“ಊರು ಸುತ್ತಿ ನೋಡು ಕೋಶ ಓದಿ ನೋಡಿ” ಎನ್ನುವ ಮಾತನ್ನು ಇತ್ತೀಚೆಗೆ ನಾವು ತುಂಬಾ ಪಾಲಿಸುತ್ತಿದ್ದೇ ಎಂದರೆ ಬಹುಶಃ ತಪ್ಪಿಲ್ಲ. ಕೋಶ ಓದಿ, ಕೆಲಸ ಹುಡುಕಿ ಕೈತುಂಬಾ ಅಲ್ಲದೇ ಇದ್ದರೂ ತಕ್ಕ ಮಟ್ಟಿಗೆ ಬ್ಯಾಂಕ್ ಖಾತೆ ಇನ್ನೇನು ಅಲ್ಪ ಸ್ವಲ್ಪ ತುಂಬಿದ ಹಾಗೆ … ಆದರೆ ಮನಶಾಂತಿ ಹೆಸರಲ್ಲಿ ಊರು ಸುತ್ತೋಕೆ ಹೊರಡುವವರು ನಾವು. ಜಂಜಾಟದಲ್ಲಿ ಕಳೆದು ಹೋಗಿರುವ ನಮ್ಮತನಕ್ಕಿಂತ ಸೋಶಿಯಲ್ ಮೀಡಿಯಾಕ್ಕೆ ಕಂಟೆಂಟ್ ಹುಡುಕುವುದೇ ಜಾಸ್ತಿ ಏನೋ ಅಲ್ವಾ…
ದಿನಾ ನಾಲ್ಕು ಗೋಡೆ ಮಧ್ಯೆ ಕ್ಯೂಬಿಕಲ್ ಬದುಕಲ್ಲಿ ಬಂಧಿಯಾಗಿರುವ ನಮಗೆ ಆಫೀಸ್ ಒಳಗಿನ ಶಾಂತಿಗಿಂತ ಕಿಟಕಿ ಹೊರಗೆ ಕೇಳುವ ಗದ್ದಲದ ಮೇಲೆ ಪ್ರೀತಿ ಜಾಸ್ತಿ. ಯಾವಾಗಲೋ ಒಮ್ಮೆ ರಜೆ ಸಿಕ್ಕಾಗ ಹಲವು ಮಹಾಯುದ್ಧಗಳನ್ನು ನಡೆಸಿ ವಿಜಯ ಯಾತ್ರೆ ನಡೆಸುವ ಯೋಧರಂತೆ ಕೈಲಿ ಕ್ಯಾಮರಾ, ಹೆಗಲಿಗೆ ಬ್ಯಾಗು ಧರಿಸಿ ಹೊರಡುವುದೇ ನಮ್ಮ ಮಹಾ ಪಯಣ.
ಈ ಕಥೆ ನನ್ನದು ಮತ್ತು ಹೊರಗಿನ ಪ್ರಪಂಚದ ಜಂಜಾಟದಿಂದ ಬೇಸತ್ತ ನನ್ನೊಳಗಿನ ಆತ್ಮ ಅದೇ ‘ಪರಮಾತ್ಮ’ನದ್ದು.
ಈ ಬಾರಿ ಹುಟ್ಟಿದ ಹಬ್ಬದ ದಿನ ನಾನು ಮತ್ತು ನನ್ನ ಪರಮಾತ್ಮ ಹೊರಟ ಜಾಗ ವಿಜಯ ನಗರ ಸಾಮ್ರಾಜ್ಯದ ಹಂಪಿ..
‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಹಾಡಿಗೆ ಕಿವಿಯಾಗಿಸಿಕೊಂಡು ಗಡಿನಾಡು ಕಾಸರಗೋಡಿನಿಂದ ಕನ್ನಡ ನಾಡಿನ ಹಂಪಿ ಕಡೆಗೆ ಹೊರಟಿದ್ದೆ.
ಸಾವಿರ ಯೋಚನೆ, ಸೋಶಿಯಲ್ ಮೀಡಿಯಾದ ಗದ್ದಲ.. ಹೀಗೆ ಎಲ್ಲವನ್ನೂ ಸ್ವಲ್ಪ ಹೊತ್ತಿಗೆ ಮ್ಯೂಟ್ ಮಾಡಿ ಅವತ್ತು ನಾನು- ನನ್ನ ಪರಮಾತ್ಮ ಬೆಳಗ್ಗೆ ಬಂದು ತಲುಪಿದ್ದು ವಿನಾಶದ ನಡುವೆಯೂ ತಲೆಯೆತ್ತಿ ನಿಂತ ಹಂಪಿ ನಗರ.
