ಎತ್ತ ನೋಡಿದರೂ ಹಸಿರ ರಾಶಿ , ಅದರ ನಡು ನಡುವೆ ಪುಟ್ಟ ಮನೆಗಳು , ಯಾವ ದಿಕ್ಕಿನಿಂದ ಕಣ್ಣು ಹಾಯಿಸಿದರೂ ಗಮನಸೆಳೆಯುವ ಬೆಟ್ಟದ ಸಾಲು ಇವುಗಳ ವರ್ಣನೆ ಪದಗಳಲ್ಲಿ ವರ್ಣಿಸಲಾಗದ್ದು ನಮ್ಮ ಊಹೆಗೂ ನಿಲುಕದ್ದು.ಸೂರ್ಯನ ಬಿಸಿಲು ನಮ್ಮನ್ನು ಸಂಪೂರ್ಣ ಆವರಿಸಿದ್ದ ಮಾರ್ಚ್ ತಿಂಗಳಲ್ಲಿ ‘ಉದಕಮಂಡಲ ‘ ವನ್ನು ನಮ್ಮ ಬಳಗ ಪ್ರವೇಶಿಸಿತು. ಉಷ್ಣಾಂಶ ಉತ್ತುಂಗಕ್ಕೆ ಏರಿದ ಪ್ರದೇಶದಲ್ಲಿದ್ದ ನಮಗೆ ಊಟಿಯ ಚಳಿ ಮರುಭೂಮಿಯಲ್ಲಿ ನೀರು ದೊರಕುವಂತೆ ಮಾಡಿತ್ತು.
ಹಸಿರಿನ ಮಧ್ಯೆ ಪುಟಾಣಿ ಜೀವಿಗಳಂತೆ ನಮಗೆ ಭಾಸವಾಗಿತ್ತು. ಊಟಿಯ ಪ್ರವಾಸ ತಾಣಗಳಿಗಿಂತ ಅಲ್ಲಿನ ವಾತಾವರಣವೇ ನಮ್ಮ ಗಮನ ಸೆಳೆಯಿತು. ಅದರಲ್ಲೂ ನಾವಿದ್ದ ರೆಸಾರ್ಟ್ ಸುಂದರ ಹಸಿರು ಚಹಾ ಎಸ್ಟೇಟ್ ನ ಮಧ್ಯ ಭಾಗದಲ್ಲಿ ಇತ್ತು. ಅದರ ವೀಕ್ಷಣೆಯೇ ಮನಸ್ಸಿಗೆ ಮುದ ನೀಡುವಂತಿತ್ತು. ಬೆಳಗ್ಗೆದ್ದು ಕಾರಿನಲ್ಲಿ ಬಂದ ದಾರಿಯಲ್ಲಿ ಸಾಗುತ್ತಾ ಕಾಡಿನ ಮದ್ಯೆ ಚಲಿಸುತ್ತಾ ಸಂತಸ ಪಟ್ಟ 5 ಯುವ ಮನಸುಗಳ ಮರೆಯಲಾಗದ ಪ್ರವಾಸ ಇದು . ಇನ್ನೂ ವಿಶೇಷ ಏನೆಂದರೆ, ಅಲ್ಲಿನ ಜನರ ಜೀವನ ಶೈಲಿಯೇ ವಿಭಿನ್ನ ಮತ್ತು ಕುತೂಹಲಕಾರಿ.
ಬೆಳಗ್ಗೆ ಹತ್ತು ಗಂಟೆಯ ಮೊದಲು ಯಾವುದೇ ಉಪಹಾರ ಹೋಟೆಲ್ ನಲ್ಲಿ ಸಿದ್ಧವಾಗಿರುವುದಿಲ್ಲ. ರಾತ್ರಿ 9 ಗಂಟೆಯ ನಂತರ ಗಾಡಿ ಕೆಟ್ಟು ಹೋದರು ಮೆಕ್ಯಾನಿಕ್ ಸಿಗುವುದಿಲ್ಲ. ಇದೆಲ್ಲ ವಿಚಿತ್ರ ಎಂದು ಕಂಡರೂ ಅಲ್ಲಿನ ಜನರ ಬದುಕು ಇದಕ್ಕೆ ಹೊಂದಿಕೊಂಡಿದೆ ಎನ್ನಬಹುದು. ಗೊತ್ತಿಲ್ಲದ ಊರಲ್ಲಿ ಸಿಕ್ಕ ದಾರಿಯಲ್ಲಿ ಕಾರು ಸಾಗುತ್ತಾ ಮುಂದೆ ಹೋದಾಗ ಒಂದು ಬಾರಿ ಗಿರಿಮನೆ ಶ್ಯಾಮರಾವ್ ರವರ ಲೇಖನಗಳು ನೆನಪಾಗಿದ್ದು ಮಾತ್ರ ಸುಳ್ಳಲ್ಲ.ಭಾಷೆ ತಿಳಿದಿಲ್ಲ , ಗೂಗಲ್ ಮ್ಯಾಪ್ ನ ಕೃಪೆಯಿಂದಲೇ ನಾವು ನಾಲ್ಕು ದಿನ ಊಟಿ ಸುತ್ತಾಡಿದೆವು ಎನ್ನುವುದು ಇನ್ನೂ ವಿಪರ್ಯಾಸ.
ಸುಂದರ ವಾತಾವರಣ , ಹಸಿರನ್ನು ಹೊದ್ದು ಕೊಂಡು ಮಲಗಿರುವ ಊಟಿಯನ್ನು ನೀವು ಕಣ್ಣಾರೆ ನೋಡಲೇ ಬೇಕು. ಕಾರಣ ಇಷ್ಟೇ ಪ್ರಕೃತಿಯ ಸೌಂದರ್ಯ ನಮ್ಮ ಜ್ಞಾನ ಭಂಡಾರಕ್ಕೆ ನಿಲುಕದ್ದು, ಮೊಬೈಲ್ ಫೋನ್ ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗದ್ದು. ಹಾಗಾಗಿ ಪ್ರವಾಸಿ ತಾಣಗಳಿಗಿಂತ ಉದಕಮಂಡಲದ ಸೌಂದರ್ಯ ಮನಸಾರೆ ವೀಕ್ಷಿಸಿ ಪ್ರಕೃತಿಯ ಸೊಬಗನ್ನು ಅರಿಯಿರಿ ಎನ್ನುವುದು ನನ್ನ ಅಭಿಪ್ರಾಯ.
*ಸಿಂಚನ ಕಲ್ಲೂರಾಯ, ಪುತ್ತೂರು