ಹುಬ್ಬಳ್ಳಿ: ವಿಶ್ವ ಶಾಂತಿ, ಸೌಹಾರ್ದತೆಗಾಗಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿಶ್ವಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ವೃದ್ಧರೊಬ್ಬರು ಸೈಕಲ್ ಮುಖಾಂತರ ವಿಶ್ವ ಪರ್ಯಟನೆ ಕೈಗೊಂಡಿದ್ದಾರೆ.
ಮೂಲತಃ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಅಂಬರನಾಥದ ಮನೋಹರ ಸಖಾರಾಮ ಕದಂ ಎಂಬುವರೆ ವಿಶ್ವ ಪರ್ಯಟನೆ ನಡೆಸುತ್ತಿದ್ದಾರೆ. ಮನೋಹರ ಕದಂ ಅವರು ಅಂದಾಜು 50 ಸಾವಿರ ಕಿಲೋ ಮೀಟರ್ ವಿಶ್ವ ಪರ್ಯಟನೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ಸೈಕಲ್ ತುಳಿಯುತ್ತಲೇ ಬಾಂಗ್ಲಾದೇಶ, ಚೀನಾ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಸಿಂಗಾಪುರ, ಮಲೇಷಿಯಾ, ಜರ್ಖಾತ್ ಮತ್ತು ಥೈಲ್ಯಾಂಡ್ ದೇಶಗಳ ಸವಾರಿ ಮಾಡಿದ್ದಾರೆ. ಈಗ ಉಲ್ಲಾಸನಗರದಿಂದ ಬೆಂಗಳೂರು, ಊಟಿ ಪರ್ಯಟನೆ ಕೈಗೊಂಡಿದ್ದಾರೆ.
ಬುಧವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದು, ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಇವರು ದಿನಕ್ಕೆ ನೂರು ಕಿ.ಮೀ. ಸೈಕಲ್ ತುಳಿಯುವ ಮೂಲಕ ತಮ್ಮ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಕೇವಲ ಒಂದು ಸೈಕಲ್ ಹಾಗೂ ಒಂದು ಏರ್‌ಪಂಪ್ ಮಾತ್ರವೇ ತೆಗೆದುಕೊಂಡು ಪ್ರಯಾಣ ಮಾಡುತ್ತಿರುವ ಇವರು, ಯಾವುದೇ ಸಂದರ್ಭದಲ್ಲಿ ಕೂಡ ಬಸ್ ಹಾಗೂ ಇನ್ನಿತರೆ ವಾಹನದ ಸಹಾಯ ಬಯಸದೆ ತಮ್ಮ ದೈಹಿಕ ಸಾಮರ್ಥ್ಯದಿಂದಲೇ ಪರ್ಯಟನೆ ಮಾಡುತ್ತಿದ್ದಾರೆ.
ಮಾರ್ಚ್ ಇಲ್ಲವೆ ಏಪ್ರಿಲ್‌ನಲ್ಲಿ ಇಂಗ್ಲೆಂಡ್ ದೇಶಕ್ಕೆ ಪ್ರಯಾಣ ಬೆಳೆಸಲಿರುವ ಇವರು, ಲಂಡನ್‌ದ ಮ್ಯೂಸಿಯಂನಲ್ಲಿ ಇರಿಸಲಾದ ಛತ್ರಪತಿ ಶಿವಾಜಿ ಅವರ ಖಡ್ಗವನ್ನು ನೋಡುವ ಅಭಿಲಾಷೆ ಹೊಂದಿದ್ದಾರೆ. ಬುಧವಾರ ಮಧ್ಯಾಹ್ನ ಮನೋಹರ ಕದಂ ಅವರನ್ನು ಗೋಕುಲ ರಸ್ತೆ ಠಾಣೆಯ ಪೊಲೀಸರು ಶುಭಕೋರಿ ಬೀಳ್ಕೊಟ್ಟರು.