ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1,700 ಅಡಿ ಎತ್ತರಕ್ಕೆ ತಲೆಯೆತ್ತಿ ನಿಂತಿರುವ ಇತಿಹಾಸ ಪ್ರಸಿದ್ಧ ಶಿಲೆಯೇ ನರಸಿಂಹಗಡ. ಗಡಾಯಿಕಲ್ಲು ಎಂದೇ ಜನಜನಿತವಾಗಿ ಗುರುತಿಸಲ್ಪಡುವ ಈ ಬೃಹದಾಕಾರದ ಶಿಲೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅಸ್ತಿತ್ವದಲ್ಲಿರುವುದೇ ವೈಜ್ಞಾನಿಕ ಪ್ರಪಂಚಕ್ಕೆ ಅಚ್ಚರಿ ಮೂಡಿಸುತ್ತದೆ.
ಇದರ ಇತಿಹಾಸ ಎಷ್ಟು ರೋಮಾಂಚಕಾರಿಯಾಗಿದೆಯೋ, ಅದರ ನೋಟವೂ ನಯನ ಮನೋಹರ. ಕೃಷ್ಣ ವರ್ಣದ ಶಿಲೆ, ಒಂದೊಂದು ದಿಕ್ಕಿನಿಂದಲೂ ಒಂದೊಂದು ಬಗೆಯ ಆಕಾರವನ್ನು ಪ್ರದರ್ಶಿಸುವ ಬೃಹತ್ ಮಾಯಾವಿಯಂತೆಯೂ ಭಾಸವಾಗುತ್ತದೆ ಎಂದರೂ ಉತ್ಪ್ರೇಕ್ಷೆಯಾಗಲಾರದು.
‘ಗಡಾಯಿ’ ಎಂದರೆ ಬೃಹತ್ ಎಂದರ್ಥ. ಈ ಗಡಾಯಿಕಲ್ಲು ಚಾರಣ ಪ್ರಿಯರಿಗೆ ಸ್ವರ್ಗವಿದ್ದಂತೆ. 1,000ಕ್ಕೂ ಮಿಕ್ಕಿ ಮೆಟ್ಟಿಲುಗಳನ್ನು ಹೊಂದಿದ್ದರೂ, ಎಣಿಸಿದಷ್ಟು ಸುಲಭದಲ್ಲಿ ನೆಲಕಡಲೆ ತಿಂದು ಕೈತೊಳೆದಂತೆ ಖಂಡಿತವಾಗಿ ಅಲ್ಲ. ಪ್ರತೀ ಮೆಟ್ಟಿಲುಗಳ ಆಕಾರವೂ, ಎತ್ತರವೂ ಒಂದಕ್ಕಿಂತ ಒಂದು ಭಿನ್ನವಾಗಿದೆ.
ಚಾರಣಕ್ಕೆ ಸೆಪ್ಟೆಂಬರ್ ನಿಂದ ಮೇ ತಿಂಗಳವರೆಗೆ ಉತ್ತಮ ಸಮಯ. ಕುಡಿಯಲು ಬೇಕಾದ ನೀರು, ಆಹಾರ ಮರೆಯದೇ ತನ್ನಿ., ಏಕೆಂದರೆ, ಮೇಲೆ ಮೊಬೈಲ್ ನೆಟ್ವರ್ಕ್ ಬಿಟ್ಟು ಬೇರೆ ಇನ್ನೇನೂ ಲಭಿಸದು.
ಇಲ್ಲಿಗೆ ಹೋಗುವುದು ಹೇಗೆ?
ಸ್ವಂತ ವಾಹನ ಅತೀ ಉತ್ತಮ. ಬಸ್ಸಿನಲ್ಲಿ ಬರುವವರಾಗಿದ್ದಲ್ಲಿ, ಬೆಳ್ತಂಗಡಿ ಬಸ್ಸು ನಿಲ್ದಾಣದಿಂದ ಕಿಲ್ಲೂರು ಕಡೆಗೆ 15 ನಿಮಿಷಕ್ಕೊಂದು ಬಸ್ಸಿನ ಸೌಲಭ್ಯವಿದೆ. ‘ಮಂಜೊಟ್ಟಿ’ ಎನ್ನುವ ನಿಲ್ದಾಣದಲ್ಲಿ ಇಳಿದು 2 ಕಿ.ಮೀ. ರಿಕ್ಷಾದಲ್ಲಿ ಅಥವಾ ನಡೆಯುತ್ತಲೂ ಸಾಗಬಹುದು.
ನೆನಪಿಡಿ: ಯಾವುದೇ ಪ್ರವಾಸಿತಾಣಕ್ಕೆ ಹೋದರೂ ಜವಾಬ್ದಾರಿಯುತವಾಗಿ ವರ್ತಿಸಿ, ಮಾಲಿನ್ಯ ಮಾಡದೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ.
ಅಭಿಲಾಷ್ ಕೆ. ಎಸ್.
ಸಹಾಯಕ ಪ್ರಾಧ್ಯಾಪಕರು
ಸಸ್ಯಶಾಸ್ತ್ರ ವಿಭಾಗ
ಎಸ್. ಡಿ. ಎಮ್. ಕಾಲೇಜು, ಉಜಿರೆ