ಕುಂದಾಪುರ: ಪ್ರೇಕ್ಷಕರೂ ರಂಗಗೀತೆಗಳನ್ನು ಜೊತೆಗೇ ಹಾಡುವಂತೆ ಉತ್ತೇಜಿಸುವ ಮೂಲಕ ನಟ ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನು ವಿಲೀನಗೊಳಿಸಿ ಇಡೀ ಸಭಾಂಗಣವನ್ನೇ ರಂಗದ ಮೇಲೆ ತಂದ ಶ್ರೇಯಸ್ಸು ರಂಗಭೂಮಿಗೆ, ಕಲಾವಿದರಿಗೆ ಸಲ್ಲಬೇಕು ಎಂದು ಹಿರಿಯ ಜೇಸಿ ಮತ್ತು ನ್ಯಾಯವಾದಿ ಶ್ರೀಧರ್ ಹೇಳಿದರು.
ಇಲ್ಲಿನ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಸ್ಥಳೀಯ ಜೇಸಿಐ ಕುಂದಾಪುರ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನದಲ್ಲಿ ಮಾತನಾಡಿದರು.
ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವ್‌ಕಾರ್, ನಮ್ಮ ಪೂರ್ವಜರು ಮಾನವರಾದದ್ದು ಕೇವಲ ಜೈವಿಕ ವಿಕಾಸದಿಂದಷ್ಟೇ ಅಲ್ಲ. ಬದಲಾಗಿ ನಾವು ಮನುಷ್ಯ ಎಂದು ಕರೆಯಿಸಿಕೊಳ್ಳಲು ಸಾಧ್ಯವಾದದ್ದೇ ಸಾಂಸ್ಕೃತಿಕ ವಿಕಾಸದಿಂದ. ಪ್ರಶ್ನೆಯೇ ನಮ್ಮಲ್ಲಿ ಪ್ರಜ್ಞೆಯನ್ನು ಹುಟ್ಟಿಸಿತು. ಆ ಪ್ರಶ್ನೆಯನ್ನು ಇನ್ನೊಬ್ಬರಿಗೆ ಕೇಳುವಾಗಲೇ ರಂಗಭೂಮಿ ಹುಟ್ಟಿತು ಎಂದರು.
ಕ್ಯೂಬಾದ ರಂಗಕರ್ಮಿ ಕಾರ್ಲೋಸ್ ಸಾಲ್ಡ್ರನ್ ಅವರ ಸಂದೇಶವನ್ನು ರಂಗನಿರ್ದೇಶಕ ಮತ್ತು ಸಮುದಾಯ ಸಂಘಟನೆಯ ಉಪಾಧ್ಯಕ್ಷ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ಕಲಾವಿದರಾದ ಸುಧಾಕರ ಕಾಂಚನ್, ವಿಕ್ರಮ್, ಅಶೋಕ ತೆಕ್ಕಟ್ಟೆ, ಸಚಿನ್ ಅಂಕೋಲಾ, ಶಿವಾನಂದ ಬೀಜಾಡಿ, ಅಲ್ಡಿ†ನ್ ಡಿ’ಸೋಜ, ರವೀಂದ್ರ ಕೋಡಿ, ರವಿ ಕಟ್ಕರೆ, ಅನ್ನಪೂರ್ಣ ಸಚಿನ್ ಅವರ ತಂಡವು ರಂಗಗೀತೆಗಳು ಮತ್ತು ರಂಗಚಲನೆ, ಆಂಗಿಕಗಳ ನೆರವಿನಲ್ಲಿ ವಾಚಿಸಿದರು.
ಹಿರಿಯ ಕಲಾವಿದರಾದ ಜಿ.ವಿ ಕಾರಂತ, ಬಾಲಕೃಷ್ಣ ಎಂ., ಶಂಕರ ಆನಗಳ್ಳಿ, ನರಸಿಂಹ ಎಚ್., ರಂಗ ವಿಮರ್ಶಕಿ ಶೋಭಾ ಅರಸ್ ಮತ್ತಿತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಚಿಂತಕ ಪಡುಕರೆ ಉದಯ ಶೆಟ್ಟಿ ಕಲಾವಿದರನ್ನು ಅಭಿನಂದಿಸಿದರು.