Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ವನಿತೆಯರ ಕೀರ್ತಿ ಪತಾಕೆ

12:43 PM Mar 08, 2021 | Team Udayavani |

ಎಲ್ಲ ವರ್ಷದಂತಲ್ಲ ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಇದೊಂದು ವಿಶೇಷ ಹೊತ್ತಿನಲ್ಲಿ, ವಿಶೇಷ ರೂಪದಲ್ಲಿ ಬರುತ್ತಿರುವ ದಿನಾಚರಣೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ನಾನಾ ಹೊಣೆ ಹೊತ್ತಿರುವ, ಪ್ರತಿಯೊಂದು ಸುವ್ಯವಸ್ಥಿತವಾಗಿ ಹೋಗುವಂತೆ ಮಾಡುತ್ತಿರುವ ಮಹಿಳೆಯರ ನೆನೆಯದೇ ಇರುವುದು ತಪ್ಪಾದೀತು. ಕೋವಿಡ್ ನಿಯಂತ್ರಣದಿಂದ ಹಿಡಿದು, ಆರ್ಥಿಕತೆಯನ್ನುಬೆಳಗಿಸುವ, ಬಾಹ್ಯಾಕಾಶದಲ್ಲೂ ಜಗತ್ತಿನ ಮತ್ತು ದೇಶದ ಕೀರ್ತಿ ಬೆಳಗಿಸಿದ ಶ್ರೇಯಸ್ಸು ನಮ್ಮ, ನಿಮ್ಮ ನಡುವಿನ ಮಹಿಳೆಯರಿಗೆ ಸಲ್ಲುತ್ತದೆ.

Advertisement

ನಿರ್ಮಲಾ ಸೀತಾರಾಮನ್‌ :

ಕೇಂದ್ರದಲ್ಲಿ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌, ಎರಡು ವಿಷಯದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಒಂದು ದೇಶದ ಮೊದಲ ಸ್ವತಂತ್ರ ರಕ್ಷಣಾ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದು, ಎರಡನೆಯದು, ದೇಶದ ಮೊದಲ ವಿತ್ತ ಸಚಿವೆಯಾಗಿ ಕೆಲಸ ನಿರ್ವಹಿಸುತ್ತಿರುವುದು. ದೆಹಲಿಯ ಜೆಎನ್‌ಯುವಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂಫಿಲ್‌ ಮುಗಿಸಿರುವ ನಿರ್ಮಲಾ, ಅರ್ಥಶಾಸ್ತ್ರದಲ್ಲೇ ಪಿಎಚ್‌ಡಿ ಮಾಡುವ ಗುರಿ ಹೊಂದಿ ಆರಂಭದಲ್ಲೇ ಕೈಬಿಟ್ಟವರು. ಕೊರೊನಾ ಕಾಲದಲ್ಲಿ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌

ಘೋಷಿಸಿ, ಆರ್ಥಿಕತೆಗೆ ಒಂದಷ್ಟು ಆ್ಯಕ್ಸಿಜನ್‌ ತುಂಬಿದ್ದಾರೆ. ಸದ್ಯ ಪೋರ್ಬ್ಸ್ ಪಟ್ಟಿ ಪ್ರಕಟಿಸಿರುವ ಜಗತ್ತಿನ 100 ಸಾಧಕ ಮಹಿಳೆಯರ ಸಾಲಿನಲ್ಲಿ 41ನೇ ಸ್ಥಾನ ಪಡೆದಿದ್ದಾರೆ.

