Advertisement

World Tourism Day 2023: ಹಸಿರಿನ ಮಡಿಲಲ್ಲಿ ಮೈದುಂಬಿ ಹರಿಯುತ್ತಿದೆ ಚಾಮಡ್ಕ ಜಲಪಾತ

11:55 AM Sep 27, 2023 | Team Udayavani |

ಹಸಿರಿನ ಒಡಲಿನಲ್ಲಿ  ಹರಿಯುತ್ತಾ, ಮನಸ್ಸಿಗೆ ರೋಮಾಂಚನ ನೀಡುತ್ತಾ, ಕಣ್ಣಿಗೆ ಆನಂದವನ್ನು ನೀಡುವ ಫಾಲ್ಸ್ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಇತ್ತೀಚಿನ ದಿನಗಳಲ್ಲಂತೂ ಪ್ರವಾಸಿಗರು ಹೆಚ್ಚಾಗಿ ಜಲಪಾತಗಳಿಗೇ ಮಾರುಹೋಗುವುದುಂಟು. ಜೋಗ ಜಲಪಾತ, ದೂದ್ ಸಾಗರ್ ಜಲಪಾತ, ಮಲ್ಲಳ್ಳಿ ಜಲಪಾತ,  ಅಬ್ಬೆ ಜಲಪಾತ ಕೆಲವು ಪ್ರಸಿದ್ಧ ಪ್ರವಾಸಿ ಜಲಪಾತಗಳಾದರೆ, ಸುಳ್ಯ ಸಮೀಪದ ಚಾಮಡ್ಕ ಫಾಲ್ಸ್ ಹಚ್ಚ ಹಸುರಿನ ಮಧ್ಯದಲ್ಲಿ ಹರಿಯುತ್ತಿರುವ ಇನ್ನೊಂದು ಜಲಪಾತವಾಗಿದೆ. ಇದು ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ಜಲಪಾತವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಸ್ನೇಹಿತರ ಅಥವಾ ಕುಟುಂಬದವರ ಜೊತೆ ಭೇಟಿ ನೀಡಲು ಇದು ಪ್ರಶಸ್ತ ಸ್ಥಳ. ಮಕ್ಕಳಿಗಂತೂ ಆಟವಾಡಲು ಅದ್ಭುತ ತಾಣವೆಂದೇ ಹೇಳಬಹುದು.

Advertisement

ಹಾಲ್ನೊರೆಯಂತೆ ಭೋರ್ಗರೆಯುವ ಈ ಜಲಪಾತವು  ಮಳೆಗಾಲ ಬಂತೆಂದರೆ ಸಾಕು ರಭಸದಿಂದ ಹರಿಯುತ್ತಾ, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದು  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕುಜಡ್ಕ ಬಳಿ ಸೊಂಪಾದ ಅರಣ್ಯದ ಮಧ್ಯದಲ್ಲಿದೆ. ಬಂಟಮಲೆಯಲ್ಲಿ ಹುಟ್ಟುವ ಈ ನೀರಿನ ತೊರೆ ಪಯಸ್ವಿನಿ ನದಿಯನ್ನು ಸೇರುತ್ತದೆ. ಈ ಜಲಪಾತವನ್ನು ನೈಸರ್ಗಿಕ ಅದ್ಭುತವೆಂದೇ ಹೇಳಲಾಗುತ್ತದೆ.

ಪಶ್ಚಿಮ ಘಟ್ಟದ ಹಸಿರಿನ ನಡುವೆ ಮತ್ತು ಕುಕ್ಕೆ ಸುಬ್ರಹ್ಮಣ್ಯದಿಂದ ಕೇವಲ 35 ಕಿಮೀ ದೂರದಲ್ಲಿರುವ ಜಲಪಾತವು ಪ್ರಕೃತಿ ಮಾತೆಯ  ಕೃಪೆಯಿಂದ ದೊರೆತಿದ್ದಾಗಿದೆ. ಸಂಮೋಹನಗೊಳಿಸುವ ಚಾಮಡ್ಕ ಜಲಪಾತ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುತ್ತದೆ.

