Advertisement
ಈ ಕಾಯಿಲೆ ಉಂಟಾಗುವುದೇಕೆ?ನಮ್ಮ ಚರ್ಮ, ಅಂಗಾಂಶ ಮತ್ತು ರಕ್ತದಲ್ಲಿ ಬಿಳಿ ರಕ್ತಕಣಗಳು ಎಂಬ ರಕ್ಷಕ ಜೀವಕೋಶಗಳಿವೆ. ಟಿ ಲಿಂಫೊಸೈಟ್ಸ್ ಎಂಬ ರಕ್ಷಕ ಜೀವಕೋಶಗಳ ವಿವಿಧ ಉಪ ಗುಂಪುಗಳಲ್ಲಿ ಅಸಮತೋಲನವಿದ್ದಾಗ ಸೋರಿಯಾಸಿಸ್ ಉಂಟಾಗುತ್ತದೆ. ಇಂತಹ ಅಸಮತೋಲನ ಉಂಟಾಗುವುದಕ್ಕೆ ಖಚಿತವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸೋರಿಯಾಸಿಸ್ ಒಂದು ಸಾಂಕ್ರಾಮಿಕವಲ್ಲ, ಸೋಂಕು ರೋಗವೂ ಅಲ್ಲ. ಹೀಗಾಗಿ ಸೋರಿಯಾಸಿಸ್‌ಗೆ ಚಿಕಿತ್ಸೆಯು ಕೆಲವೊಮ್ಮೆ ದೀರ್ಘಾವಧಿಯದ್ದಾಗಿರುತ್ತದೆ ಹಾಗೂ ಚರ್ಮ ಮತ್ತು ರಕ್ತನಾಳಗಳನ್ನು ಪ್ರಚೋದಿಸಿ ಚರ್ಮ ದಪ್ಪಗಟ್ಟುವಿಕೆಗೆ ಕಾರಣವಾಗುವ ಟಿ ಸೆಲ್ ಅಸಮತೋಲನದ ಪ್ರಕ್ರಿಯೆ ಉಂಟಾದಾಗಲೆಲ್ಲ ಸೋರಿಯಾಸಿಸ್ ಮರುಕಳಿಸುತ್ತದೆ.
ನಿಮ್ಮ ಆರೋಗ್ಯ ಮಟ್ಟವನ್ನು ವಿಶ್ಲೇಷಿಸಲು ರೂಢಿಗತ ರಕ್ತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ; ಇದರಲ್ಲಿ ರಕ್ತದ ಗುÉಕೋಸ್ ಮಟ್ಟ ಪರೀಕ್ಷೆ, ಪಿತ್ತಜನಕಾಂಗ ಮತ್ತು ಮೂತ್ರಪಿಂಡಗಳ ಕಾರ್ಯಾಚರಣೆಯ ಪರೀಕ್ಷೆ, ಕೊಲೆಸ್ಟರಾಲ್ ಮಟ್ಟ ಇತ್ಯಾದಿ ಸೇರಿರಬಹುದು. ನಿಮ್ಮ ಅನಾರೋಗ್ಯದ ವಿಧ ಮತ್ತು ಪ್ರಮಾಣದ ಆಧಾರದ ಮೇಲೆ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಚಿಕಿತ್ಸೆಯ ಅವಧಿಯಲ್ಲಿ
ನಿಮಗೆ ಕ್ರೀಮುಗಳನ್ನು ಮತ್ತು ಗುಳಿಗೆಗಳನ್ನು ವೈದ್ಯರು ನೀಡಬಹುದು. ಫೊಟೊ ಥೆರಪಿ (ಲೈಟ್ ಥೆರಪಿ) ಎಂದು ಕರೆಯಲಾಗುವ ಇನ್ನೊಂದು ವಿಶೇಷ ಚಿಕಿತ್ಸೆಯೂ ಇದ್ದು, ಇದಕ್ಕೆ ಅಗತ್ಯವಾದ ಸೌಲಭ್ಯಗಳುಳ್ಳ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಇದನ್ನು ನೀಡಲಾಗುತ್ತದೆ. ಇದು ಸೋರಿಯಾಸಿಸ್‌ಗೆ ಲಭ್ಯವಿರುವ ಚಿಕಿತ್ಸೆಗಳಲ್ಲಿ ಅತ್ಯುತ್ತಮವಾದುದಾಗಿದ್ದು, ಅನೇಕ ರೋಗಿಗಳಲ್ಲಿ ದೀರ್ಘ ಅನಾರೋಗ್ಯಮುಕ್ತ ಸಮಯವನ್ನು ನೀಡುತ್ತದೆ. ಇದರ ಬಗ್ಗೆ ನಿಮ್ಮ ಚರ್ಮ ವೈದ್ಯರಿಂದ ಹೆಚ್ಚಿನ ಮಾಹಿತಿಗಳನ್ನು ನೀವು ಪಡೆಯಬಹುದು, ಹಾಗೂ ನಿಮಗೆ ಈ ಚಿಕಿತ್ಸೆಯ ಆಯ್ಕೆ ಹೊಂದುತ್ತದೆಯೇ ಎಂದು ತಿಳಿಯಬಹುದು.