ಕಮಲಾ ಹ್ಯಾರಿಸ್‌, ಅಮೆರಿಕ ಉಪಾಧ್ಯಕ್ಷೆ :

Advertisement

ಅಮೆರಿಕದ ಯಶಸ್ಸಿನ ಹಿಂದೆ ಭಾರತೀಯರ ಕೊಡುಗೆ ಅಪಾರವೆಂದು ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶ್ಲಾ ಸಿದ್ದಾರೆ. ಇವರ ಈ ಶ್ಲಾಘನೆಗೆ ಪ್ರಮುಖ ಕಾರಣವೇ ಅಮೆರಿಕದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌. ಭಾರತೀಯ ಮೂಲದವರಾದ ಇವರು, ಮೂಲತಃ ವಕೀಲರು. 2017ರಿಂದ 2021ರ ವರೆಗೆ ಕ್ಯಾಲಿಫೋರ್ನಿಯಾದ ಸೆನೆಟರ್‌ ಆಗಿ ಸೇವೆಸಲ್ಲಿಸಿದ್ದಾರೆ. ಭಾರತೀಯ ಮೂಲದವರಾಗಿದ್ದು, ಅಮೆರಿಕದ ಅತ್ಯುನ್ನತ ಹುದ್ದೆಗೆ ಏರಿರುವುದು ಇಡೀ ದೇಶಕ್ಕೇ ಹೆಮ್ಮೆಯ ವಿಷಯ.

ಸಾರಾ ಗಿಲ್‌ಬರ್ಟ್‌, ಆಕ್ಸ್‌ಫ‌ರ್ಡ್‌ ವಿವಿ ವ್ಯಾಕ್ಸಿನಾಲಜಿ ಪ್ರೊಫೆಸರ್‌ (ಲಸಿಕೆ ಅಭಿವೃದ್ಧಿ ತಂಡದ ಸದಸ್ಯೆ) :

ಇಡೀ ಜಗತ್ತೇ ಕೋವಿಡ್ ದಿಂದ ನರಳುತ್ತಿರುವಾಗ ಇದರ ನಿಯಂತ್ರಣಕ್ಕೆ ಒಂದು ಲಸಿಕೆ ಬೇಕು ಎಂಬ ಚರ್ಚೆಗಳೂ ನಡೆಯುತ್ತಿದ್ದವು. ಇದರಲ್ಲಿ ಮೊದಲಿಗೆ ಕಂಡು ಬಂದಿದ್ದು ಇಂಗ್ಲೆಂಡ್‌ನ‌ ಆಕ್ಸ್‌ಫ‌ರ್ಡ್‌ ಕಂಪನಿಯ ಆಸ್ಟ್ರಾಜೆನಿಕಾ ಲಸಿಕೆ. ಈ ಲಸಿಕೆ ಹಿಂದಿನ ಶಕ್ತಿ ಸಾರಾ ಗಿಲ್‌ಬರ್ಟ್‌. ಇವರು ಆಕ್ಸ್‌ಫ‌ರ್ಡ್‌ ವಿವಿಯ ವ್ಯಾಕ್ಸಿನಾಲಜಿ ಪ್ರಾಧ್ಯಾಪಕರಾಗಿದ್ದಾರೆ. ಕೇವಲ ಕೋವಿಟ್ ವಷ್ಟೇ ಅಲ್ಲ ಭಾರತವೂ ಸೇರಿದಂತೆ ಜಗತ್ತಿನ ಬೇರೆ ಬೇರೆದೇಶಗಳನ್ನು ಬಾಧಿಸುತ್ತಿರುವ ಮಲೇರಿಯ ಲಸಿಕೆ ಶೋಧನೆಯಲ್ಲೂ ತೊಡಗಿದ್ದಾರೆ.

 ಏಂಜೆಲಾ ಮರ್ಕೆಲ್‌, ಜರ್ಮನಿ ಪ್ರಧಾನಿ :