ಈ ಜಲಪಾತಕ್ಕೆ ಸುಳ್ಯದಿಂದ ಕೇವಲ 13 ಕಿ ಮೀ ಇದ್ದು, ತೆರಳಲು ಸುಗಮವಾದ ದಾರಿಯಿದೆ. ಸ್ವಂತ ವಾಹನ ಅಥವಾ ಬಸ್ ಮೂಲಕ ಕುಕ್ಕುಜಡ್ಕ ಮಾರ್ಗವಾಗಿ ಪ್ರಯಾಣಿಸಿದಾಗ ಡಿ. ಆರ್. ಜಿ ವೃತ್ತ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಅರ್ಧ ಕಿ.ಮೀ  ಚಲಿಸಿದರೆ ಸುಂದರವಾದ ಚಾಮಡ್ಕದ ಸೊಬಗು ಕಾಣಸಿಗುತ್ತದೆ. ಸೇತುವೆ ಬದಿಯಲ್ಲಿ ಗಾಡಿ ನಿಲ್ಲಿಸಿ ನಡೆದುಕೊಂಡು ಹೋದರೆ ಜಲಪಾತವಿರುವ ಸ್ಥಳಕ್ಕೆ ತಲುಪಬಹುದು.

Advertisement

ಜಲಪಾತ ಹೇಗಿದೆ?

ಇದು ಕೇವಲ ಜಲಪಾತ ಮಾತ್ರವಲ್ಲ ಪ್ರಶಾಂತತೆಯ ವಾತಾವರಣ. ಚಾಮಡ್ಕ ಜಲಪಾತವನ್ನು ತಲುಪುವುದೇ ಒಂದು ಆನಂದ. ಕುಕ್ಕುಜಡ್ಕ ಮಾರ್ಗದಲ್ಲಿ ಪ್ರಯಾಣಿಸುವ ವೇಳೆ ಸೊಂಪಾದ ವಾತಾವರಣ ನಮ್ಮನ್ನು ಸ್ವಾಗತಿಸುತ್ತದೆ. ಪ್ರಯಾಣಿಕರು ಈ ಸಮಯದಲ್ಲಿ ಪ್ರಕೃತಿ ಸೌಂದರ್ಯವನ್ನು ಅನುಭವಿಸಬಹುದು. ಮಳೆ ಹನಿಗಳ ಜೊತೆ,  ಚಿಲಿಪಿಲಿಗುಟ್ಟುವ ಹಕ್ಕಿಗಳು ಹಿತವಾದ ಧ್ವನಿಪಥವನ್ನು ಉಂಟುಮಾಡುತ್ತವೆ. ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿ ನಡೆದುಕೊಂಡು ಹೋಗುವಾಗ ಭೋರ್ಗರೆವ ಸದ್ದು ಕಿವಿಯನ್ನು ಅಪ್ಪಳಿಸುತ್ತದೆ. ಜಲಪಾತವೇ ನಮ್ಮನ್ನು ತನ್ನತ್ತ ಹೆಜ್ಜೆ ಹಾಕಿಸುವಂತೆ ಮಾಡುತ್ತವೆ.

ಹೀಗೆ ಚಿಕ್ಕ ಚಿಕ್ಕ ಮಳೆ ಹನಿಗಳ ಜೊತೆ ತಂಪಾದ ವಾತಾವರಣದಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆ ಚಾಮಡ್ಕ ಜಲಪಾತ ಕಾಣ ಸಿಗುತ್ತದೆ. ವ್ಯೂ ಪಾಯಿಂಟ್ ಗೆ ಹೋಗಿ ನಿಂತರೆ ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಆಸಕ್ತರು ಜಲಪಾತಕ್ಕೆ ಇಳಿದು ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲದೆ ಅದರ ಕೆಳಗೆ ಈಜಲೂ ಅವಕಾಶವಿರುತ್ತದೆ. ಸುತ್ತಲೂ ಹಚ್ಚ ಹಸುರಿನ ತೋಟವಿದ್ದು, ಪರಿಸರವಂತೂ ಸ್ವಚ್ಛತೆಯಿಂದ ಕೂಡಿದೆ. ಮಂಜಿನಂತೆ ರಭಸವಾಗಿ ಹರಿಯುವ ನೀರು ಕಲ್ಲಿನ ಮೇಲೆ ಜಾರುತ್ತಾ ತೊರೆ ಸೇರುವುದನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಅನಿಸುತ್ತದೆ. ಜಲಪಾತದ ಬಳಿಯೇ ಚಹಾದ ಅಂಗಡಿಯೂ ಇದ್ದು ಪ್ರಯಾಣಿಕರು  ಚಳಿಗೆ ಚಹಾದ ಜೊತೆ ಬಜ್ಜಿ ಬೋಂಡವನ್ನೂ ಸವಿಯಬಹುದು.

