತೆಕಾರ್ಯದರ್ಶಿ ಸ್ವಾಗತಿಸಿ ಯೋಗ ಶಿಕ್ಷಕಿ ತೇಜ ಕುಮಾರಿ ಧನ್ಯವಾದ ಸಮರ್ಪಿಸಿದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next