ಕೋವಿಡ್ ನಿಯಂತ್ರಣದಲ್ಲಿ ಹೆಚ್ಚಾಗಿ ಲಾಕ್‌ಡೌನ್‌ ತಂತ್ರಗಾರಿಕೆಗೆ ಮೊರೆ ಹೋಗಿರುವ ಏಂಜೆಲಾ ಮರ್ಕೆಲ್‌ ಅವರು, ಜರ್ಮನಿಯಷ್ಟೇ ಅಲ್ಲ, ಇಡೀ ಐರೋಪ್ಯ ಒಕ್ಕೂಟದ ನಂಬಿಕಸ್ಥ ನಾಯಕಿ. 2005ರಿಂದಲೂ ಜರ್ಮನಿಯ ಗದ್ದುಗೆ ಹಿಡಿದಿರುವ ಮರ್ಕಲ್‌ ಅವರ ಅಧಿಕಾರಾವಧಿ 2021, ಅಂದರೆ ಈ ವರ್ಷವೇ ಮುಕ್ತಾಯವಾಗಲಿದೆ. ಮತ್ತೂಮ್ಮೆ ಚಾನ್ಸೆಲರ್‌ ಆಗಲ್ಲವೆಂದಿದ್ದಾರೆ. ಇತ್ತೀಚೆಗಷ್ಟೇ ಫೋರ್ಬ್ಸ್ ಪತ್ರಿಕೆ ಜಗತ್ತಿನ ನಂ.1 ಮಹಿಳಾ ನಾಯಕಿ ಎಂಬ ಹೆಗ್ಗಳಿಕೆಯನ್ನೂ ನೀಡಿದೆ.

ಗೀತಾ ಗೋಪಿನಾಥ್‌ :

ಮೂಲತಃ ಮೈಸೂರಿನವರಾದ ಗೀತಾ ಗೋಪಿನಾಥ್‌ ಅವರು, ಸದ್ಯ ಐಎಂಎಫ್ನ ಮುಖ್ಯ ಆರ್ಥಿಕ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಆರಂಭದ ಶಿಕ್ಷಣವನ್ನು ಮೈಸೂರಿನಲ್ಲೇ ಮುಗಿಸಿದ್ದ ಅವರು, ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ತೆರಳಿದ್ದರು. ದೆಹಲಿ ಸ್ಕೂಲ್‌ ಆಫ್ ಎಕಾನಾಮಿಕ್ಸ್‌ನಲ್ಲಿ ಎಂಎ ಮುಗಿಸಿ, ಬಳಿಕ ವಾಷಿಂಗ್ಟನ್‌ ವಿವಿಯಲ್ಲಿ ಎಂಎ ಪದವಿ ಮುಗಿಸಿದ್ದಾರೆ. ಹಾಗೆಯೇ ಆರ್ಥಶಾಸ್ತ್ರದಲ್ಲಿ ಪಿಎಚ್‌ಡಿಯನ್ನೂ ಮುಗಿಸಿದ್ದಾರೆ. ಕೋವಿಡ್ ಅವಧಿಯಲ್ಲಿ ಇಡೀ ಜಗತ್ತು ಎದುರಿಸಿದ ಆರ್ಥಿಕ ಮಹಾ ಕುಸಿತವನ್ನು ದಿ ಗ್ರೇಟ್‌ ಲಾಕ್‌ಡೌನ್‌ ಎಂದು ಕರೆದಿದ್ದಾರೆ.

ಸುಧಾಮೂರ್ತಿ :

ಅದು ಪ್ರವಾಹವೇ ಇರಲಿ ಅಥವಾ ಇನ್ನಾವುದೇ ಕಷ್ಟದ ಸನ್ನಿವೇಶವಿರಲಿ ಮೊದಲಿಗೆ ಮಿಡಿಯುವುದೇ ಮಾತೃಹೃದಯಕ್ಕೆ ಹೆಸರುವಾಸಿಯಾಗಿರುವ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಅವರು. ಕೊರೊನಾ ಸಂದರ್ಭದಲ್ಲಿ ಆಹಾರವಿಲ್ಲದೇ ನರಳುತ್ತಿ ದ್ದವರಿಗೆ ಕಿಟ್‌ ಮಾಡಿ ಹಂಚಿದ್ದೂ ಅಲ್ಲದೇ ಕೋವಿಡ್ ನಿಯಂತ್ರಣ ದಲ್ಲಿ ಪರಿಹಾರವಾಗಿ 100 ಕೋಟಿರೂ.ಗಳನ್ನೂ ಪ್ರತಿಷ್ಠಾನದ ಮೂಲಕನೀಡಿದ್ದಾರೆ. ಇದರಲ್ಲಿ ಅರ್ಧದಷು ಪಿಎಂ ಕೇರಿಗೆ ನೀಡಿದ್ದರೆ ಉಳಿದದ್ದನ್ನು ಇತರೆ ಪರಿಹಾರ ಕಾರ್ಯಗಳಲ್ಲಿ ಬಳಸಿದ್ದಾರೆ.

