ಕಲಬುರಗಿ: ಜಗತ್ತಿನಲ್ಲಿ ಎರಡು ಮಹಾಯುದ್ಧಗಳು ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದು ಹೋಗಿವೆ. ಅತ್ಯಮೂಲ್ಯವಾದ ನೀರನ್ನು ನಾವು ಕಲುಷಿತಗೊಳಿಸುತ್ತಿದ್ದು, ಅದನ್ನು ಉಳಿಸಿಕೊಳ್ಳದೇ ಹೋದಲ್ಲಿ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಎಚ್ಚರಿಸಿದರು. ನಗರದ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ನೀರು ಬಳಕೆದಾರರ ಪುನಶ್ಚೇತನಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜನಸಂಖ್ಯೆಹೆಚ್ಚಿದಂತೆ ಭೂಮಿಯ ಮೇಲೆ ನೀರಿನ ಪ್ರಮಾಣ ಹೆಚ್ಚುವುದಿಲ್ಲ. ಬದಲಾಗಿ ಕಡಿಮೆಯಾಗುತ್ತಿದೆ. ಈಗಿನಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಜಲಸಂಕಟ ಎದುರಿಸಬೇಕಾಗುತ್ತದೆ ಎಂದರು.
ಶೇ.80ರಷ್ಟು ನೀರು ನೀರಾವರಿಗೇ ಬಳಕೆಯಾಗುತ್ತಿದೆ. ಉಳಿದ ಶೇ.20ರಷ್ಟು ಕುಡಿಯಲು, ಮನೆ ಬಳಕೆ ಮತ್ತಿತರ ಅಗತ್ಯಗಳಿಗೆ ಬೇಕಾಗುತ್ತದೆ. ಶೇ.80ರಷ್ಟು ನೀರನ್ನು ಬಳಸುವ ರೈತರು ಯೋಜನಾಬದ್ಧವಾಗಿ ನೀರನ್ನು ಬೆಳೆಗಳಿಗೆ ಹಾಯಿಸಿಕೊಳ್ಳಲು ಚಿಂತನೆ ನಡೆಸಬೇಕು. ನೀರಿನ ನಿರ್ವಹಣೆ ಜಲಸಂಪನ್ಮೂಲ ಇಲಾಖೆಯ ಕೆಲಸ ಮಾತ್ರವಲ್ಲ ರೈತರ ಮೇಲೂ ಹೊಣೆ ಇದೆ ಎಂದರು.
ನೀರಿನ ಅರಿವು ಮತ್ತು ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ವಾಲ್ಮಿ ಸಂಸ್ಥೆಯನ್ನು ಸ್ಥಾಪಿಸಿದೆ. ಅದಕ್ಕಾಗಿ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಭೀಮಾ, ಬೆಣ್ಣೆತೊರಾ, ಕಾರಂಜಾ, ಚುಳಕಿನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಳಕೆದಾರರ ಸಂಘದ ಸದಸ್ಯರು ವಾಲ್ಮಿಯಿಂದ ಆಯೋಜಿಸುವ ಅಂತಾರಾಜ್ಯ ಪ್ರವಾಸಗಳ ಪ್ರಯೋಜನ ಪಡೆಯಬಹುದು. ಅತಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ತೆಗೆಯುವ ರೈತರ ಯಶೋಗಾಥೆಯನ್ನು ತಿಳಿಸಲಾಗುತ್ತದೆ ಎಂದು ವಿವರಿಸಿದರು.
“ಕೃಷ್ಣಾದಿಂದ ಕಾರಂಜಾವರೆಗೆ ನೀರು ಹರಿಯಬೇಕು’ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೃಷ್ಣಾದಿಂದ ಕಾರಂಜಾವರೆಗೆ ರೈತರ ಹೊಲಗಳಿಗೆ ನೀರು ಹರಿಸುವ ಯೋಜನೆ ರೂಪಿಸಬೇಕು. ಆಗ ರೈತರ ಬದುಕು ಹಸನಾಗುತ್ತದೆ. ನೀರಾವರ ಯೋಜನೆಗಳ ಬಗ್ಗೆ ದಕ್ಷಿಣ ಕರ್ನಾಟಕದವರಿಗೆ ಇರುವಷ್ಟು ತಿಳಿವಳಿಕೆ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಇಲ್ಲ. ರೈತರಿಗೆ ನೀರಿನ ತಿಳಿವಳಿಕೆ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದರು.
ಇದನ್ನೂ ಓದಿ:ಎಲ್ಲೆಡೆ ಎಳ್ಳ ಅಮಾವಾಸ್ಯೆ ಸಂಭ್ರಮ
ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿದರು. ಇದೇ ಸಮಯದಲ್ಲಿ ವಾಲ್ಮಿಯ ಸಮಾಲೋಚಕ ಸುರೇಶ ಕುಲಕರ್ಣಿ, ಶ್ಯಾಮರಾವ ಚಂದ್ರಶೇಖರ ಉಪನ್ಯಾಸ ನೀಡಿದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ| ಸುರೇಶ ಪಾಟೀಲ, ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಮಸ್ತಾನ್‌ಸಾಬ್ ಕೊರವಿ, ಹನುಮಂತರಾವ ಬಿರಾದಾರ ಕೊರಟಗಿ, ಹನುಮಂತರಾವ ಪಾಟೀಲ, ಕಾಡಾ ಆಡಳಿತಾಧಿಕಾರಿ ವಿಜಯ ದಶರಥ ಸಂಗನ್, ಐಪಿಝೆಡ್ ಕಾರ್ಯನಿರ್ವಾಹಕ ಎಂಜಿನಿಯರ್ ಸೂರ್ಯಕಾಂತ ಮಾಲೆ, ಪಿ. ರಮೇಶಕುಮಾರ್, ರೈತ ಮುಖಂಡ ಅಪ್ಪಾಸಾಹೇಬ ಯರನಾಳ ಪಾಲ್ಗೊಂಡಿದ್ದರು.