Advertisement

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!

04:00 PM Sep 27, 2023 | Team Udayavani |

ನನ್ನ ಸಹೋದ್ಯೋಗಿ ಸ್ನೇಹಿತರೊಬ್ಬರು ನನ್ನ ಜೊತೆ ಮಾತಾಡುವಾಗ ‘ನೀವು ಕೆಲವರಿಗೆ ಚಾರಣದ ಹುಚ್ಚು ಹಿಡಿಸಿದವರು’ ಎನ್ನುವುದುಂಟು. ಇಲ್ಲಿ ಹುಚ್ಚು ಅಂದರೆ ಏನು? ಇದು ಅಚ್ಚ ಕನ್ನಡ ವಿಶೇಷಣ ಪದ. ಹುಚ್ಚು ಅಂದರೆ ಆಸ್ಪತ್ರೆಗೆ ಸೇರಿಸುವ ಹುಚ್ಚು ಎಂಬ ಒಂದೇ ಅರ್ಥ ಅಲ್ಲ. ಹರಟೆ ಹೊಡೆಯುವ ಹುಚ್ಚು, ಪ್ರವಾಸದ ಹುಚ್ಚು, ಯಕ್ಷಗಾನದ ಹುಚ್ಚು, ಬೈಕ್, ಸಿನೆಮಾ, ಧಾರಾವಾಹಿ ಇತ್ಯಾದಿ ಹುಚ್ಚುಗಳು ಸಾಮಾನ್ಯ.

Advertisement

ನನಗೆ ನನ್ನ ಬಾಲ್ಯದಿಂದಲೂ ಇದ್ದ ಮತ್ತು ಮುಂದೆ ಹೆಮ್ಮರವಾಗಿ ಬೆಳೆದ ಹುಚ್ಚು ಯಾವುದೆಂದರೆ ಚಾರಣ ಮಾಡುವುದು. ಅದಕ್ಕೆ ಪ್ರಮುಖ ಕಾರಣ ಉಡುಪಿಯಲ್ಲಿ ಅನೇಕ ಚಾರಣ ಪ್ರಿಯರ ಮುಂದಾಳತ್ವದಲ್ಲಿ ಆರಂಭಗೊಂಡ ಗಉಇONಅ ಇಔಖೀಆ. ಅದರಲ್ಲೂ ಈ ಕ್ಲಬ್ ನ ಪ್ರಮುಖರಾದ ಪ್ರೇಮಾನಂದ ಕಲ್ಮಾಡಿಯವರ ಪರಿಚಯ ನಾನು ಪದವಿ ಓದುತ್ತಿರುವಾಗಲೇ ನನಗಾಯಿತು. ಅದರಿಂದಾಗಿ ಆಗಾಗ ನಮ್ಮ ಪ್ರಥಮ ದರ್ಜೆ ಕಾಲೇಜು   ಮತ್ತು ಇತರರ ಜೊತೆಯಲ್ಲಿ ಚಾರಣ ಮಾಡುತ್ತಿದ್ದೇವು. ಪದವಿ ಮತ್ತು ಬಿ.ಇಡಿ ಮುಗಿಸಿ ನಾನು ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕನಾಗಿ ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿರುವಾಗ  ಬಹಳಷ್ಟು ಚಾರಣಗಳನ್ನು ರಜಾ ದಿನಗಳಲ್ಲಿ ಮಾಡುವಂತಾಯಿತು. ಆರಂಭದಲ್ಲಿ ಚಾರಣದ ಅನುಭವ ಹೊಂದಿದ್ದ ಪ್ರೇಮಾನಂದ ಕಲ್ಮಾಡಿಯವರ ಮಾರ್ಗದರ್ಶನದಲ್ಲೆ ಈ ಹುಚ್ಚು ಬೆಳೆಯಿತು.

ಚಾರಣ ಅಂದರೆ ನಡೆಯುವ ಪ್ರಕ್ರಿಯೆ. ಒಬ್ಬರ ಹಿಂದೆ ಒಬ್ಬರು ನಡೆಯುತ್ತಾ ಸಾಗುವುದೇ ಚಾರಣ. ಹಳೆಯ ಉಳಿವುಗಳೊಂದಿಗೆ ಹೊಸದನ್ನು ಹುಡುಕಾಡುತ್ತಾ ನಮ್ಮ ತಂಡವೆಂಬ ಏಕ ಧ್ಯೇಯದಿಂದ ಒಗ್ಗಟ್ಟಿನ ಮಂತ್ರ ಸಾರುತ್ತಾ ಪ್ರಕೃತಿಯೊಂದಿಗೆ ಕಾಲ ಕಳೆಯುವ ಕೂಟ. ‘ನನಗೆ ನೀನು ನಿನಗೆ ನಾನು’ ಎಂಬ ಸಹಬಾಳ್ವೆಯ ಧ್ಯೇಯ ಚಾರಣದಲ್ಲಿ ಅಡಗಿದೆ.

