Advertisement

ಧ್ವನಿ ಪ್ರತಿಷ್ಠಾನ ಕಲಾವಿದರಿಂದ ವಿಶ್ವ ರಂಗ ದಿನಾಚರಣೆ

03:45 PM Apr 02, 2019 | Team Udayavani |

ಮುಂಬಯಿ: ಧ್ವನಿ ಪ್ರತಿಷ್ಠಾನ ಕಲಾವಿದರು ದುಬಾಯಿ ಇವರಿಂದ ವಿಶ್ವ ರಂಗ ದಿನಾಚರಣೆಯು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮಾ. 27ರಂದು ನಡೆಯಿತು.

Advertisement

ಹವ್ಯಾಸಿ ರಂಗನಟಿ ಆರತಿ ಅಡಿಗ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2002ರಲ್ಲಿ ಗಿರೀಶ್‌ ಕಾರ್ನಾಡ್‌ ಅವರು ಭಾರತದ ಪರವಾಗಿ ನೀಡಿದ ಸಂದೇಶದಲ್ಲಿ ಅವರು ಪ್ರಸ್ತಾಪಿಸಿದ ಭಾರತದ ನಾಟಕದ ಉದಯ ಕಥೆ, ಭರತಮುನಿಯ ನಾಟ್ಯಶಾಸ್ತ್ರದ ಮೊದಲ ಅಧ್ಯಾಯವೇ ನಾಟಕ
ಎನ್ನುವುದರ ಮೂಲಕ ಆರಂಭಗೊಳ್ಳುವ ಭಾರತದ ನಾಟಕದ ಇತಿಹಾಸವನ್ನು ತೆರೆದಿಟ್ಟರು. ವಿಶ್ವಾದ್ಯಂತ ನೂರಾರು ದೇಶಗಳಲ್ಲಿ ಕೇಂದ್ರವನ್ನು ಹೊಂದಿರುವ ಐಟಿಐ ಭಾರತದಲ್ಲಿ ಶೀಘ್ರದಲ್ಲೇ ಕೇಂದ್ರವನ್ನು ಹೊಂದುವಂತಾಗಲಿ. ರಂಗಭೂಮಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿರುವ ಭಾರತದ ಹಲವಾರು ರಂಗ ಸಂಸ್ಥೆಗಳಿಗೆ ನೆರವಾಗಲಿ ಎಂದು ನುಡಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ ಸಾಹಿತ್ಯ ಹಾಗೂ ರಂಗಭೂಮಿಗೆ ಹಲವಾರು ರೀತಿಯ ಸೇವೆಯನ್ನು ಸಲ್ಲಿಸುತ್ತಿರುವ ಸುಧಾಕರ್‌ ರಾವ್‌ ಪೇಜಾವರ ಅವರು ಮಾತನಾಡಿ, ನಾಟಕ ಆಡುವುದು ಎನ್ನುವ ಮಾತು ಕೇವಲ ವ್ಯಂಗಕ್ಕಾಗಿ ಅಥವಾ ರಾಜಕೀಯ ಭಾಷಣಗಳಿಗೆ ಸೀಮಿತವಾಗದೆ ಅದರ ಹಿಂದಿನ ಗಾಢತೆ, ಪರಿಶ್ರಮ ಮತ್ತು ಸಮಯ ಎಲ್ಲರಿಗೂ ಅರ್ಥವಾಗಬೇಕು. ದುಬೈಯಂತಹ ದೇಶದಲ್ಲಿ ಬಂದು ಧ್ವನಿ ಕಲಾವಿದರು ಹಲವಾರು ಕೊರತೆ ಮತ್ತು ವೈರುಧ್ಯಗಳನ್ನು ಎದುರಿಸಿದರೂ ಛಲ ಬಿಡದೆ ಕೇವಲ ಶ್ರೇಷ್ಠ ಮತ್ತು ಸತ್ವಭರಿತ ನಾಟಕಗಳನ್ನು ಮಾತ್ರ ಪ್ರದರ್ಶಿಸುತ್ತಿರುವುದು ಅಭಿನಂದನೀಯ ಎಂದು ನುಡಿದು ಸಂಸ್ಥೆಯ ಕಲಾವಿದರನ್ನು ಪ್ರಶಂಸಿಸಿದರು. ಕಾರ್ಯಕ್ರಮದ ಅಚ್ಚುಕಟ್ಟುತನ ಹಾಗೂ ಪ್ರತಿಯೋರ್ವ ಕಲಾವಿದ ಪಾಲ್ಗೊಂಡಿರುವುದು ಅಭಿನಂದನೀಯವಾಗಿದೆ ಎಂದು ಹೇಳಿದರು.

