ಕಾಪು: ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ, ತುಳು ಸಂಸಾರ ಪಣಿಯೂರು ಇವರ ವತಿಯಿಂದ ಪಣಿಯೂರು ಶ್ರೀ ದುರ್ಗಾ ದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ರಂಗ ದಿನಾಚರಣೆ ಕಾರ್ಯಕ್ರಮವನ್ನು ಕಲಾವಿದೆಯ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಆಚರಿಸಲಾಯಿತು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ಯಾವುದೇ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಸುವ ಮಾಧ್ಯಮ ವಾಗಿದೆ. ಜಗತ್ತು ಬದಲಾದಂತೆ ರಂಗಭೂಮಿಯಲ್ಲಿಯೂ ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ ನಾವೂ ಕೂಡ ಬದಲಾವಣೆಗೆ ತಕ್ಕಂತೆ ಬದಲಾಗಬೇಕಾದ ಅನಿವಾರ್ಯತೆ ಇದೆ. ಯಾವುದೇ ಭಾಷೆಯ ಸಾಹಿತ್ಯ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವುದರ ಜತೆಗೆ ಭಾಷೆ ಕೂಡ ಉಳಿಸಿ ಬೆಳೆಸಲು ಪ್ರಯತ್ನಿಸಬೇಕು ಎಂದವರು ತಿಳಿಸಿದರು.
ವಿಶ್ವ ರಂಗದಿನಾಚರಣೆಯ ಬಗ್ಗೆ ಉಪನ್ಯಾಸ ನೀಡಿದ ರಂಗಕರ್ಮಿ ಗಣೇಶ್ ರಾವ್ ಎಲ್ಲೂರು ಮಾತನಾಡಿ ಯಾವುದೇ ಕಟ್ಟುಪಾಡು, ತಾರತಮ್ಯವಿಲ್ಲದ ಏಕೈಕ ಭೂಮಿಯೆಂದರೆ ಅದು ರಂಗಭೂಮಿ ಮಾತ್ರ. ದೈನಂದಿನ ಜೀವನದ ಭೂತಾರಾಧನೆ, ನಾಗರಾಧನೆ ಕೂಡ ಒಂದು ರೀತಿಯಲ್ಲಿ ರಂಗಭೂಮಿಯ ಚಟುವಟಿಕೆಗಳಾಗಿವೆ ಎಂದರು.
ಕಲಾ ತಂಡದ “ಅಂಚಿಡಿªಂಚಿ – ಇಂಚಿಡªಂಚಿ’ ಎಂಬ ನೂತನ ತುಳು ನಾಟಕದ ಮುಹೂರ್ತ ನೆರವೇರಿಸಿದ ಕೆ.ಎಲ್. ಕುಂಡಂತಾಯ ಮಾತನಾಡಿ, ಬದಲಾದ ಕಾಲಮಾನಕ್ಕೆ ತಕ್ಕಂತೆ ನಾಟಕ ಗಳು ಬದಲಾಗಿವೆ. ಆದರೆ ಸಕಾಲಿಕವಾಗಿ ಪ್ರೇಕ್ಷಕರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಆ ರೀತಿಯಲ್ಲಿಯೇ ನಾಟಕದ ವಸ್ತು ವಿಷಯವನ್ನು ತಿಳಿಸಿದರೆ ಹೆಚ್ಚು ಪ್ರಸ್ತುತ ಎನಿಸುತ್ತದೆ ಎಂದರು.ಸ್ಥಳೀಯವಾಗಿ ನಾಟಕರಂಗದಲ್ಲಿ ಪ್ರಖ್ಯಾತಿಯಲ್ಲಿರುವ ರಂಗ ಕಲಾವಿದ ರಾದ ಶುಭಕರ ಬೆಳಪು, ನವೀನ್ ಕುಮಾರ್ ಎಲ್ಲೂರು ಮತ್ತು ಗಣೇಶ್ ಸಾಲಿಯಾನ್ ಅದಮಾರು ಇವರನ್ನು ಸಮ್ಮಾನಿಸಲಾಯಿತು.
ತುಳು ಸಂಸಾರ ಪಣಿಯೂರು ಇದರ ಅಧ್ಯಕ್ಷ ಎಲ್ಲೂರು ಆನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಮತಾ ಆರ್. ಶೆಟ್ಟಿ, ನಿವೃತ್ತ ಶಿಕ್ಷಕಿ ಶರಾವತಿ ಯು. ಆರ್., ಸ್ಥಳೀಯರಾದ ನವೀನ್ ಕುಮಾರ್, ಸದಾನಂದ ಶೆಟ್ಟಿ, ಸಂಜೀವ ಕೆ. ಉಪಸ್ಥಿತರಿದ್ದರು.
ತುಳು ಸಂಸಾರ ಪಣಿಯೂರು ಇದರ ಪದಾಧಿಕಾರಿಗಳಾದ ಸುರೇಶ್ ಕುಲಾಲ್ ಸ್ವಾಗತಿಸಿ, ವಂದಿಸಿದರು. ಯತೀಶ್ ಶೆಟ್ಟಿ ಪ್ರಸ್ತಾವನೆಗೈದರು. ರಾಕೇಶ್ ಶೆಟ್ಟಿ ನಿರೂಪಿಸಿದರು.