ಸರಕಾರಿ ನೇಮಕಾತಿ ಆಗಿ ನಾನು ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿಯಲ್ಲಿ ಸಹಶಿಕ್ಷಕನಾಗಿದ್ದಾಗ ಒಮ್ಮೆ ನನ್ನ ಸಹೋದ್ಯೋಗಿಯೊಬ್ಬರು ‘ ನಾವೊಂದು ಚಾರಣ ಮಾಡಿದರೆ ಹೇಗೆ?’ ಎಂದು ಕೇಳಿದರು. “ಮಾಡೋಣ’’ ಎಂದು ಹೇಳಿ ಅವರಿಗಾಗಿ ಕೊಡಚಾದ್ರಿ ಚಾರಣ ಯೋಜನೆಯನ್ನು ರೂಪಿಸಿಕೊಂಡೆವು. ನಮ್ಮ ಶಾಲಾ ಮಕ್ಕಳೂ ಸೇರಿದರು.ಅವರಲ್ಲಿ ಬಹಳಷ್ಟು ಮಂದಿ ಮೊದಲ ಬಾರಿ ಚಾರಣ ಮಾಡುತ್ತಿದ್ದವರು. ನಾ ಮುಂದು ತಾ ಮುಂದು ಎನ್ನುವಂತೆ ಎಲ್ಲರೂ ಆರಂಭದಲ್ಲಿ ಬಹಳ ಹುರುಪಿನಿಂದ ವೇಗವಾಗಿ ಮಧ್ಯಾಹ್ನ 2 ಘಂಟೆಯಿಂದ 3 ಘಂಟೆಯ ವರೆಗೆ ಸಾಗಿದ ಬಳಿಕ ವೇಗ ಸ್ವಲ್ಪ ನಿಧಾನವಾಗತೊಡಗಿತು. ಉಸ್ಸಪ್ಪ ಎಂದು ಹೇಳುತ್ತಾ ಕೆಲವರು ನೀರು ಕುಡಿಯಲು ನಿಂತರು.

Advertisement

ಸ್ವಲ್ಪ ಮಾತ್ರ ನೀರು ಕುಡಿಯಬೇಕೆಂದರೂ ಕೆಲವರು ಸ್ವಲ್ಪ ಜಾಸ್ತಿ ಕುಡಿದಿರಬೇಕು. ಚಾರಣದ ವೇಗ ಇನ್ನೂ ಕಡಿಮೆಯಾಯಿತು.ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ 1343 ಮೀ. ಎತ್ತರದ ಕೊಡಚಾದ್ರಿ ಬೆಟ್ಟವನ್ನು ಚಾರಣ ಮಾಡಲು ಹೊಸಬರಿಗೆ  ಹೆಚ್ಚೆಂದರೆ  5 ಗಂಟೆಗಳು ಸಾಕು. ಆದರೆ ಸಾಮಾನ್ಯ  ಚಾರಣಿಗರಿಗೆ 3 ರಿಂದ 3.30 ಗಂಟೆ ಸಾಕು. ಯಾವ ಚಾರಣವೇ ಆಗಲಿ ನಾನಂತೂ ಮೊದಲ ತಂಡದಲ್ಲೇ ಚಾರಣದ ಕೇಂದ್ರ ಸ್ಥಳ ತಲಪುತ್ತಿದ್ದ ನನಗೆ ಆ ದಿನದಲ್ಲಿ ಮಾತ್ರ ಎಲ್ಲರನ್ನೂ ಸೇರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು. ಅಂದು ನನ್ನ ಜೊತೆ ದಪ್ಪ ದೇಹದ ಕೆಲವು ಮಕ್ಕಳು ಮತ್ತು ಸಹೋದ್ಯೋಗಿಗಳು ಕೊನೆಗೆ ಸಂಪೂರ್ಣವಾಗಿ ದಣಿದು ‘ಮುಂದೆ ಹೋಗಲಾಗಲಿಕ್ಕಿಲ್ಲ’ ಎಂದಾಗ ಅವರ ಕೈಹಿಡಿದು ಸುಮಾರು 6.30ಕ್ಕೆ ತುತ್ತತುದಿಯನ್ನಂತು ಗಮಿಸಿದೆವು.