ಕಿರಣ್‌ ಮಜುಮ್ದಾರ್‌ ಶಾ :

ಬಯೋಕಾನ್‌ ಸಂಸ್ಥೆಯ ಸಂಸ್ಥಾಪಕಿಯಾಗಿರುವ ಕಿರಣ್‌ ಮಜುಮ್ದಾರ್‌ ಶಾ ಅವರು, ಕಳೆದ ವರ್ಷವಷ್ಟೇ ಇವೈ ವರ್ಲ್ಡ್ ಎಂಟರ್ಪೆನರ್‌ ಆಫ್ ಇಯರ್‌ ಎಂಬ ಪ್ರಶಸ್ತಿ ಗಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಯೋಕಾನ್‌ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ದೊಡ್ಡದು. 2019ರಲ್ಲಿ ಪೋರ್ಬ್ಸ್ ಕಂಪನಿ ಪ್ರಕಟಿಸಿದ್ದ ಜಗತ್ತಿನ 100 ಪವರ್‌ಫ‌ುಲ್‌ ಮಹಿಳೆಯರ ಪಟ್ಟಿಯಲ್ಲಿ 68ನೇ ಸ್ಥಾನ ಗಳಿಸಿಕೊಂಡಿದ್ದರು. ಕೋವಿಡ್ ನಿಯಂತ್ರಣದಲ್ಲೂ ಇವರ ಕಂಪನಿ ರೂಪಿಸಿದ್ದ ಔಷಧವನ್ನು ಬಳಸಿಕೊಳ್ಳಲು ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿತ್ತು.

ಅರೋರಾ ಆಕಾಂಕ್ಷಾ :

ಹರ್ಯಾಣದಲ್ಲಿ ಹುಟ್ಟಿ, ಬಳಿಕ ಸೌದಿ ಅರೆಬಿಯಾಗೆ ತೆರಳಿ, ಅಲ್ಲಿ 9ನೇ ವರ್ಷದ ವರೆಗೆ ಇದ್ದು ಮತ್ತೆ ವಾಪಸ್‌ ಭಾರತಕ್ಕೆ ಬಂದು 18ನೇ ವಯಸ್ಸಿನವರೆಗೆ ಇಲ್ಲೇ ಇದ್ದು ತೆರಳಿ ಈಗ ಕೆನಡಾದಲ್ಲಿ ಬದುಕು ಕಟ್ಟಿಕೊಂಡಿರುವ ಅರೋರಾ ಅಕಾಂಕ್ಷಾ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧೆ ಮಾಡುತ್ತಿದ್ದಾರೆ. 34 ವರ್ಷದ ಅರೋರಾಗೆ ರಾಜ ತಾಂತ್ರಿಕಹುದ್ದೆಯನ್ನು ನಿಭಾಯಿಸಿದ ಯಾವುದೇ ಅನುಭವವಿಲ್ಲ. ಸಾಮಾನ್ಯವಾಗಿ ವಿಶ್ವಸಂಸ್ಥೆಯ ಈ ಹುದ್ದೆಗೆ ಏರುವುದು ರಾಜತಾಂತ್ರಿಕ ಹುದ್ದೆಯಲ್ಲಿ ಪರಿಣತಿ ಸಾಧಿಸಿದವರೇ. ಆದರೆ, ಅರೋರಾ ಅವರು ವಿಶ್ವ ಸಂಸ್ಥೆಯ ಧ್ಯೇಯೋದ್ಧೇಶಗಳು ಈಡೇರಲಿ, ಯುವಕರತ್ತ ವಿಶ್ವಸಂಸ್ಥೆ ತಿರುಗಿ ನೋಡಲಿ ಎಂಬ ಕಾರಣಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ.

