ಗ್ರೀಕೊ ರೋಮನ್ ಸ್ಪರ್ಧೆಯ 97 ಕೆಜಿ ವಿಭಾಗದಲ್ಲಿ ಹರ್‌ದೀಪ್ ಮೊರಕ್ಕೋದ ಚೌಕ್ರಿ ಅತಫಿ ವಿರುದ್ಧ 8-4 ಅಂಕ ಗಳಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ ಗ್ರೀಸ್‌ನ ಲಾವೊ ಕ್ರಾಟಿಸ್ ಕೆಸಿಡಿಸ್ ವಿರುದ್ಧ ಸೋತರು. 77 ಕೆಜಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಗುರ್‌ಪ್ರೀತ್ ತಂತ್ರಗಾರಿಕೆಯ ಹೆಚ್ಚುವರಿ ಅಂಕಗಳಿಂದ (0-9) ಕೈರಟಾಬೆಕ್ ತುಗೊಲಾವೊ ವಿರುದ್ಧ ಸೋಲನುಭವಿಸಿದರೆ, ಮತ್ತೂಬ್ಬ ಭಾರತೀಯ ಕುಸ್ತಿಪಟು ನವೀನ್ ಅರ್ಹತಾ ಸುತ್ತಿನಲ್ಲಿ ನಾರ್ವೆಯ ಆಸ್ಕರ್ ವಿರುದ್ಧ 1-4 ಅಂಕಗಳಿಂದ ಮುಗ್ಗರಿಸಿ ನಿರಾಸೆ ಮೂಡಿಸಿದರು.
Advertisement
ಈ ಮೂಲಕ ಈ ಕೂಟದಲ್ಲಿ ಭಾರತೀಯ ಆಟ ಅಂತ್ಯಗೊಂಡಿದ್ದು, ಭಾರತ ಕೇವಲ 2 ಪದಕಗಳನ್ನಷ್ಟೇ ಸಂಪಾದಿಸಿದೆ. ಪುರುಷರ ವಿಭಾಗದಲ್ಲಿ ಭಜರಂಗ್ ಪೂನಿಯ ಬೆಳ್ಳಿ ಪದಕ ಹಾಗೂ ವನಿತಾ ವಿಭಾಗದಲ್ಲಿ ಪೂಜಾ ದಂಡಾ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದರು.
ಭಾರತದ ಈ ವರೆಗಿನ ಅತ್ಯುತ್ತಮ ಸಾಧನೆ 2013ರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ದಾಖಲಾಗಿತ್ತು. ಅಲ್ಲಿ 3 ಪದಕಗಳು ಒಲಿದಿದ್ದವು. ಅಮಿತ್ ಬೆಳ್ಳಿ (55 ಕೆಜಿ), ಭಜರಂಗ್ ಕಂಚು (60 ಕೆಜಿ) ಹಾಗೂ ಗ್ರೀಕೊ ರೋಮನ್ ವಿಭಾಗದಲ್ಲಿ ಸಂದೀಪ್ ತುಳಸಿ ಯಾದವ್ ಐತಿಹಾಸಿಕ ಕಂಚಿನ ಪದಕ ಜಯಿಸಿದ್ದರು.