ಆಹಾ! ಕೊಡಚಾದ್ರಿ , ಇದು ಪ್ರಕೃತಿಯು ಸೃಷ್ಟಿಸಿದ ಸ್ವರ್ಗ. ಇದೊಂದು ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟವಾಗಿದ್ದು, ಮಲೆನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ. ಇದೊಂದು ಸುಂದರವಾದ ಪ್ರವಾಸಿ ತಾಣವಾಗಿದ್ದು ಇದನ್ನು ಕಣ್ತುಂಬಿಸಿಕೊಳ್ಳಲು ದೇಶ- ವಿದೇಶದಿಂದ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಕ್ಕೆ (ಟ್ರಕ್ಕಿಂಗ್) ಹೇಳಿ ಮಾಡಿಸಿದ ಜಾಗ.
ಕೊಡಚಾದ್ರಿಗೆ ಹಿಂದಿನ ಕಾಲದಿಂದಲೂ ಜನರು ಪ್ರವಾಸಕ್ಕೆ ಹೋಗುತ್ತಿದ್ದರು. ಕ್ರಿಸ್ತಶಕ 8ನೇ ಶತಮಾನದಲ್ಲಿ ಶಂಕರಾಚಾರ್ಯರು ಭೇಟಿ ನೀಡಿದ್ದರು ಎಂಬ ಪ್ರತೀತಿಯಿದೆ. ಇಲ್ಲಿ ಇದ್ದ ಮೂಲ ಮೂಕಾಂಬಿಕೆಯನ್ನು ಕೊಲ್ಲೂರಿನಲ್ಲಿ ಪ್ರತಿಷ್ಠೆ ಮಾಡಿದ್ದಾರೆ ಎಂದು ಕೊಲ್ಲೂರಿನ ಸ್ಥಳಪುರಾಣ ಹೇಳುತ್ತದೆ. ಈ ದೇವಾಲಯದ ಬಳಿ ಇರುವ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವು ಮೂಕಾಸುರನನ್ನು ಸಂಹಾರ ಮಾಡಲು ದೇವಿ ಉಪಯೋಗಿಸಿದ ತ್ರಿಶೂಲ ಎಂಬುದು ಸ್ಥಳೀಯರ ಅಭಿಪ್ರಾಯ. ಈ ಬೆಟ್ಟದ ಮೇಲೆ ಸರ್ವಜ್ಞ ಪೀಠ ಎಂಬ ಒಂದು ಸಣ್ಣ ದೇವಾಲಯವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ದಾರಿಯನ್ನು ಇಳಿದರೆ ಚಿತ್ರಮೂಲವೆಂಬ ಸ್ಥಳವಿದೆ. ಈ ಜಾಗವು ನಾನಾ ಜಾತಿಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ.
ಈ ಬೆಟ್ಟವನ್ನು ತಲುಪಲು ತೀರಾ ಕಡಿದಾದ ರಸ್ತೆ ಇದ್ದು ಕೊಲ್ಲೂರು, ನಿಟ್ಟೂರು, ಸಂಪ್ಪೆಕಟ್ಟೆ, ಕಟ್ಟಿನ ಹೊಳೆಯ, ತನಕ ಟಾರ್ ರಸ್ತೆಗಳಿದ್ದು ನಂತರ ಕಡಿದಾದ ರಸ್ತೆ ಇದ್ದು ಜೀಪ್ ಗಳ ವ್ಯವಸ್ಥೆ ಇದೆ. ಇಲ್ಲಿ ಚಾರಣ ಎಂದು ನಡೆದು ಸಾಗುವ ಅನುಭವ ಒಂದಾದರೆ, ಜೀಪಿ ನಲ್ಲಿ ಸಾಗುವ ಅನುಭವ ಮತ್ತೊಂದು ಬಗೆ. ಆ ರಸ್ತೆಯಲ್ಲಿ ವಾಲಾಡುತ್ತ ಈಗ ಬಿದ್ದೆ, ಇನ್ನೊಂದು ಕ್ಷಣಕ್ಕೆ ಬಿದ್ದೆ ಎನ್ನುವಂತಹ ಜೀಪ್ ಪ್ರಯಾಣ ಕನಸಲ್ಲೂ ಬಿಟ್ಟುಬಿಡದಂತೆ ಕಾಡುತ್ತದೆ. ಆದರೆ ಜೀಪ್ ಚಾಲಕರಿಗೆ ಇದು ಬಲು ಸಲೀಸಾದ ಕೆಲಸ. ದಿನಕ್ಕೆ ಜೀಪ್ ಚಾಲಕರು ಎರಡರಿಂದ ಮೂರು ಟ್ರಿಪ್ ಹೋಗುತ್ತಾರೆ. ಹಲವರು ಜೀಪ್ ಚಾಲಕರ ಜೀವನಕ್ಕೆ ಇದು ಆಧಾರವಾಗಿದೆ. ಕಾಲುದಾರಿಯ ಮೂಲಕ ಚಾರಣದ ಅನುಭವ ಪಡೆಯಬಹುದು.