 

ಪ್ರೀತಿ ಪಟೇಲ್‌ :

ಅಮೆರಿಕದಂತೆಯೇ ಬ್ರಿಟನ್‌ ಸರ್ಕಾರದಲ್ಲೂ ಭಾರತೀಯರ ಪ್ರಾಬಲ್ಯ ಹೆಚ್ಚೇ ಇದೆ. ಅಲ್ಲಿನ ಗೃಹ ಖಾತೆ ಮತ್ತು ಹಣಕಾಸು ಖಾತೆಗಳೆರಡೂ ಭಾರತೀಯ ಮೂಲದವರ ಕೈನಲ್ಲೇ ಇದೆ. ವಿತ್ತ ಖಾತೆ ಇನ್ಫೋಸಿಸ್‌ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಅವರ ಕಡೆ ಇದ್ದರೆ, ಗೃಹ ಖಾತೆ ಪ್ರೀತಿ ಪಟೇಲ್‌ ಅವರ ಕಡೆ ಇದೆ. ಇವೆರಡೂ ಬ್ರಿಟನ್‌ ಪ್ರಧಾನಿ ಹುದ್ದೆ ನಂತರದ ಪ್ರಮುಖ ಸ್ಥಾನಗಳು. ಪ್ರೀತಿ ಪಟೇಲ್‌ ಅವರ ಅಜ್ಜ-ಅಜ್ಜಿ ಗುಜರಾತ್‌ ಮೂಲದವರಾಗಿದ್ದು, ಉಗಾಂಡಾಗೆ ತೆರಳಿ, ಅಲ್ಲಿಂದ ಬ್ರಿಟನ್‌ಗೆ ಹೋಗಿ ನೆಲೆಸಿದವರು.

ಸೈನಾ ನೆಹ್ವಾಲ್‌, ಪಿ.ವಿ.ಸಿಂಧು :

ದೇಶದ ಬಾಡ್ಮಿಂಟನ್‌ ಕ್ಷೇತ್ರದಲ್ಲಿ ಕೇಳಿಬರುವ 2ಪ್ರಮುಖ ಹೆಸರು ಇವು. 30 ವರ್ಷದ ಸೈನಾ ನೆಹ್ವಾಲ್‌ ಅವರು ಇದುವರೆಗೆ 433 ಪಂದ್ಯಗಳಲ್ಲಿ ಗೆದ್ದು, 24 ಪ್ರಮುಖ ಟೂರ್ನಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. 2015ರಲ್ಲಿ ನಂಬರ್‌ 1 ಸ್ಥಾನಕ್ಕೇರಿದ್ದ ಇವರು ಸದ್ಯ 20ನೇ ರ್‍ಯಾಂಕಿಂಗ್‌ನಲ್ಲಿದ್ದಾರೆ. ಇನ್ನು 25 ವರ್ಷ ವಯಸ್ಸಿನ ಪಿ.ವಿ.ಸಿಂಧು ಅವರು, 337 ಪಂದ್ಯಗಳಲ್ಲಿ ಗೆದ್ದು, 15 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 2017ರಲ್ಲಿ 2ನೇ ರ್‍ಯಾಂಕಿಂಗ್‌ಗೆ ಏರಿದ್ದ ಸಿಂಧು, ಈಗ 7ನೇ ರ್‍ಯಾಂಕಿಂಗ್‌ನಲ್ಲಿ ಇದ್ದಾರೆ.

