ಲಂಡನ್: ಭಾರತ-ಆಸ್ಟ್ರೇಲಿಯ ನಡುವೆ “ತಟಸ್ಥ ಕೇಂದ್ರ’ವಾದ ಲಂಡನ್‌ನ ಓವಲ್ ಮೈದಾನಲ್ಲಿ ನಡೆಯುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನಿಷ್ಠ ಮೊದಲ 4 ದಿನಗಳ ಆಟದ ವೇಳೆ ಸ್ಟೇಡಿಯಂ ಫುಲ್ ಆಗುವ ಎಲ್ಲ ಸಾಧ್ಯತೆ ಇದೆ ಎಂದು ಇಸಿಬಿ ತಿಳಿಸಿದೆ. 2ನೇ ಆವೃತ್ತಿಯ ಈ ಫೈನಲ್ ಪಂದ್ಯ ಜೂನ್ 7ರಿಂದ 11ರ ತನಕ ಸಾಗಲಿದೆ.
ಇನ್ನೊಂದು ಶುಭ ಸಮಾಚಾರವೆಂದರೆ, ಈ ಪಂದ್ಯಕ್ಕೆ ಐಸಿಸಿ ಮೀಸಲು ದಿನವನ್ನು ಇರಿಸಿರುವುದು. ಅದರಂತೆ ಪಂದ್ಯ ಜೂ. 12ರ ತನಕ ಮುಂದುವರಿಯಬಹುದಾಗಿದೆ.
“ವಿಶ್ವದ ಎರಡು ಶ್ರೇಷ್ಠ ದರ್ಜೆಯ ಟೆಸ್ಟ್ ತಂಡಗಳು ಇಲ್ಲಿ ಸ್ಪರ್ಧೆಗೆ ಇಳಿಯಲಿವೆ. ಸಹಜವಾಗಿಯೇ ಇಂಗ್ಲೆಂಡ್‌ನ ಕ್ರಿಕೆಟ್ ಪ್ರೇಮಿಗಳಿಗೆ ಈ ಪಂದ್ಯದ ಬಗ್ಗೆ ವಿಶೇಷ ಕುತೂಹಲ ಮೂಡಿದೆ. ಹಾಗೆಯೇ ಭಾರತ, ಆಸ್ಟ್ರೇಲಿಯ ಮೂಲದ ಕ್ರಿಕೆಟ್‌ಪ್ರಿಯರೂ ಭಾರೀ ಆಸಕ್ತಿ ತಾಳಿದ್ದಾರೆ. ಹೀಗಾಗಿ ಮೊದಲ 4 ದಿನ ಓವಲ್ ಸ್ಟೇಡಿಯಂ ಭರ್ತಿ ಆಗುವ ಎಲ್ಲ ಸಾಧ್ಯತೆ ಇದೆ’ ಎಂಬುದಾಗಿ ಐಸಿಸಿ ಜಿಎಂ ವಾಸಿಮ್ ಖಾನ್ ಹೇಳಿದ್ದಾರೆ.
“ಲಂಡನ್ ಹವಾಮಾನ ಪಂದ್ಯಕ್ಕೆ ಸಹಕರಿಸುವ ನಿರೀಕ್ಷೆ ನಮ್ಮದು. ಆದರೂ ನಷ್ಟವಾದ ಅವಧಿಯನ್ನು ತುಂಬಿಸಿ ಕೊಡುವ ಉದ್ದೇಶದಿಂದ ಮೀಸಲು ದಿನವನ್ನು ಇರಿಸಲಾಗಿದೆ’ ಎಂದೂ ಖಾನ್ ತಿಳಿಸಿದರು.
ಎರಡು ವರ್ಷಗಳ ಹಿಂದೆ ಸೌತಾಂಪ್ಟನ್‌ನಲ್ಲಿ ಆಡಲಾದ ಫೈನಲ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್ ಎದುರಾಗಿದ್ದವು. ಡ್ರಾ ಮಾಡಿಕೊಳ್ಳಬಹುದಾಗಿದ್ದ ಪಂದ್ಯವನ್ನು ಸೋತ ಭಾರತ ಪ್ರಶಸ್ತಿ ವಂಚಿತವಾಗಿತ್ತು.