ಸ್ಥಳೀಯ ಗೈಡುಗಳು ಮಾರ್ಗದರ್ಶನ ಕೂಡ ನೀಡುತ್ತಾರೆ. ಚಾರಣ ಮಾಡುವುದಾದರೆ ಆದಷ್ಟು ಗುಂಪಿನಲ್ಲಿ ಹೋಗುವುದು ಉತ್ತಮ. ಜೀಪಿನಲ್ಲಿ ಪ್ರಯಾಣ ಮಾಡಿದರೆ ಕೊಡಚಾದ್ರಿಯ ಸೊಬಗನ್ನು ವೀಕ್ಷಿಸಲು ಎರಡು ಗಂಟೆ ಅವಕಾಶವಿರುತ್ತದೆ. ಚಾರಣವಾದರೆ ಬೆಳಗ್ಗೆ ಆರರಿಂದ ಸಂಜೆ ನಾಲ್ಕರವರೆಗೆ ಅವಕಾಶವಿರುತ್ತದೆ. ಕೊಡಚಾದ್ರಿಯ ಸೂರ್ಯಾಸ್ತ ಅಪರೂಪವಾದ ದೃಶ್ಯವಾಗಿದ್ದು, ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತದೆ. ವಿಶಾಲವಾದ ಆಗಸದಲ್ಲಿ ಸೂರ್ಯನು ಸಮುದ್ರದೊಳಗೆ ಜಾರಿ ಕಣ್ಮರೆಯಾದಂತೆ ಭಾಸವಾಗುತ್ತದೆ. ಸರ್ವಜ್ಞ ಪೀಠವು ಸೂರ್ಯಾಸ್ತವನ್ನು ವೀಕ್ಷಿಸುವ ವಿಹಂಗಮ ಸ್ಥಳವಾಗಿದೆ. ಕೊಡಚಾದ್ರಿಯಾ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಪ್ರವಾಸಿಗರಿಗೆ ಉಳಿಯಲು ಪ್ರವಾಸಿ ಮಂದಿರಗಳು ಲಭ್ಯವಿದೆ.
ಕೊಡಚಾದ್ರಿಗೆ ಸಾಗುವ ದಾರಿಯು ನರಕ ಎನಿಸಿದರು, ಅಲ್ಲಿನ ಸೌಂದರ್ಯ ಭೂಮಿಯ ಮೇಲಿನ ಸ್ವರ್ಗದಂತೆ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ತಂಪಾದ ಗಾಳಿ, ಪ್ರಕೃತಿ ಸೌಂದರ್ಯ, ನಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ಹೊರಹಾಕಿ ಮನಸ್ಸಿಗೆ ಹಿತವನ್ನು ನೀಡುತ್ತದೆ. ಇಲ್ಲಿಗೆ ಒಂದು ಸಲ ಭೇಟಿ ನೀಡಿದರೆ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ನಮ್ಮ ತನು-ಮನ ಅಲ್ಲಿಯೇ ಮನೆಮಾಡುತ್ತದೆ.
ಮೇದಿನಿ.ಎಸ್.ಭಟ್, ಎಂ.ಜಿ.ಎಂ ಕಾಲೇಜು ಉಡುಪಿ