ಚಾಮಡ್ಕ ಜಲಪಾತದ ಬಳಿ ತಲುಪುವಾಗ ಅದರ ಸೌಂದರ್ಯಕ್ಕೆ ಮೂಕವಿಸ್ಮಿತರಾಗುವುದಂತೂ ಖಂಡಿತ. ನೀರು ಕೊಳಕ್ಕೆ ಧುಮುಕುತ್ತಿರುವುದನ್ನು ಕಾಣುತ್ತಾ ಮನಸ್ಸು ಶಾಂತವಾಗುತ್ತದೆ. ಪ್ರಯಾಣ ಮಾಡಿ  ದಣಿದ ಪ್ರಯಾಣಿಕರನ್ನು ತಂಪಾಗಿಸಲು ಮತ್ತು ಪುನರ್ಯೌವನಗೊಳಿಸಲು ಜಲಪಾತ ತನ್ನೆಡೆಗೆ  ಆಹ್ವಾನಿಸುತ್ತದೆ.

ಇದರ ಸೌಂದರ್ಯವನ್ನು ಮೀರಿ, ಚಾಮಡ್ಕ ಜಲಪಾತವು ಜೀವವೈವಿಧ್ಯತೆಯ ತಾಣವೂ ಆಗಿದೆ  ಸುತ್ತಲೂ ಅರಣ್ಯದಿಂದ ಕೂಡಿರುವುದರಿಂದ ಇದು ಸುಂದರವಾದ  ಚಿಟ್ಟೆ,  ವಿವಿಧ ಜಾತಿಯ ಹಕ್ಕಿ, ಕೋತಿಗಳನ್ನು ಕಾಣಬಹುದು. ಈ ಜಲಪಾತಕ್ಕೆ ಪ್ರಯಾಣಿಕರು ಮಾತ್ರವಲ್ಲ ಕಿರುಚಿತ್ರಕಾರರೂ ಶೂಟಿಂಗ್ ಗಾಗಿ ಬರುತ್ತಾರೆ. ಈ ಜಲಪಾತದ ಸೊಬಗಿನಡಿ ಆಲ್ಬಮ್ ಸಾಂಗ್, ಜಾಹೀರಾತು ಜೊತೆಗೆ ಕಿರುಚಿತ್ರಗಳ ಚಿತ್ರೀಕರಣವೂ ಆಗಿದೆ.

ಈ ಸ್ವಚ್ಛ ಪರಿಸರದಲ್ಲಿ ಯಾವುದೇ ಗಲಾಟೆ ಆಗದಂತೆ, ಅಮಲು ಪದಾರ್ಥ ಹಾಗೂ ಧೂಮಪಾನ ಮಾಡದಂತೆ ಪೊಲೀಸರು ಎಚ್ಚರಿಕೆ ವಹಿಸುತ್ತಿದ್ದಾರೆ.ಚಾಮಡ್ಕದ ಈ ಪ್ರದೇಶವು ನೈಸರ್ಗಿಕ ಪ್ರಪಂಚದ ಅದ್ಭುತಗಳಿಗೆ ಸಾಕ್ಷಿಯಾಗಿದೆ. ಇದು ಪ್ರಕೃತಿಯೊಂದಿಗೆ ಕಾಲ ಕಳೆಯಲು ಪ್ರಶಾಂತತೆಯನ್ನು ಅನುಭವಿಸಲು ಸಹಕಾರಿಯಾಗಿದೆ. ಪ್ರಕೃತಿ ದೇವಿ ನೀಡಿದ ಈ ಸೊಬಗನ್ನು ರಕ್ಷಿಸುವುದು ಹಾಗೂ ಇದಕ್ಕೆ ಹಾನಿ ಮಾಡದೇ ಕಾಪಾಡುವುದು ನಮ್ಮೆಲ್ಲರ ಹೊಣೆ.

ಅಪ್ಪಟ ಹಸಿರಿನಿಂದ ಸುತ್ತುವರೆದಿರುವ ಈ  ಜಲಪಾತದ ಕೆಳಗೆ ಈಜಲು ಅವಕಾಶವಿರುತ್ತದೆ. ಮಳೆಗಾಲದಲ್ಲಿ ಇಲ್ಲಿನ ಕಲ್ಲುಗಳು ಜಾರುತ್ತಿರುವುದರಿಂದ ಪ್ರವಾಸಿಗರು ಜಾಗರೂಕರಾಗಿರಬೇಕಾಗುತ್ತದೆ. ಒಂದು ದಿನದ ಪ್ರವಾಸಕ್ಕೆ ಅಥವಾ ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ವಿಶ್ರಾಂತಿ ಪಡೆಯಲು ಮತ್ತು ಶಾಂತತೆಯಲ್ಲಿ ಮುಳುಗಲು ಇದು ಪರಿಪೂರ್ಣ ಸ್ಥಳವಾಗಿದೆ.

ಲಾವಣ್ಯ ಎಸ್.

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ.

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next