Related Articles
Advertisement
ಸೋರಿಯಾಸಿಸ್ ನಿಭಾಯಿಸಲು ನೀವೇನು
ಮಾಡಬಹುದು?
ಯಾವಾಗಲೂ ಧನಾತ್ಮಕ ಚಿಂತನೆಯುಳ್ಳವರಾಗಿರಿ. ನೀವು ಉದ್ವಿಗ್ನರಾದರೆ ಅಥವಾ ಖನ್ನತೆಗೊಳಗಾದರೆ, ಸಹಾಯ ಪಡೆಯಿರಿ. ನಿಮ್ಮ ಆಪ್ತ ಸ್ನೇಹಿತರು ಅಥವಾ ಕುಟುಂಬ ಸದಸ್ಯರಲ್ಲಿ ನಿಮ್ಮ ಚಿಂತೆಗಳನ್ನು ಹಂಚಿಕೊಳ್ಳಿ ಹಾಗೂ ವೈದ್ಯಕೀಯ ವೃತ್ತಿಪರ ಸಹಾಯವನ್ನೂ ಪಡೆಯಿರಿ. ನಿಮ್ಮ ಭಾವನೆಗಳನ್ನು ಅಡಗಿಸಿಕೊಳ್ಳಬೇಡಿ ಮತ್ತು ನಿಮ್ಮಷ್ಟಕ್ಕೆ ನೀವೇ ನುಂಗಿಕೊಳ್ಳಲು ಪ್ರಯತ್ನಿಸಬೇಡಿ. ಸೋರಿಯಾಸಿಸ್ ಚಳಿಗಾಲದಲ್ಲಿ (ಅಪರೂಪಕ್ಕೆ ಬೇಸಿಗೆಯಲ್ಲಿ ಕೂಡ), ನೀವು ದೈಹಿಕ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಅಥವಾ ಜ್ವರ ಯಾ ಯಾವುದೇ ಸೋಂಕಿಗೆ ತುತ್ತಾದಾಗ ಹೆಚ್ಚಳವಾಗಬಹುದು. ಇಂತಹ ತೀವ್ರತೆಗಳ ಬಗ್ಗೆ ಸಿದ್ಧತೆಯುಳ್ಳವರಾಗಿರಿ ಹಾಗೂ ಇವೆಲ್ಲವಕ್ಕೂ ಚಿಕಿತ್ಸೆಯಿದೆ ಎಂಬ ಬಗ್ಗೆ ಭರವಸೆಯಿಂದಿರಿ. ಮದ್ಯಪಾನ, ಸಿಗರೇಟು ಹಾಗೂ ಪಾನ್/ತಂಬಾಕು ಜಗಿಯುವುದನ್ನು ತ್ಯಜಿಸಿ. ಇವೆಲ್ಲವೂ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ಸೋರಿಯಾಸಿಸ್‌ನ ತೀವ್ರತೆಯನ್ನೂ ಉಲ್ಬಣಗೊಳಿಸಬಲ್ಲವು. ಮದ್ಯಪಾನ ಅಥವಾ ಧೂಮಪಾನ ನಿಮ್ಮ ಒತ್ತಡವನ್ನು ಕಡಿಮೆಗೊಳಿಸುತ್ತದೆ ಎಂದು ನೀವು ಭ್ರಮಿಸಿದ್ದರೆ, ಅದು ತಾತ್ಕಾಲಿಕ ಶಮನ ಎಂಬುದನ್ನು ನೆನಪಿಡಿ, ಆ ಉಪಶಮನವು ದೀರ್ಘಕಾಲಿಕವಾದುದಲ್ಲ ಜತೆಗೆ, ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಆರೋಗ್ಯಯುತ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ಅಧಿಕ ಕೊಬ್ಬು ಮತ್ತು ಸಕ್ಕರೆಯ ಅಂಶವಿಲ್ಲದ, ಹೆಚ್ಚು ನಾರಿನಂಶ, ವಿಟಮಿನ್ ಮತ್ತು ಖನಿಜಾಂಶಯುಕ್ತವಾದ ಸಮತೋಲಿತ ಆಹಾರಶೈಲಿಯನ್ನು ಅನುಸರಿಸಿ. ದಿನಂಪ್ರತಿ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಪ್ರಯತ್ನಿಸಿ. ವೇಗವಾದ ನಡಿಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ. ಸಾಧ್ಯವಿದ್ದರೆ, ತಾಜಾ ಗಾಳಿ ಸೇವಿಸುತ್ತ ಹೊರಾಂಗಣದಲ್ಲಿ ವ್ಯಾಯಾಮ ಮಾಡಲು ಪ್ರಯತ್ನಿಸಿ. ವ್ಯಾಯಾಮದಿಂದ ನಿಮ್ಮ ದೈಹಿಕ ಕೊಬ್ಬು ಕಡಿಮೆಯಾಗುವುದಲ್ಲದೆ ನೀವು ದೈಹಿಕವಾಗಿ ಆರೋಗ್ಯವಂತರಾಗುತ್ತೀರಿ. ಜತೆಗೆ ಅದು ಸಂತಸದ ಹಾರ್ಮೋನ್ ಆಗಿರುವ ಎಂಡೋರ್ಫಿನ್ ಸ್ರಾವಕ್ಕೆ ಕಾರಣವಾಗಿ ನಿಮ್ಮ ಒತ್ತಡ ಇಳಿಸಲು ನೆರವಾಗುತ್ತದೆ, ಇದು ಸೋರಿಯಾಸಿಸ್ ನಿಯಂತ್ರಣದಲ್ಲಿಡಲು ಸಹಾಯಕ. ಸಂಗೀತ, ನೃತ್ಯ, ಧ್ಯಾನ ಅಥವಾ ಓದುವಿಕೆಯಂತಹ ಯಾವುದಾದರೂ ಚೈತನ್ಯದಾಯಕ ಹವ್ಯಾಸವನ್ನು ರೂಢಿಸಿಕೊಳ್ಳಿ. ನಿಮಗಾಗಿ ಮತ್ತು ನಿಮ್ಮ ಹವ್ಯಾಸಕ್ಕಾಗಿ ದಿನಂಪ್ರತಿ ಕನಿಷ್ಠ ಅರ್ಧ ತಾಸನ್ನಾದರೂ ವ್ಯಯಿಸಿ. ಯಾವುದಾದರೂ ಅಂತರ್ಗತ ಆರೋಗ್ಯ ಸಮಸ್ಯೆಗಳು ನಿಮಗಿದ್ದರೆ ಅಥವಾ ಈ ಹಿಂದೆ ಮುಖ್ಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದಿದ್ದರೆ ವೈದ್ಯರ ಗಮನಕ್ಕೆ ತನ್ನಿ. ವಿವಿಧ ಶಸ್ತ್ರಚಿಕಿತ್ಸೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಹೈಪರ್‌ಲಿಪಿಡೇಮಿಯ, ಪಿತ್ತಜನಕಾಂಗ ಅಥವಾ ಮೂತ್ರಪಿಂಡಗಳ ಸಮಸ್ಯೆಗಳು ಇತ್ಯಾದಿ ಇದರಲ್ಲಿ ಸೇರಿವೆ. ನಿಮ್ಮ ಔಷಧೋಪಚಾರದ ದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ. ವೈದ್ಯರ ಭೇಟಿಯನ್ನು ಅಥವಾ ಮಾತ್ರೆಗಳನ್ನು ಸೇವಿಸುವುದನ್ನು ಎಂದೂ ನಿರ್ಲಕ್ಷಿಸಬೇಡಿ. ಯಾವುದೇ ಔಷಧಿಯನ್ನು ತೆಗೆದುಕೊಂಡ ಬಳಿಕ ದಣಿವು, ತಲೆತಿರುಗುವಿಕೆ, ವಾಯುಪ್ರಕೋಪ, ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುವುದು ಅಥವಾ ಚರ್ಮದಲ್ಲಿ ದದ್ದುಗಳು ಉಂಟಾದರೆ ತತ್‌ಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಮುಂದೂಡಬೇಡಿ. ಸೋರಿಯಾಸಿಸ್ ಬಗ್ಗೆ ಕುಟುಂಬ ಸದಸ್ಯರಿಗೂ ಆಪ್ತ ಸಮಾಲೋಚನೆ ಒದಗಿಸಬೇಕಾಗುತ್ತದೆ. ವೈದ್ಯರನ್ನು ಭೇಟಿಯಾಗುವ ಸಂದರ್ಭದಲ್ಲಿ ನಿಮ್ಮ ಆಪ್ತ ಬಂಧುಗಳನ್ನೂ ಕರೆತನ್ನಿ, ಇದರಿಂದ ಅದೊಂದು ಸೋಂಕು ರೋಗವಲ್ಲ ಹಾಗೂ ಸೋರಿಯಾಸಿಸ್‌ನ ಪ್ರತೀ ಆವರ್ತಕ್ಕೂ ಸಂಪೂರ್ಣವಾಗಿ ಚಿಕಿತ್ಸೆ ನೀಡುವುದು ಸಾಧ್ಯವಿದೆ ಎಂಬ ಬಗ್ಗೆ ಅವರು ತಿಳಿದುಕೊಳ್ಳಬಹುದು. ಸೋರಿಯಾಸಿಸ್‌ನಿಂದಾಗಿ ರೂಪುಗೆಟ್ಟ ಚರ್ಮ ಒಮ್ಮೆ ಸಂಪೂರ್ಣ ನಿವಾರಣೆಯಾಗಿ, ಕೆಲವು ತಿಂಗಳುಗಳ ಬಳಿಕ ಮತ್ತೆ ಅಲ್ಲಲ್ಲಿ ಕಲೆಗಳು ಕಾಣಿಸಿಕೊಂಡರೆ ಭರವಸೆ ಕಳೆದುಕೊಳ್ಳದಿರಿ. ಅನೇಕ ಪ್ರಕರಣಗಳಲ್ಲಿ ಪುನರಾವರ್ತನೆ ಅಥವಾ ಮರುಕಳಿಕೆ ಇರುತ್ತದೆ ಹಾಗೂ ಇಂತಹ ಪ್ರತೀ ಪುನರಾವರ್ತನೆಗೂ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾಗಿದೆ.
ನೀವು ಇಂಟರ್‌ನೆಟ್ ಕುಶಲಿಗಳಾಗಿದ್ದರೆ, ಸೋರಿಯಾಸಿಸ್ ರೋಗಿ ಮಾಹಿತಿ ಅಂತರ್ಜಾಲ ತಾಣಗಳನ್ನು ಸಂದರ್ಶಿಸಬಹುದು ಅಥವಾ ನಿಮ್ಮ ಅನುಭವ ಮತ್ತು ಕಳವಳಗಳನ್ನು ಹಂಚಿಕೊಳ್ಳುವ ಸೋರಿಯಾಸಿಸ್ ಸಮೂಹಗಳ ಸದಸ್ಯರಾಗಬಹುದು. ಆದರೆ, ಕಾಯಿಲೆಯ ಬಗ್ಗೆ ಆಳವಾದ ಗೂಗಲ್ ಅಧ್ಯಯನ ನಡೆಸಿ ತಲೆಕೆಡಿಸಿಕೊಂಡು ಈ ಕಾಯಿಲೆಯ ಚಿಕಿತ್ಸೆ ಮತ್ತು ಗುಣಮುಖವಾಗುವ ಬಗ್ಗೆ ಅವೈಚಾರಿಕ ನಿರೀಕ್ಷೆಗಳನ್ನು ಬೆಳೆಸಿಕೊಳ್ಳಬೇಡಿ. ಅಷ್ಟೇ ಅಲ್ಲದೆ, ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುವ ವಿವಿಧ ಆಧಾರಸಹಿತ ಅಥವಾ ನಿರಾಧಾರ ಮಾಹಿತಿಗಳನ್ನು ಓದಿ ಭಯಪಡಬೇಡಿ. ಕುಟುಂಬ ಸದಸ್ಯ /ಆಪ್ತ
ಸ್ನೇಹಿತ-ಸ್ನೇಹಿತೆಯರಿಗೆ
ಸೋರಿಯಾಸಿಸ್ ಇದ್ದರೆ
ಏನು ಮಾಡಬೇಕು?