ಸ್ಮತಿ ಮಂಧಾನ , ಮಿಥಾಲಿ ರಾಜ್‌ :

ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಇವರಿಬ್ಬರ ಹೆಸರು ದೊಡ್ಡದು. ಸ್ಮತಿ ಮಂಧಾನ ಅವರು ಹಾಲಿ ಟಿ20 ತಂಡದ ನಾಯಕಿಯಾಗಿದ್ದರೆ, ಮಿಥಾಲಿ ರಾಜ್‌ ಅವರು ಏಕದಿನ ತಂಡದ ನಾಯಕಿಯಾಗಿದ್ದಾರೆ. ಸ್ಮತಿ ಮಂಧಾನ ಅವರುಏಕದಿನ ಮತ್ತು ಟಿ20ಯಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ್ದಾರೆ. ಹಾಗೆಯೇ, ಮಿಥಾಲಿ ರಾಜ್‌ ಅವರುಹಿರಿಯ ಆಟಗಾರ್ತಿಯಾಗಿದ್ದು,ಏಕದಿನದಲ್ಲಿ 7 ಶತಕ, 53 ಅರ್ಧಶತಕಗಳಿಸಿದ್ದಾರೆ. ಹಾಗೆಯೇ ಟಿ-20ಯಲ್ಲೂ 17 ಅರ್ಧಶತಕ ಬಾರಿಸಿದ್ದಾರೆ.

 

ಮಮತಾ ಬ್ಯಾನರ್ಜಿ :

ಪ್ರಸ್ತುತ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ, ಫೈರ್‌ ಬ್ರಾಂಡ್‌ ನಾಯಕಿ ಎಂದೇ ಕರೆಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಎಡಪಕ್ಷಗಳನ್ನು ಬದಿಗೆ ಸರಿಸಿ ಸತತ ಎರಡು ಬಾರಿ ಸಿಎಂ ಆಗಿ ಈಗ ಮೂರನೇ ಬಾರಿಗೆ ಸಿಎಂ ಹುದ್ದೆಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹುಟ್ಟು ಹೋರಾಟಗಾರ್ತಿ ಯಾಗಿರುವ ಮಮತಾಬ್ಯಾನರ್ಜಿ, ಜೀವನದಲ್ಲಿ ರಾಜಕೀಯ ವಿರೋಧಿಗಳಿಂದ ನಾನಾ ಪೆಟ್ಟುಗಳನ್ನೂತಿಂದಿದ್ದಾರೆ. ಎಲ್ಲಾ ಅಡೆತಡೆಗಳನ್ನು ಮೀರಿಒಂಟಿಯಾಗಿಯೇ ಟಿಎಂಸಿ ಪಕ್ಷ ಬೆಳೆಸಿಪಶ್ಚಿಮ ಬಂಗಾಳದಲ್ಲಿ ಅಗ್ರ ನಾಯಕಿಯಾಗಿ ಬೆಳೆದಿದ್ದಾರೆ.ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಇಡೀ ಬಿಜೆಪಿ ನಾಯಕತ್ವದ ಎದುರು ಒಬ್ಬರೇ ನಿಂತು ಏಕಾಂಗಿಯಾಗಿ ಹೋರಾಡುತ್ತಿದ್ದಾರೆ.

ನವೋಮಿ ಒಸಾಕಾ :

ಅಮೆರಿಕ, ಐರೋಪ್ಯ ದೇಶಗಳ ಪಾಲಿಗಷ್ಟೇ ಒಲಿದಿದ್ದ ಟೆನಿಸ್‌ ಅನ್ನು ತಮ್ಮದಾಗಿಸಿಕೊಂಡವರು ಜಪಾನ್‌ನ ನವೋಮಿ ಒಸಾಕಾ. ಇತ್ತೀಚೆಗಷ್ಟೇ ಸೆರೆನಾ ವಿಲಿ ಯಮ್ಸ್‌ ಅವರನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯನ್‌ ಓಪನ್‌ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. 243 ಪಂದ್ಯಗಳಲ್ಲಿ ಗೆದ್ದಿರುವ ಒಸಾಕಾ, ಏಳು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಮಹಿಳಾ ಟೆನ್ನಿಸ್‌ನಲ್ಲಿ ನಂ.1 ರ್‍ಯಾಂಕಿಂಗ್‌ ಹೊಂದಿದ್ದಾರೆ.