ಭಾರತ, ಕನ್ನಡ ನಾಡು, ಇಲ್ಲಿನ ಶಿಲ್ಪಕಲೆ ಬಗ್ಗೆ ಬರೀ ಪಠ್ಯಪುಸ್ತಕದ ಇತಿಹಾಸ ಪಾಠದಲ್ಲಿ ಅಷ್ಟೇ ಕೇಳಿದ್ದ ನನಗೆ ಹಂಪಿಯ ನಾಡಿನಲ್ಲಿ ಕಣ್ಣೆದುರು ಕಂಡಾಗ ಆ ವೈಭವವನ್ನು ನೋಡಿ ಇದು ಕನಸೋ ಅಥವಾ ಶಾಲೆಯ ಪಾಠದೊಳಗೆ ಸೇರಿಬಿಟ್ಟೆನೋ ಅನಿಸಿತ್ತು.
ಗಲ್ಲಿ ಗಲ್ಲಿಯಲ್ಲಿ ಮುರಿದು ಬಿದ್ದ, ನಾವು ಪೂಜಿಸುವ ಕಲೆ, ದೇವರು, ದೇವಾಲಯ… ಅರ್ಧ ತುಂಡಾದ ಮೂರ್ತಿಗಳು, ಪೂರ್ತಿ ವಿನಾಶವಾದ ಕಂಬಗಳು, ಒಂದಷ್ಟು ಕಲ್ಲುಗಳು ಎಲ್ಲವೂ ತಮ್ಮೊಳಗೆ ಅದೇನೋ ಕಥೆ ಹೇಳುವ ಹಾಗಿತ್ತು.
ಆ ಕಥೆಗಳಿಗೆ ಕಿವಿಯಾಗಬೇಕು ಎಂದೆನಿಸಿತು. ಚಿನ್ನ ಬೆಳ್ಳಿ ವಜ್ರಗಳನ್ನು ಮಾರುತ್ತಿದ್ದ ಮಾರುಕಟ್ಟೆ ಈಗ ಹಸು ನಾಯಿಗಳಿಗೆ ನೆರಳಾಗಿವೆ. ಕೆಲವು ಬುದ್ಧಿಹೀನರ ಪ್ರೀತಿ ಕಥನಗಳು ಈ ಬಡಪಾಯಿ ಕಂಬಗಳ ಮೇಲೆ ಹೃದಯದ ಆಕಾರ ತಳೆದಿದ್ದವು.
ಇವೆಲ್ಲವನ್ನೂ ಒಂದೇ ದಿನ ನೋಡಿ ಮುಗಿಸುವುದು ಕಷ್ಟ ಎಂದೆನಿಸಿದ್ದ ನನಗೆ ಅವತ್ತು ಪರಿಚಯವಾಗಿದ್ದು ಆಟೋ ಚಾಲಕ ಶ್ರೀನಿವಾಸಣ್ಣ. “ಬನ್ನಿ ಮೇಡಂ ನಾನು ನಿಮಗೆ ಹಂಪಿ ತೋರಿಸುತ್ತೇನೆ” ಎಂದರು. ಬೆಳಗ್ಗೆ ಅಲ್ಲೇ ರಸ್ತೆ ಬದಿ ಅಂಗಡಿಯಲ್ಲಿ ಬಿಸಿ ಬಿಸಿ ದೋಸೆ ತಿಂದು ನಮ್ಮ ಪಯಣ ಶುರು.
ಶ್ರೀನಿವಾಸಣ್ಣ ಚಾಲಕ ಮಾತ್ರ ಅಲ್ಲ ಹಂಪಿ ಬಗ್ಗೆ ಬಹಳಷ್ಟು ತಿಳಿದಿರುವ ಗೈಡ್ ಅಂದರೂ ತಪ್ಪಿಲ್ಲ. ಪ್ರತಿ ಕಲ್ಲುಗಳ ಒಳಗೆ ಹುದುಗಿರುವ ಕಥೆಗಳಿಗೆ ಅವತ್ತು ಪದವಾಗಿದ್ದು ಶ್ರೀನಿವಾಸಣ್ಣ, ಕಿವಿಯಾಗಿದ್ದು ನಾನು.