ಅಲ್ಲಿ ನಮ್ಮ ಸುತ್ತ ಮೋಡಗಳು ಆವರಿಸಿ ನಮ್ಮನ್ನು ದೂಡಿ ಮುಂದೆ ಸಾಗುತ್ತಿದೆಯೋ ಎಂಬಂತೆ ಬಾಸವಾಗುವುದಂತೂ ಮಾರ್ಮಿಕ ಅನುಭವ. ಅಂದು ರಾತ್ರಿ ಎಲ್ಲರೂ ತಂದಿರುವ ಮುಷ್ಟಿ ಅಕ್ಕಿಯನ್ನೆಲ್ಲ ಒಂದು ಪಾತ್ರೆಗೆ ಹಾಕಿ ಬೇಯಿಸಿ ಅನ್ನ ಮಾಡಿ ಎಲ್ಲರೂ ತಂದಿರುವ ಒಂದೊಂದು ಟೊಮೆಟೋ ಸೇರಿಸಿ ಸಾರು ಸಹ ಸಿದ್ಧವಾಯಿತು. ಅಷ್ಟರಲ್ಲಿ ಕೆಲವರು ಚಳಿಗೆ ನಡುಗಲು ಆರಂಭಿಸಿದರು. ನಡುಗುತ್ತಾ ಬಿಸಿ ಬಿಸಿ ಊಟ ಮಾಡಿ ಮಲಗಿದರೂ ಚಳಿ ಏರುತ್ತಲೇ ಇತ್ತು. ಅಲ್ಲಿ ಚಾರಣಿಗರ ಅನುಕೂಲಕ್ಕಾಗಿ ಇದ್ದ ಕೊಠಡಿಯಲ್ಲಿ ಮಲಗಿದ್ದ ಕೆಲವರು ಮಧ್ಯರಾತ್ರಿ ಕಳೆಯುವಾಗ ತಾವೇನೋ ನೀರಿನಲ್ಲಿ ಮಲಗಿದ ಅನುಭವವಾಗುತ್ತಿದೆ ಎಂದರು. ಕೆಲವರ ಸುದ್ಧಿಯೇ ಇಲ್ಲ .ಅವರಿಗೆ ಚಳಿಯಲ್ಲಿ ಮಾತಾಡಲೂ ಆಗುತ್ತಿರಲಿಲ್ಲ.ಅಂತೂ ರಾತ್ರಿ ಕಳೆದು ಬೆಳಗಾಯಿತು. ಬೆಳಿಗ್ಗೆ ಅನೇಕರು ತಮ್ಮ ಹೊಸ ಅನುಭವವನ್ನು ನನ್ನ ಜೊತೆ ಹಂಚಿ ಖುಸಿ ಪಟ್ಟರು.

ಕೊಡಚಾದ್ರಿ ಬೆಟ್ಟ ದಟ್ಟ ಅರಣ್ಯ ಹಾಗೂ ಶೋಲಾ ಕಾಡುಗಳಿಂದ ಸುತ್ತುವರಿದಿದೆ. ಅಲ್ಲಿ ಅಕ್ಟೋಬರ್ ಮತ್ತು ನವಂಬರ್ ನಲ್ಲಿ ಇಬ್ಬನಿ ಕಡಿಮೆಯಾಗಿ ಮರಗಿಡಗಳಲ್ಲಿ ಹೂಗಳು ಅರಳಿ ನಿಂತಿರುತ್ತವೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ದೇವಾಲಯವಿದೆ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಇದೆ. ಸರ್ವಜ್ಙ ಪೀಠದಿಂದ 2ಕಿ.ಮೀ. ದೂರ ಮೂಲ ಮೂಕಾಂಬಿಕಾ ದೇವಸ್ಥಾನವನ್ನು ಕಣ್ತುಂಬಿಸಿಕೊಳ್ಳಬಹುದು. ಬೆಟ್ಟವನ್ನು ಜೀಪಿನಲ್ಲಿ ಸಾಗಿದರೆ 1.5ಕಿ.ಮೀ. ನಡೆದು ಸರ್ವಜ್ಙ ಪೀಠ ನೋಡಬಹುದು.

ರಜೆ ಸಿಕ್ಕಾಗಲಾದರೂ ಸೂಕ್ತ ಯೋಜನೆಯನ್ನು ಮಾಡಿಕೊಂಡು ಚಾರಣ ಹೊರಟರೆ ಒಳ್ಳೆಯದು. ಆದರೆ ನೀವು ಚಾರಣ ಹೋಗುತ್ತಿರುವ ಪ್ರದೇಶ ಹಾಗೂ ಅದರ ಆಚೆ ಈಚೆ ಇರುವ ಪ್ರದೇಶಗಳ ಮಾಹಿತಿ ತುಂಬಾ ಅಗತ್ಯವಾಗಿ ಬೇಕು. ನೀವು ಹೋಗುವ ಪ್ರದೇಶಕ್ಕೆ ಸರಕಾರದ ಅನುಮತಿ ಬೇಕಿರುತ್ತದೆಯೇ ಎನ್ನುವುದನ್ನು ಪರಿಶೀಲಿಸುವುದು ಈಗೀಗ ಅನಿವಾರ್ಯವಾಗಿರುತ್ತದೆ. ಅವಶ್ಯ ಸಾಮಾಗ್ರಿಗಳಾದ ನೀರಿನ ಬಾಟ್ಲಿ , ಮೊಬೈಲ್ ತೆಗೆದುಕೊಂಡು ಹೋಗುವುದಾದರೆ ಅದಕ್ಕೆ ಪವರ್ ಬ್ಯಾಂಕ್ , ತಂಗುವ ಪ್ರದೇಶವಾದರೆ ಅಲ್ಲಿಗೆ ಬೇಕಾದ ಟೆಂಟ್ , ಚಳಿಗೆ ಬೇಕಾದ ವ್ಯವಸ್ಥೆ , ಹಸಿವು ನೀಗಿಸಲು ಸಾಧ್ಯವಾದಷ್ಟು ಪರಿಸರ ಪ್ರಿಯ ವಸ್ತುಗಳನ್ನು ಬಳಸುವ ಅರಿವು ಇತ್ಯಾದಿಗಳು ಅವಶ್ಯವಾಗಿ ಬೇಕಾಗಿರುತ್ತವೆ.

ನಾವು ರಾತ್ರಿ ತಂಗಲು ಕೊಡಚಾದ್ರಿ ಮುಂತಾದೆಡೆ ಹೋಗುವಾಗ  ಒಂದು ಲೈಟರ್, ಮೆಣಸು, ಈರುಳ್ಳಿ , ಚೂರಿ ಮತ್ತು ಮಾತ್ರೆಗಳು  ಕೆಲವರ ಕೈಯಲ್ಲಿರುತ್ತಿತ್ತು.ಅದನ್ನು ಒಬ್ಬರಿಗೊಬ್ಬರು ವರ್ಗಾಯಿಸಿಕೊಂಡು ಸಾಗುತ್ತಿದ್ದೆವು. ಯಾರಿಗೂ ಯಾವ ಹೊರೆಯೂ ಇಲ್ಲವೆನ್ನುವ ವಾತಾವರಣ ಚಾರಣದುದ್ದಕ್ಕೂ ಅವಶ್ಯ.ಕಾಲಿಗೆ ಟ್ರೆಕ್ಕಿಂಗ್ ಶೂ ಬೇಕೇಬೇಕು. ಎತ್ತರದ ಬೆಟ್ಟ ಹತ್ತುವಾಗ ಕ್ಲೈಂಬಿಂಗ್ ಕೀಲಾಕ್ ಗಳು ಮತ್ತು ಕ್ಲೈಂಬಿಂಗ್ ಹಗ್ಗ ಇರಿಸಿಕೊಳ್ಳುವುದೂ ಅವಶ್ಯ . ಯಾವುದೇ ಕಾರಣಕ್ಕೂ ಯಾವುದೇ ಅಪರಿಚಿತ ಹೂ ಅಥವಾ ಹಣ್ಣಿನ ಪರಿಮಳವನ್ನು ಮೂಸಿ ನೋಡಬಾರದು.ಮಾರ್ಗದರ್ಶಕರು ಜೊತೆಯಲ್ಲೇ ಇದ್ದರೆ ಒಳ್ಳೆಯದು. ಒಟ್ಟಾರೆ  ಚಾರಣಕ್ಕೆ ಹೋಗುವುದೆಂದರೆ ಅಪಾಯ ಬೆನ್ನಿಗೆ ಕಟ್ಟಿಕೊಂಡಂತೆಯೇ. ಬಹಳ ಬಹಳ ಜಾಗರೂಕರಾಗಿರಲೇ ಬೇಕು.

