ಚೆಂಗುª (ಚೀನ): ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ 3 ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದೆ.
ವನಿತಾ 10 ಮೀ. ಸ್ಪರ್ಧೆಯಲ್ಲಿ ಮನು ಭಾಕರ್, ಯಶಸ್ವಿನಿ ದೇಸ್ವಾಲ್ ಮತ್ತು ಅಭಿಂದ್ಯಾ ಪಾಟೀಲ್ ಅವರನ್ನೊಳಗೊಂಡ ತಂಡ ಆತಿಥೇಯ ಚೀನ ಮತ್ತು ಇರಾನ್ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನಕ್ಕೆ ಗುರಿ ಇರಿಸಿತು.
ಬಳಿಕ ಮನು ಭಾಕರ್ ವನಿತೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಹಂಗೇರಿಯ ಫ್ಯಾಬಿಯನ್ ಸಾರಾ ಬೆಳ್ಳಿ ಹಾಗೂ ಚೈನೀಸ್ ತೈಪೆಯ ಯು ಜು ಚೆನ್ ಕಂಚಿನ ಪದಕ ಜಯಿಸಿದರು.
ವನಿತೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಇಳವೆನಿಲ್ ವಲರಿವನ್ 252.5 ಅಂಕಗಳೊಂದಿಗೆ ಬಂಗಾರವನ್ನು ತಮ್ಮದಾಗಿಸಿಕೊಂಡರು. ಅಮೆರಿಕದ ಮೇರಿ ಟ್ಯುಕರ್‌ಗೆ ಬೆಳ್ಳಿ ಪದಕ ಲಭಿಸಿತು.
ಆರ್ಚರಿಯಲ್ಲಿ ಭಾರತಕ್ಕೆ 2 ಪದಕ ಖಾತ್ರಿಯಾಗಿದೆ. ಕಂಪೌಂಡ್ ಮಿಕ್ಸೆಡ್ ವಿಭಾಗದಲ್ಲಿ ಪ್ರಗತಿ-ಅಮಾನ್ ಸೈನಿ ಫೈನಲ್ ತಲುಪಿದ್ದಾರೆ. ದ್ವಿತೀಯ ಶ್ರೇಯಾಂಕದ ಪ್ರಗತಿ-ಅಮಾನ್‌ಗೆ ಮೊದಲ ಸುತ್ತಿನ ಬೈ ಲಭಿಸಿತ್ತು. ಬಳಿಕ ಫ್ರಾನ್ಸ್ ಮತ್ತು ಆತಿಥೇಯ ಚೀನ ಜೋಡಿಯನ್ನು ಮಣಿಸಿ ಫೈನಲ್ ತಲುಪಿದರು. ಅಗ್ರ ಶ್ರೇಯಾಂಕದ ಕೊರಿಯಾ ಜೋಡಿಯನ್ನು ಬಂಗಾರದ ಸ್ಪರ್ಧೆಯಲ್ಲಿ ಎದುರಿಸಬೇಕಿದೆ. ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಅಮಾನ್ ಸೈನಿ-ಸಂಗ್ರಾಮ್‌ಪ್ರೀತ್ ಸಿಂಗ್ ಬಿಸ್ಲಾ ಸೆಮಿಫೈನಲ್‌ನಲ್ಲಿ ಮುಖಾಮುಖೀ ಆಗಲಿದ್ದಾರೆ.
ಪದಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸಿದೆ. ಚೀನ ದ್ವಿತೀಯ ಸ್ಥಾನದಲ್ಲಿದೆ.