Advertisement

ಧರೆಯ ಮೇಲಿನ ಕುಬೇರ ಪುಟಿನ್ ಗೆ ನಿರ್ಬಂಧ ವಿಧಿಸಲು ಜಾಗತಿಕ ಶಕ್ತಿಗಳ ಮೀನಾಮೇಷ ?

12:24 PM Feb 26, 2022 | Team Udayavani |

ಉಕ್ರೇನ್ ಮೇಲೆ ದಾಳಿ ನಡೆಸಿರುವ ಕಾರಣಕ್ಕೆ ನ್ಯಾಟೋ ಸೇರಿ ಅಂತಾರಾಷ್ಟ್ರೀಯ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟೀನ್ ಸಂಪತ್ತಿನ ಬಗ್ಗೆ ಈಗ ವಿಶ್ವಾದ್ಯಂತ ಮತ್ತೆ ಚರ್ಚೆ ಶುರುವಾಗಿದೆ. ಈ ಭೂತಳದ ಅತ್ಯಂತ ಶ್ರೀಮಂತ ರಾಜಕಾರಣಿ ಎಂದು ಪುಟಿನ್ ಅವರನ್ನು ಪರಿಗಣಿಸಲಾಗಿದ್ದು ಅವರು ಧರೆಯ ಮೇಲಿನ ಕುಬೇರ ಎಂದರೂ ತಪ್ಪಲ್ಲ.

Advertisement

ಈ ಕಾರಣಕ್ಕಾಗಿಯೇ ರಷ್ಯಾ ಮೇಲೆ ವಿಧಿಸುವ ಆರ್ಥಿಕ ದಿಗ್ಬಂಧ ಪುಟಿನ್ ಮೇಲಿನ ನಿರ್ಬಂಧವೂ ಆಗುತ್ತದೆ ಎಂಬುದು ಅಮೆರಿಕಾ ಸೇರಿ ನ್ಯಾಟೋ ರಾಷ್ಟ್ರಗಳ ಲೆಕ್ಕಾಚಾರವಾಗಿತ್ತು. ಆದರೆ ಈ ಬೆದರಿಕೆಗೆ ಪುಟಿನ್ ಬಗ್ಗಿಲ್ಲ,ಜಗ್ಗಿಲ್ಲ. ಹೀಗಾಗಿ ಪುಟಿನ್ ಆಪ್ತ ಉದ್ಯಮಿಗಳ ಮೇಲೆ ಬ್ರಿಟನ್ ಸೇರಿ ಕೆಲ ರಾಷ್ಟ್ರಗಳು ನಿರ್ಬಂಧ ವಿಧಿಸಿವೆ.

ಪುಟಿನ್ ಅವರ ಕಟು ಟೀಕಾಕಾರ ಹಾಗೂ ಆರ್ಥಿಕ ತಜ್ಞ ಬಿಲ್ ಬಾರ್ ವರ್ಡ್ ಪ್ರಕಾರ ಸರಿಸುಮಾರು 200 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಜೆಫ್ ಬಿಜೊ, ಬಿಲ್ ಗೇಟ್ಸ್ , ಎಕಾನ್ ಮಸ್ಕ್ ಗಿಂತಲೂ ಪುಟಿನ್ ಸಿರಿವಂತ. ರಷ್ಯಾದ ತೈಲೋದ್ಯಮದಲ್ಲಿ ಪುಟಿನ್ ಸಿಂಹಪಾಲು ಹೂಡಿಕೆ ಹೊಂದಿದ್ದು, ರಷ್ಯಾದಲ್ಲಿ ಪುಟಿನ್ ಸಂಪತ್ತಿನ ಪತ್ತೆ ಕಸರತ್ತು ನಡೆಸುವುದೇ ವ್ಯರ್ಥ ಪ್ರಯತ್ನ ಎಂದು ಕೆಲವರ ವಾದ.

ಅಮೆರಿಕಾ ಹಾಗೂ ಯುರೋಪ್ ರಾಷ್ಟ್ರಗಳಲ್ಲೂ ಪುಟಿನ್ ಹೂಡಿಕೆ ಮಾಡಿದ್ದು, ರಷ್ಯಾದ ಪ್ರಮುಖ ಬ್ಯಾಂಕ್ ಗಳಲ್ಲಿ ವೈಯಕ್ತಿಕ ಪಾಲುದಾರಿಕೆ ಇದೆ. ಹೀಗಾಗಿ ಬ್ರಿಟನ್ ಸೇರಿದಂತೆ ಪ್ರಮುಖ ರಾಷ್ಟ್ರಗಳು ತಮ್ಮಲ್ಲಿರುವ ರಷ್ಯಾ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿ ಬೆದರಿಸುವ ಪ್ರಯತ್ನ ನಡೆಸಿದ್ದಾರೆ.

ಕೆಲವು ವಿಶ್ಲೇಷಕರ ಪ್ರಕಾರ ರಷ್ಯಾ ಮೇಲೆ ವಿಧಿಸುವ ದೀರ್ಘಕಾಲೀನ‌ ನಿರ್ಬಂಧ ಯುರೋಪಿಯನ್ ರಾಷ್ಟ್ರಗಳಿಗೇ ಸಮಸ್ಯೆ ಉಂಟು ಮಾಡಬಹುದು. ಇದರಿಂದ ಪುಟಿನ್ ಗೆ ಲಾಭ ಎಂದು ಹೇಳಲಾಗುತ್ತಿದೆ.

Advertisement

ಆದರೆ ಪುಟಿನ್ ಮಾತ್ರ ತಮ್ಮ ಸಂಪತ್ತಿನ ಬಗ್ಗೆ ವ್ಯಕ್ತವಾಗುವ ಅಂತಾರಾಷ್ಟ್ರೀಯ ಟೀಕೆ ಬಗ್ಗೆ ಎಂದು ತಲೆಕೆಡಿಸಿಕೊಂಡಿಲ್ಲ. ಕ್ರೆಮ್ಲಿನ್ ನ ಅಧಿಕೃತ ದಾಖಲೆ ಪ್ರಕಾರ, ಪುಟಿನ್ ವಾರ್ಷಿಕ ೧೪೦,೦೦೦ ಡಾಲರ್ ವೇತನ ಪಡೆಯುತ್ತಿದ್ದು ಮೂರು ಕಾರು, ಒಂದು ಟ್ರಿಲರ್, 800 ಚದರ ಅಡಿ ಅಪಾರ್ಟ್ ಮೆಂಟ್ ಹಾಗೂ ಪಿಂಚಣಿಗೆ ಸಂಬಂಧಪಟ್ಟ ಹೂಡಿಕೆಯನ್ನು ಮಾತ್ರ ಹೊಂದಿದ್ದಾರೆ. ಆದರೆ ಇದು ತೋರಿಕೆಯ ಲೆಕ್ಕಾಚಾರವಾಗಿದ್ದು, ಪುಟಿನ್ ಜಾಗತಿಕ ಕುಬೇರ ಎಂಬುದನ್ನು ಮಾತ್ರ ವಿಶ್ವವೇ ಹೇಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next