ನಾವು ಕೈಗೊಂಡ ಚಾರಣಗಳಲ್ಲಿ  ಪಶ್ಚಿಮಘಟ್ಟದ ಮೇರುತಿ ಪರ್ವತದ ಚಾರಣ ಎಂದೆಂದೂ ನೆನೆಪಿರುವಂತಹುದು. ಹೆಚ್ಚಾಗಿ ಶನಿವಾರವೇ ನಮ್ಮ ಚಾರಣ.  ಮಧ್ಯಾಹ್ನ ಉಡುಪಿಯಿಂದ ಸುಮಾರು 2 ಗಂಟೆಗೆ ಬಸಿರಿಕಟ್ಟೆಗೆ ಹೋಗುವ ಮಿನಿ ಬಸ್ ನಲ್ಲಿ ಕುಳಿತರೆ ರಾತ್ರಿ ಸುಮಾರು 9 ಗಂಟೆಗೆ ಬಸರಿಕಟ್ಟೆ ತಲಪುತ್ತದೆ. ಅಲ್ಲೊಂದು ಸಣ್ಣ ಗೂಡಂಗಡಿ. ಆ ಅಂಗಡಿಯವರು ಚಾರಣ ಪ್ರಿಯರ ಮಿತ್ರರು. ಅಲ್ಲೆ ಒಂದು ಸಣ್ಣ ಶಾಲೆ ಇದೆ. ಅದರ ಜಗಲಿಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ 6 ಗಂಟೆಗೆ ಚಾರಣ ಮೇರುತಿಯೆಡೆಗೆ ಆರಂಭವಾಗುತ್ತಿತ್ತು. ಹೆಚ್ಚು ಕಡಿಮೆ 11 ಗಂಟೆಗೆ ಮೇರುತಿಯ ತುತ್ತ ತುದಿಗೆ . ಕರ್ನಾಟಕದ ಅತೀ ಎತ್ತರದ ಬೆಟ್ಟಗಳಲ್ಲಿ ಇದು ನಾಲ್ಕನೆಯದು. ಅಲ್ಲಿ ಒಂದು ಗಂಟೆ ಕಳೆಯುವ ಅನುಭವ ರೋಮಾಂಚನ.  ತಿಳಿ ನೀಲಾಕಾಶದ ಮುಗಿಲು ನಾ ಮುಂದು ತಾ ಮುಂದು ಎನ್ನುವಂತೆ ಮುತ್ತಿಕ್ಕುತ್ತಿರುವ ದೃಶ್ಯ , ಸುತ್ತಲಿನ ಹಸಿರ ರಾಶಿಯ ನಡುವೆ ತಲೆಯೆತ್ತಿ ಬಾನೆತ್ತರ ನಿಂತಿರುವ ಗುಡ್ಡಗಳು , ನಡುವಿನ ಕಣಿವೆ , ಕಂದಕಗಳು . ಸಾಲದು ಎನ್ನುವಂತೆ ಬೆಳ್ಳಿ ಮೋಡಗಳ ಓಟ . ಒಟ್ಟಾರೆ ಜೀವನದ ಅತ್ಯಂತ ರಸನಿಮಿಷಗಳ ಸವಿಯೂಟದ ಹೂರಣ.

ಮೇರುತಿ ಪರ್ವತದ ತುತ್ತ ತುದಿಯಲ್ಲಿ ಆ ಕಡೆ ನೋಡಿದರೆ ರಮಣೀಯ  ಪ್ರಕೃತಿಯ ಸೌಂದರ್ಯದ ನಡುವೆ ಹೊರನಾಡು ದೇವಸ್ಥಾನ ಕಾಣುತ್ತದೆ.  ಬೆಟ್ಟದಿಂದ ಆ ಕಡೆ ಇಳಿದು ಸಾಗಲು ಹೆಚ್ಚು ಸಮಯ ಬೇಡ. ಅಲ್ಲಿಯೇ ಸ್ನಾನ ಮುಗಿಸಿ ದೇವಸ್ಥಾನದ ಊಟ ಮುಗಿಸಿ ಕಳಸದಿಂದ ಬಸ್ಸಲ್ಲಿ ಮರಳಿ ಊರಿಗೆ.

