ಚೀನ : “ವರ್ಲ್ಡ್ ಯುನಿವರ್ಸಿಟಿ ಗೇಮ್ಸ್’ನಲ್ಲಿ ಭಾರತ 4ನೇ ಚಿನ್ನದ ಪದಕ ಜಯಿಸಿದೆ. ಇದರೊಂದಿಗೆ ಪದಕಪಟ್ಟಿಯಲ್ಲಿ 4ನೇ ಸ್ಥಾನಿಯಾಗಿದೆ.
ಅಮಾನ್ ಸೈನಿ-ಪ್ರಗತಿ ಅವರನ್ನೊಳಗೊಂಡ ಮಿಶ್ರ ಆರ್ಚರಿ ತಂಡ ಚಿನ್ನಕ್ಕೆ ಗುರಿ ಇರಿಸಿತು. ರವಿವಾರದ ಫೈನಲ್‌ನಲ್ಲಿ ಇವರು ಕೊರಿಯಾದ ಸುವ ಚೊ-ಸುಯೆಂಗ್ಯುನ್ ಪಾರ್ಕ್ ವಿರುದ್ಧ 157-156 ಅಂತರದ ರೋಚಕ ಗೆಲುವು ಸಾಧಿಸಿದರು. ಚೈನೀಸ್ ತೈಪೆಯ ಮಿಂಗ್ ಚಿನ್ ಲಿನ್-ಝಿÌ ವು ಕಂಚು ಗೆದ್ದರು.
ಪುರುಷರ ಕಂಪೌಂಡ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಒಲಿಯಿತು. ಸಂಗಮ್‌ಪ್ರೀತ್ ಬಿಸ್ಲಾ, ಅಮಾನ್ ಸೈನಿ ಮತ್ತು ರಿಷಭ್ ಯಾದವ್ ಈ ತಂಡದಲ್ಲಿದ್ದರು. ಪೂರ್ವಶಾ ಶಿಂಧೆ, ಪ್ರಗತಿ ಮತ್ತು ಅವನೀತ್ ಅವರನ್ನು ಒಳಗೊಂಡ ವನಿತಾ ಕಂಪೌಂಡ್ ಆರ್ಚರಿ ತಂಡ ಬೆಳ್ಳಿ ಸಾಧನೆಗೈದಿತು.
ಶೂಟಿಂಗ್‌ನಲ್ಲೂ ಭಾರತ 2 ಪದಕ ಗೆದ್ದಿತು. 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಜಯವೀರ್, ಉದಯವೀರ್ ಸಿಂಧು, ಆದರ್ಶ್ ಸಿಂಗ್ ಸೇರಿಕೊಂಡು ಬೆಳ್ಳಿಯನ್ನು ತಮ್ಮದಾಗಿಸಿಕೊಂಡರು. 50 ಮೀ. ರೈಫಲ್ ತಂಡ ಸ್ಪರ್ಧೆಯಲ್ಲಿ ಸೂರ್ಯಪ್ರತಾಪ್, ಸರ್ತಾಜ್ ಸಿಂಗ್ ಮತ್ತು ಐಶ್ವರಿ ತೋಮರ್ ಕಂಚು ಗೆದ್ದರು.
ವಿಜಯವೀರ್ ಮತ್ತು ಐಶ್ವರಿ ತೋಮರ್ ಕ್ರಮವಾಗಿ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಹಾಗೂ 50 ಮೀ. ರೈಫಲ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲೂ ಫೈನಲ್ ಪ್ರವೇಶಿಸಿದ್ದು, ದೊಡ್ಡ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
ಭಾರತ ಒಟ್ಟು 10 ಪದಕ ಜಯಿಸಿದೆ. ಇದರಲ್ಲಿ 4 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಸೇರಿದೆ.