ಯಲಬುರ್ಗಾ: ನೈರ್ಸಗಿಕ ಸಂಪತ್ತನ್ನು ಉಳಿಸಿ, ಬೆಳೆಸುವ ಹೊಣೆ ಎಲ್ಲರ ಮೇಲಿದೆ ಎಂದು ಪಪಂ ಸದಸ್ಯ ವಸಂತಕುಮಾರ ಭಾವಿಮನಿ ಹೇಳಿದರು.
ವಿಶ್ವ ವನ್ಯಜೀವಿ ದಿನಾಚರಣೆಯ ಸಪ್ತಾಹ ನಿಮಿತ್ತ ಪಟ್ಟಣದಲ್ಲಿ ಸಾಮಾಜಿಕ ಅರಣ್ಯ ವಿಭಾಗ ಇಲಾಖೆ ಗುರುವಾರ ಹಮ್ಮಿಕೊಂಡ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಕುರಿತು ಬೀದಿನಾಟಕ ಜಾಗೃತಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರದ ಬಗ್ಗೆ ಮುಂಜಾಗ್ರತೆ ವಹಿಸದಿದ್ದರೆ ಮುಂದಿನ ಜೀವ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರ ಉತ್ತಮ ಪರಿಸರ ನಿರ್ಮಾಣಕ್ಕಾಗಿ, ಸ್ವತ್ಛ ಪರಿಸರ ಅನುಷ್ಠಾನಕ್ಕಾಗಿ ಕೋಟ್ಯಂತರ ರೂ. ಅನುದಾನ ಬಳಕೆ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬರುತ್ತಿಲ್ಲ ಎಂದು ವಿಷಾದಿಸಿದರು. ಪಪಂ ಸದಸ್ಯ ರೇವಣೆಪ್ಪ ಹಿರೇಕುರಬರ ಮಾತನಾಡಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು. ಪರಿಸರ ನಾಶದಿಂದ ಮಳೆಯಾಗದೇ ಬರಗಾಲ ಆವರಿಸುತ್ತಿದೆ. ಬೆಟ್ಟ-ಗುಡ್ಡಗಳು ನಮ್ಮ ಸ್ವಾರ್ಥಕ್ಕೆ ಬರಿದಾಗುತ್ತಿದ್ದು, ಭವಿಷ್ಯದ ಪೀಳಿಗೆಗೆ ಹಸಿರು ಸಂಕುಲವೇ ಇಲ್ಲದಂತೆ ಮಾಡುತ್ತಿದ್ದೇವೆ. ಇಂತದುಸ್ಥಿತಿಯಿಂದ ಮಾನವ ಸಂಕುಲಕ್ಕೆಮಾತ್ರವಲ್ಲ ಪ್ರಕೃತಿಯಲ್ಲಿರುವ ಯಾವ ಜೀವಿಗೂ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಲಯ ಅರಣ್ಯಾಧಿಕಾರಿ ಫರಹನಾಜ್ ಮನಿಯಾರ್ ಮಾತನಾಡಿ, ಗಿಡ-ಮರಗಳನ್ನು ಬೆಳೆಸುವುದರಿಂದ ಪ್ರಾಣಿ, ಪಕ್ಷಿ ಹಾಗೂ ಮಾನವ ಸಂಕುಲ ಸಂರಕ್ಷಣೆ ಸಾಧ್ಯ. ಪ್ಲಾಸ್ಟಿಕ್ ಬಳಕೆಯಿಂದ ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಬಿಟ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಪಪಂ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಪಪಂ ಸದಸ್ಯರಾದ ಹನುಮಂತ ಭಜೆಂತ್ರಿ, ದೊಡ್ಡಯ್ಯ ಗುರುವಿನ, ಅರಣ್ಯ ಇಲಾಖೆ ನೌಕರಶರಣಪ್ಪ ಕದಾಂಪೂರ, ಚಂದ್ರು ಮರದಡ್ಡಿ ಇತರರಿದ್ದರು.