ಪಶ್ಚಿಮ ಘಟ್ಟಗಳ ಮಧ್ಯೆ ಇರುವ ಕೂಡ್ಲು ತೀರ್ಥ ಸುಂದರ ಜಲಪಾತವಿರುವ ತಾಣ. ಇದನ್ನು ಸೀತಾಜಲಪಾತವೆಂದೂ ಕರೆಯುವರು. ಇದು ಹೆಬ್ರಿಯ ಬಳಿ ಇರುವ ಸೋಮೇಶ್ವರ ವನ್ಯಜೀವಿ ಆಭಯಾರಣ್ಯ ಪ್ರದೇಶದಲ್ಲಿದೆ.  ಜೋಂಬ್ಲು ತೀರ್ಥವೆನ್ನುವ ಇನ್ನೊಂದು ಚಾರಣಪ್ರಿಯ ಪ್ರದೇಶ ಹೆಬ್ರಿಯಿಂದ ಬ್ರಹ್ಮಾವರ ಕೆಡೆ ಸಾಗುವಾಗ ಬಲಗಡೆಗೆ ಇದೆ.

ವಾಸ್ತು ಶಿಲ್ಪ ಪ್ರಿಯರಿಗೆ ಅನುಕೂಲವಾಗಿರುವ ಮಣಿಪಾಲ ಪಳ್ಳದ ಬಳಿಯ 6ಎಕರೆ ಭೂಮಿಯಲ್ಲಿರುವ ಹಸ್ತಶಿಲ್ಪಾ ವಸ್ತು ಸಂಗ್ರಹಾಲಯವು ಸುಮಾರು 30 ಬಗೆಯ ಹಳೆಯ ಸಾಂಪ್ರದಾಯಿಕ ಕಟ್ಟಡಗಳನ್ನು ಪರಿಚಯಿಸುವ ತಾಣ.  ಉಡುಪಿಯಿಂದ 6 ಕಿಮೀ ದೂರದಲ್ಲಿರುವ ಮಣಿಪಾಲ ಎಂಡ್ ಪಾಯಿಂಟ್ , ಮದ್ದೂರು ಬಳಿಯ ಬೆಳಕಲ್ ತೀರ್ಥ , ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಒನಕೆ ಅಬ್ಬಿ ಮತ್ತು ಕುದುರೆಮುಖ ಚಾರಣ ಯೋಗ್ಯ ಸ್ಥಳಗಳಾಗಿವೆ.

ಸುಬ್ರಹ್ಮಣ್ಯದ ಪುಷ್ಪಗಿರಿ (ಕುಮಾರ ಪರ್ವತ) ಇಂದು ಚಾರಣ ಯೋಗ್ಯವಾಗಿದೆ. ಕಾಡಿನ ಮಧ್ಯದಿಂದ ಸಾಗುತ್ತಾ ವೈವಿಧ್ಯಮಯ ಕೀಟಲೋಕ ಮತ್ತು ಸಸ್ಯ ಸಂಪತ್ತನ್ನು ಆಸ್ವಾದಿಸುತ್ತಾ ಟ್ರೆಕ್ ಮಾಡಬಹುದು. ಮಂಗಳೂರಿನಿಂದ ಇದು 152 ಕಿ.ಮೀ. ದೂರದಲ್ಲಿದೆ.  ಹೆಬ್ರಿ ಸಮೀಪದ ಶಿವಪುರದ ಪೌರಾಣಿಕ ಹಿನ್ನೆಲೆಯುಳ್ಳ ಕಾಚಿನ ಮಲೆಯ ಚಾರಣ ಒಂದು ಸುಲಭದ ಚಾರಣ ಸ್ಥಳವಾಗಿದೆ.

ಚಾರಣದ ಹುಚ್ಚು ಹವ್ಯಾಸವು ಪ್ರಕೃತಿಯ ಚಲುವನ್ನು ಸವಿಯಲು ಒಂದು ಸದವಕಾಶ. ಚಾರಣದಲ್ಲಿ ಸಾಹಸ, ಧೈರ್ಯ , ಆತ್ಮ ಸ್ಥೈರ್ಯ, ಉತ್ತಮ ನಾಯಕತ್ವ ಗುಣ ಮುಂತಾದವುಗಳನ್ನು ಬೆಳೆಸಲು ವಿಫುಲ ಅವಕಾಶವಿದೆ.

ದಿನೇಶ್ ಶೆಟ್ಟಿಗಾರ್, ಸಹಶಿಕ್ಷಕರು 

Advertisement

Udayavani is now on Telegram. Click here to join our channel and stay updated with the latest news.

Next