ಬಳ್ಳಾರಿ: ಹಿರಿಯ ನಾಗರಿಕರಿಗೆ ಮನೆಯ ಕುಟುಂಬದ ಸದಸ್ಯರು ನೆರವು, ಬೆಂಬಲ, ಗೌರವ ನೀಡುವ ಮೂಲಕ ಅವರ ನೆಮ್ಮದಿಯ ಜೀವನಕ್ಕೆ ನಾವೆಲ್ಲ ಜೊತೆಯಾಗಬೇಕು. ಹಿರಿಯರನ್ನು ಗೌರವದಿಂದ ಕಾಣಬೇಕು ಮತ್ತು ಅವರ ಮಾತುಗಳಿಗೆ ಬೆಲೆಕೊಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್. ಎಲ್. ಜನಾರ್ಧನ್. ಎಲ್ ಅವರು ಹೇಳಿದರು.
ನಗರದ ಶ್ರೀಮತಿ ರುಕ್ಮಣಮ್ಮ ಚೆಂಗಾರೆಡ್ಡಿ ಸ್ಮಾರಕ ವೃದ್ಧಾಶ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಎನ್‌ಪಿಎಚ್‌ಸಿಇ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯರ ದಿನಾಚರಣೆ ಮತ್ತು ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಮನೆಯಲ್ಲಿ ಹಿರಿಯರ ಮಾತುಗಳೇ ವೇದವಾಕ್ಯಗಳಾಗಿದ್ದವು. ಆದರೆ ಇಂದು ತಿರಸ್ಕಾರ ಭಾವದಿಂದ ಕಾಣಲಾಗುತ್ತಿದೆ. ಬದಲಾದ ಕಾಲದಲ್ಲಿ ವಯೋವೃದ್ಧರಲ್ಲಿ ವಯೋಸಹಜ ಸಂಬಂಧಿ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಮನೆ ಕುಟುಂಬದ ಸದಸ್ಯರು ನೆರವು, ಬೆಂಬಲ, ಗೌರವ ನೀಡುವ ಮೂಲಕ ಅವರ ನೆಮ್ಮದಿ ಜೀವನಕ್ಕೆ ನಾವೆಲ್ಲ ಜೊತೆಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ವಿಮ್ಸ್ ನ ನಿರ್ದೇಶಕ ಡಾ| ದೇವಾನಂದ್ ಮಾತನಾಡಿ, ವೃದ್ಧಾಶ್ರಮಕ್ಕೆ ಹಾಗೂ ತಮಗೆ ಇರುವ ಬಹು ವರ್ಷಗಳ ಭಾಂದವ್ಯವನ್ನು ಹಾಗೂ ಎಲ್ಲರ ಜೀವನದಲ್ಲಿ ಹಿರಿಯರ ಪಾತ್ರವನ್ನು ಸವಿವರವಾಗಿ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ಮರಿಯಮ್‌ಬೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಹಿರಿಯರ ದಿನಾಚರಣೆ ಹಿನ್ನೆಲೆ, ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ವಿಮ್ಸ್‌ನ ಸಹಾಯಕ ಪ್ರಾಧ್ಯಾಪಕರಾದ ಡಾ| ಸುರೇಶ್.ಸಿ.ಎಂ ಅವರು ನಿರೂಪಿಸಿದರು. ಜಿಲ್ಲಾ ಸರ್ವೇಕ್ಷಣಾ ಘಟಕದ ಎನ್.ಸಿ.ಡಿ ವಿಭಾಗದ ಸಂಯೋಜಕರಾದ ಡಾ| ಜಬೀನ್ ತಾಜ್.ಟಿ ಅವರು ವಂದಿಸಿದರು.
ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಹಾಗೂ ಇತರೆ ಕಾಯಿಲೆಗಳಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಕಾರ್ಯಕ್ರಮದ ನಂತರ ಏರ್ಪಡಿಸಲಾಯಿತು. ವೈದ್ಯಕೀಯ ಶಿಬಿರವನ್ನು ವೈದ್ಯಾಧಿಕಾರಿಗಳಾದ ಡಾ| ಮುಜಸಿಮ್ ಬಾನು, ಸಮುದಾಯ ಆರೋಗ್ಯ ಅಧಿಕಾರಿ ಪ್ರಿಯಾಮಣಿ, ಗಜಾಲಬಾನು, ಪಾರ್ವತಿ, ಅನಾ ಗ್ರೇಸಿ ಹಾಗೂ ಪ್ರಯೋಗಾಲಯ ತಂತ್ರಜ್ಞರಾದ ಅಂಬದಾಸ್, ವೆಂಕಟ್ ನಡೆಸಿಕೊಟ್ಟರು. ಕೋವಿಡ್ ಸೋಂಕಿನಿಂದ ಗುಣಮುಖರಾದ ಹಿರಿಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರು, ಗಣ್ಯವ್ಯಕ್ತಿಗಳು ಇದ್ದರು.