ಸುಡು ಬಿಸಿಲಲ್ಲೂ ಒಂದೆರಡು ಫೋಟೋ ತೆಗೆಯುತ್ತಾ, ಹಂಪಿಯ ಅಂದಿನ ವೈಭವ ಹೇಗಿರಬಹುದು ಎಂದು ಯೋಚಿಸಿ ಹೆಜ್ಜೆ ಹಾಕುತ್ತಿದ್ದ ನನಗೆ ಮಧ್ಯಾಹ್ನ ಆಯಿತೆಂದು ಗೊತ್ತಾಗಿದ್ದು ಹೊಟ್ಟೆ ಚುರುಕ್ ಅಂದಾಗ್ಲೆ.
ಹೊಸ ಊರಿನ ಹೊಸತನದ ನಡುವೆಯೂ ಯಾಕೋ ಅಮ್ಮನ ಕೈ ಅಡುಗೆ ಬೇಕೆಂದು ಅನಿಸಿತ್ತು. ಅಲ್ಲೇ ಪಕ್ಕದಲ್ಲಿ ಕೂತಿದ್ದ ಮೂವರು ಅಜ್ಜಿಯರು “ಬಾರವ್ವ …ನಿಮ್ಮ ಜೊತೆ ಬಂದಿರೋರ್ ಕಾಣಿಸ್ತಿಲ್ವ? ಯಾಕೆ ಒಬ್ಬಳೇ ಕೂತಿದ್ದಿ” ಅಂದ್ರು… ನಾನು ನನ್ನ ಒಂಟಿ ಯಾತ್ರೆ ಬಗ್ಗೆ ಅವರಿಗೆ ಹೇಳಿದ್ದೇ ತಡ… ಅಲ್ಲಿದ್ದ ಒಬ್ಬ ಅಜ್ಜಿ ನನ್ನನ್ನೇ ನೋಡ್ತಾ ನಿಂತ್ರು. “ಹುಷಾರು ಮಗ… ಪ್ರಪಂಚ ಸರಿಯಿಲ್ಲ …. ಯಾವ ಊರು ನಿಂದು?” ಪ್ರಶ್ನೆಯಲ್ಲಿ ಕಾಳಜಿಯಿತ್ತು.
ನಾನು ಕಲಿಯುತ್ತಿರುವುದು ಮಂಗಳೂರಿನಲ್ಲಿ ಅಂದಾಗ ಮೀನು, ನೀರುದೋಸೆ ಮತ್ತೆ ಧರ್ಮಸ್ಥಳ, ಶೃಂಗೇರಿ ಎಲ್ಲಾ ವಿಚಾರಗಳ ಬಗ್ಗೆ ಮಾತಾಡಿದರು. ಒಂದು ಎಲೆ ಮೇಲೆ ಎರಡು ರಾಗಿ ಮುದ್ದೆ, ರೊಟ್ಟಿ ಕೊಟ್ಟು ತಟ್ಟೆ ತುಂಬಾ ಸಾರು ತುಂಬಿ “ನನ್ನ ಬುತ್ತಿಲೀ ಇನ್ನಾ ಐತೆ …ನೀನು ತಿನ್ನು” ಎಂದರು.
ಒಬ್ಬರಿಗೊಬ್ಬರು ಯಾರು ಎಂದೇ ತಿಳಿಯದಿದ್ದ ನಮಗೆ ಅದೇನೋ ಹೊಸ ಬಂಧ ಅಲ್ಲಿಂದ ಶುರು. ಅವರ ಕೈ ಅಡುಗೆ ಅಂದು ನನ್ನ ಪಾಲಿನ ಊಟ. ಮೃಷ್ಟಾನ್ನ ಅಂದ್ರೆ ಇದೇ ಅನಿಸ್ತು.
ಊಟ ಮುಗಿದಿತ್ತು. ನನ್ನ ಫೋನ್ ನಂಬರ್ ನ ತನ್ನ ಹಳೇ ಪುಸ್ತಕದಲ್ಲಿ ಬರೆದಿಟ್ಟು “ತಲುಪಿದ್ಯೋ ಇಲ್ವೋ ಅಂತಾ ಆಮೇಲೆ ಫೋನ್ ಮಾಡಿ ಕೇಳ್ತೇನೆ” ಅಂದ್ರು. ತಾಯಿ ಪ್ರೀತಿ ಹಾಗೆ ಅಲ್ವಾ..!