ಜೆಸಿಂಡಾ ಆರ್ಡೆರ್ನ್, ನ್ಯೂಜಿಲೆಂಡ್‌ ಪ್ರಧಾನಿ :

ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಮೆರಗು ತಂದವರಲ್ಲಿ ಮೊದಲಿಗರು ಎಂದರೆ ಇವರೇ. ನ್ಯೂಜಿಲೆಂಡ್‌ನ‌ ಪ್ರಧಾನಿಯಾಗಿರುವ ಇವರು, ಕೋವಿಡ್ ನಿಯಂತ್ರಣದಲ್ಲಿ ಇಡೀ ಜಗತ್ತೇ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ಆರಂಭದಲ್ಲೇ ಲಾಕ್‌ಡೌನ್‌ ಘೋಷಣೆ ಮಾಡಿದ್ದ ಜೆಸಿಂಡಾ, ಬಳಿಕ ತಮ್ಮ ಪ್ರಜೆಗಳ ಜತೆ ನೇರ ಸಂಪರ್ಕ ಇರಿಸಿಕೊಂಡು ಕೋವಿಡ್ ನಿಯಂತ್ರಣದಲ್ಲಿ ಯಶ ಸಾಧಿಸಿದ್ದರು. ವಿಶೇಷವೆಂದರೆ, ನ್ಯೂಜಿಲೆಂಡ್‌ ಕೋವಿಡ್ ಫ್ರೀಯಾದ ದಿನ ಪತ್ರಿಕಾಗೋಷ್ಠಿಯಲ್ಲೇ ನೃತ್ಯ ಮಾಡಿ ಸಂಭ್ರಮಿಸಿದ್ದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲೇ ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಜೆಸಿಂಡಾ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿ ದಾಖಲೆ ಬರೆಯಿತು.

ಪ್ರಿಯಾಂಕಾ ರಾಧಾಕೃಷ್ಣನ್‌, ನ್ಯೂಜಿಲೆಂಡ್‌ ಸಚಿವೆ :

ಪ್ರಿಯಾಂಕಾ ರಾಧಾಕೃಷ್ಣನ್‌ ನ್ಯೂಜಿಲೆಂಡ್‌ನಲ್ಲಿ ಸಚಿವೆಯಾಗಿರುವ ಮೊದಲ ಭಾರತೀಯ ಮೂಲದವರು. 2020ರಲ್ಲಿ ನಡೆದ ನ್ಯೂಜಿಲೆಂಡ್‌ ಚುನಾವಣೆಯಲ್ಲಿ ಗೆದ್ದು ಸದ್ಯ ಜೆಸಿಂಡಾ ಸಂಪುಟದಲ್ಲಿ ಸಮುದಾಯ ಮತ್ತು ಸ್ವಯಂಪ್ರೇರಿತ ವಲಯ; ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಸಂಪ್ರದಾಯ ಸಮುದಾಯಗಳು; ಯುವ ಸಮುದಾಯ ಸಚಿವೆ ಮತ್ತು ಸಾಮಾಜಿಕ ಅಭಿವೃದ್ಧಿ ಹಾಗೂ ಉದ್ಯೋಗ ಇಲಾಖೆಯ ಸಹ ಸಚಿವೆಯಾಗಿದ್ದಾರೆ. ಅಂದ ಹಾಗೆ ಇವರು ಚೆನ್ನೈನ ಮಲಯಾಳಿ ನಾಯರ್‌ ಕುಟುಂಬದಲ್ಲಿ ಜನಿಸಿದವರು. ಇವರ ತಾತ ಡಾ.ಸಿ.ಆರ್‌.ಕೃಷ್ಣ ಪಿಳ್ಳೆ„ ಅವರು ಕೇರಳ ರಾಜ್ಯ ಸ್ಥಾಪನೆ ವಿಚಾರದಲ್ಲಿ ಹೋರಾಟ ನಡೆಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next