ಬೆಂಗಳೂರು: ರಾಜ್ಯ ಸರಕಾರದ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಸೋಮವಾರ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.2022 ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರನ್ನು ಸೆಳೆಯುವ ಉದ್ದೇಶದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಪ್ರವಾಸೋದ್ಯಮ ಎಕ್ಸ್‌ಪೋ ನಡೆಸುವುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು. ಸುಮಾರು 5,೦೦೦ ಕೋಟಿ ರೂಪಾಯಿ ಹೂಡಿಕೆಯನ್ನು ಎಕ್ಸ್ಪೋ ಮೂಲಕ ನಿರೀಕ್ಷಿಸಲಾಗಿದೆ ಎಂದರು.
ವಿಧಾನಸೌಧದಲ್ಲಿ ನಡೆದ ಪ್ರವಾಸೋದ್ಯಮ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಆನಂದ್ ಸಿಂಗ್ ವಹಿಸಿದ್ದರು. ಪ್ರವಾಸೋದ್ಯಮ ಇಲಾಖೆಯ ವಿಡಿಯೋ, ವಿಶೇಷ ಅಂಚೆ ಕವರ್, ನೂತನ ಪ್ರವಾಸೋದ್ಯಮ ನೀತಿ 2020-2026 ರ ಮಾರ್ಗಸೂಚಿ, KTTF ಆನ್‌ಲೈನ್ ಪೋರ್ಟಲ್ ಉದ್ಘಾಟಿಸಲಾಯಿತು.
‘ಕೊವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ಇಲಾಖೆಗೆ 25,000 ಕೋಟಿ ರೂಪಾಯಿ ನಷ್ಟ ಸಂಭವಿಸಿದ್ದು, ಇಲಾಖೆ ಮುಂದಿನ ದಿನಗಳಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ನಷ್ಟ ಸರಿದೂಗಿಸಲು ತೀರ್ಮಾನಿಸಿದೆ’ ಎಂದು ಸಚಿವರು ತಿಳಿಸಿದರು.
ಇದೆ ವೇಳೆ ಸರಕಾರದ ವತಿಯಿಂದ ಪ್ರವಾಸಿ ಗೈಡ್‌ಗಳಿಗೆ 5000 ಸಹಾಯಧನ ಚೆಕ್ ಮತ್ತು ಜಾಕೆಟ್ ವಿತರಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲ್ಪಟ್ಟ ಬೆಂಗಳೂರಿನಿಂದ ಹಂಪಿವರೆಗಿನ ಬೈಕ್ ಜಾಥಾವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಉದ್ಘಾಟಿಸಿದರು.
ಕರ್ನಾಟಕ ಟೂರಿಸಂ ಸೊಸೈಟಿಯಿಂದ ಕೈಗೊಳ್ಳುತ್ತಿರುವ ಕಾರ್ಯ ಚಟುವಟಿಕೆಗಳ ಅವಲೋಕನ ಸಭೆಯನ್ನು ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.