ಒಬ್ಬಂಟಿಯಾಗಿ ಹೊರಟ ಯಾತ್ರೆಯಲ್ಲಿ ನನಗೆ ಹೊಸ ಬಂಧಗಳ ಗಂಟು ಬಿಗಿಯಿತು. ಇದು ನಿಷ್ಕಳಂಕ ಪ್ರೀತಿಯ ಅನುಬಂಧ.
ಸಂಜೆ ಬೆಟ್ಟ ಹತ್ತಿದಂತೆ ಸೂರ್ಯ ಜಾರಿದ ಹಾಗೆ ಒಂದಷ್ಟು ಜನ ಕೇರಳದ ಡಾಕ್ಟರ್ ಗಳು ಕೋವಿಡ್ ಮಹಾಮಾರಿಯ ನಂತರ ಸ್ನೇಹಿತರ ಜೊತೆ ಬಂದ ಅವರ ಈ ಮೊದಲ ಪಯಣದ ಕಥೆಗಳನ್ನು ಹೇಳಿಕೊಳ್ಳುತ್ತಾ ಇನ್ನಷ್ಟು ಹೊಸ ಬಂಧಗಳನ್ನು ನನ್ನೆದುರಿಗೆ ಇಟ್ಟರು.
ಎಲ್ಲವನ್ನೂ ನಾನು ನನ್ನ ನೆನಪಿನ ಜೋಳಿಗೆಗೆ ತುಂಬಿಕೊಂಡೆಯಾದರೂ ಅದು ಭಾರ ಎನಿಸಲಿಲ್ಲ. ಬದಲಿಗೆ ಮನಸನ್ನು ಹಗುರ ಮಾಡಿತ್ತು.
ಕಷ್ಟ ಎಲ್ಲರ ಪಾಲಿಗಿದೆ, ನಾವು ಅದನ್ನು ಮೆಟ್ಟಿ ಸುಂದರ ಬದುಕು ಕಟ್ಟಬೇಕು ಎಂಬ ನೀತಿಯ ಪಾಠವೊಂದು ಹುಟ್ಟು ಹಬ್ಬದಂದು ಅರಿವಿಗೆ ಬಂತು.
ಪೆಟ್ಟು ತಿಂದು ಬಂಡೆ ಶಿಲೆಯಾಗಿ, ಆಲಯ ಒಡೆದರು ಭಗವಂತನ ಪೂಜೆಗೆ ಗುಡಿಯಾಗಿ, ತನ್ನ ಪಾಲಿನ ಊಟ ಕಮ್ಮಿ ಇದ್ದರೂ…. ಇನ್ನು ಜಾಸ್ತಿ ಇದೆ ಅನ್ನೋ ಮನಸ್ಥಿತಿಯಲ್ಲಿ ಕೈತುತ್ತು ನೀಡಿದ ಅಜ್ಜಿ, ಉದ್ಯೋಗದ ಜಂಜಾಟದ ನಡುವೆ ನಮ್ಮವರಿಗಾಗಿ ಬದುಕುವ ಡಾಕ್ಟರ್ ಗಳು, ನಗುವಲ್ಲೇ ಪ್ರೀತಿ ಹಂಚುವ ಶ್ರೀನಿವಾಸಣ್ಣ. ಇವರೆಲ್ಲರೂ ಬದುಕಿಗೆ ಹಲವು ಕಥೆಯ ಜೊತೆ ನೀತಿ ಹೇಳಿದರು. ಬದುಕನ್ನ ಪ್ರೀತಿಸೋದನ್ನ ಕಲಿಸಿದರು.
ಹಾಳು ಹಂಪಿಯಿಂದ ಬಾಳು ನಡೆಸುವ ಪಾಠ ಕಲಿತು ಹೊರಟೆ. ಈ ಪ್ರವಾಸ ಮುಗಿದಿತ್ತು. ಆದರೆ ಜೀವನ ಪಯಣದ ಹಾದಿಗೆ ಬೇಕಾದ ದಿಕ್ಸೂಚಿ ಸಿಕ್ಕಿತ್ತು.
ಬಾಂಧವ್ಯದ ಸೊಗಸನ್ನು ಮೆಲುಕುತ್ತಾ, ಕವಲುಗಳ ಎಣಿಸುತ್ತಾ ಹೊರಟೆ. ನನ್ನೊಳಗಿನ ಪರಮಾತ್ಮ ನಸುನಗುತ್ತಿದ್ದ.
ತೇಜಸ್ವಿನಿ ಎನ್ ವಿ