ಧ್ವನಿಯ ಹಿರಿಯ ಕಲಾವಿದ ನಾಟಕ, ಯಕ್ಷಗಾನ, ಚಲನಚಿತ್ರ ಕಲಾವಿದ ವಾಸು ಬಾಯಾರು ಮಾತನಾಡಿ, ರಂಗಭೂಮಿ ಅಳಿವಿಲ್ಲದ ಕಲೆಯಾಗಿದೆ. ಆದರೆ ಉಳಿವು ನಮ್ಮ ಕರ್ತವ್ಯವಾಗಿದೆ. ರಂಗಭೂಮಿ ಪ್ರೇಕ್ಷಕರ ಕೊರತೆಯನ್ನು ಕಂಡಾಗ ಬೀದಿ ನಾಟಕ, ಡೇರೆ ನಾಟಕ ಕಂಪೆನಿಗಳು ಅನುಸರಿಸಿದ ಕ್ರಮ ವಿಶೇಷವಾದದ್ದು ಎಂದು ಹೇಳಿದರು.

ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್‌ ರಾವ್‌ ಪಯ್ನಾರ್‌ ಅವರು ಮಾತನಾಡಿ, ರಂಗಭೂಮಿ ಕೇವಲ ಮನೋರಂಜನೆಗಾಗಿ ಅಲ್ಲ. ಮನೋ ವಿಕಾಸಕ್ಕಾಗಿ. ಹಿಂದೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿದ್ದ ರಂಗಭೂಮಿ ಇಂದು ಅಧಃಪತನಗೊಂಡು ಕೇವಲ ಹವ್ಯಾಸಿ ಕಲಾವಿದರ ಕೂಟಕ್ಕೆ ಬಂದು ನಿಂತಿದೆ. ಈ ರಂಗಕಲೆಯನ್ನು ಉಳಿಸಿ-ಬೆಳೆಸುವ ಮಹತ್ತರವಾದ ಜವಾಬ್ದಾರಿ ಈಗ ಹವ್ಯಾಸಿ ಕಲಾವಿದರ ಹೆಗಲ ಮೇಲಿದೆ ಎಂದು ನುಡಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಧ್ವನಿ ಪ್ರತಿಷ್ಠಾನದ ಪ್ರತಿಯೋರ್ವ ಕಲಾವಿದನಿಂದ ಏಕಪಾತ್ರಾಭಿನಯ, ಜಾನಪದ ಮತ್ತು ರಂಗಗೀತೆಗಳ ಹಾಡುಗಾರಿಕೆ, ಅನುಕರಣೆ, ಶಾಸ್ತ್ರೀಯ ನೃತ್ಯ, ಮೂಕಾಭಿನಯ ಇನ್ನಿತರ ಕಾರ್ಯಕ್ರಮಗಳು ನಡೆದವು. ಕೆ. ವಿ. ಅಡಿಗ, ವಿನಯ್‌ ಪೂಜಾರಿ, ಆದೇಶ್‌ ಹಾಸನ್‌, ಸಪ್ನಾ ಕಿರಣ್‌, ನರಸಿಂಹನ್‌, ಅಶೋಕ್‌ ಅಂಚನ್‌, ರುದ್ರಯ್ಯ, ವಾಸು ಬಾಯಾರು ಮೊದಲಾದವರು ಭಾಗವಹಿಸಿದರು. ರುದ್ರಯ್ಯನವಲಿ ಹಿರೇಮಠ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next