ಸದಾ ಅವರನ್ನು ಉತ್ತೇಜಿಸಿ, ಧೈರ್ಯತುಂಬಿ. ಅವರ ಅನಾರೋಗ್ಯದ ಬಗ್ಗೆ ನೀವು ಭಯಪಟ್ಟಿಲ್ಲವೆಂಬುದನ್ನು ಅವರಿಗೆ ಮನಗಾಣಿಸಲು ಅವರ ಜತೆಗಿರಿ ಅಥವಾ ಅವರನ್ನು ಸ್ಪರ್ಶಿಸಿ. ರೂಪುಗೆಟ್ಟ ಚರ್ಮದಿಂದಾಗಿ ತಮ್ಮ ಗೆಳೆಯ ಗೆಳತಿಯರು ಅಥವಾ ಕುಟುಂಬಿಕರು ತಮ್ಮನ್ನು ದೂರವಿಡಬಹುದು ಎಂಬುದಾಗಿ ಅನೇಕ ಸೋರಿಯಾಸಿಸ್ ರೋಗಿಗಳು ಕಳವಳಗೊಳ್ಳುತ್ತಾರೆ. ಸೋರಿಯಾಸಿಸ್ ಒಂದು ಸೋಂಕುರೋಗವಲ್ಲವಾದುದರಿಂದ ಅವರ ಕಳವಳ ತಪ್ಪು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ.
ಶಾಲೆಯಲ್ಲಿ ಅಥವಾ ಉದ್ಯೋಗ ಸ್ಥಳದಲ್ಲಿ ಇಂತಹ ಸಮಸ್ಯೆ ಕಂಡುಬಂದರೆ, ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆಗೆ ಸಮಾಲೋಚಿಸಿ. ಸೋರಿಯಾಸಿಸ್ ಒಂದು ಸೋಂಕುರೋಗವಲ್ಲ ಮತ್ತು ಉದ್ಯೋಗಕ್ಕೆ ಅಥವಾ ಶಾಲಾ ಹಾಜರಾತಿಗೆ ಬಾಧಕವಲ್ಲ ಎಂಬುದಾಗಿ ಅಧಿಕೃತ ಪತ್ರವನ್ನು ಒದಗಿಸಲು ಅವರು ಸದಾ ಸಿದ್ಧರಿರುತ್ತಾರೆ. ಸೋರಿಯಾಸಿಸ್ ಹೊಂದಿರುವ ವ್ಯಕ್ತಿ ತನ್ನ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದನ್ನು, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವುದನ್ನು ಮತ್ತು ಮಾಯಿಶ್ಚರೈಸರ್‌ಗಳನ್ನು ನಿಯಮಿತವಾಗಿ ಹಚ್ಚಿಕೊಳ್ಳುವುದನ್ನು ಖಾತರಿಪಡಿಸಿ. ನೀವೇ ಅವರಿಗೆ ಮಾದರಿಯಾಗುವ ಮೂಲಕ ವ್ಯಾಯಾಮ ಮಾಡಲು, ಧೂಮಪಾನ ಮತ್ತು ಮದ್ಯಪಾನವನ್ನು ವರ್ಜಿಸಲು ಹಾಗೂ ಆರೋಗ್ಯಯುತ ಆಹಾರ ಸೇವಿಸಲು ಅವರನ್ನು ಉತ್ತೇಜಿಸಿ. ಸೋರಿಯಾಸಿಸ್ ಪೀಡಿತ ಮಗು ನಿಮಗಿದ್ದರೆ, ಭಾವನಾತ್ಮಕ ಆಗುಹೋಗುಗಳನ್ನು ನಿಭಾಯಿಸುವಲ್ಲಿ ಶಿಕ್ಷಕ-ಶಿಕ್ಷಕಿಯರ ಹಾಗೂ ಮಗುವಿನ ಸಹಪಾಠಿಗಳ ಹೆತ್ತವರ ನೆರವು ಪಡೆಯಿರಿ. ಈ ಕಾಯಿಲೆಯಿಂದಾಗಿ ಮಗು ಏಕಾಂಗಿಯಾಗದಂತೆ ಅಥವಾ ದೂರ ಮಾಡಲ್ಪಡದಂತೆ ಜಾಗ್ರತೆ ವಹಿಸಿ. ಶಾಲಾ ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಆರೋಗ್ಯ ಶಿಕ್ಷಣ ಒದಗಿಸುವುದರಿಂದ ಇದನ್ನು ಸಾಧಿಸಬಹುದು. ಮಗುವಿನ ಕಾಯಿಲೆಯ ಬಗ್ಗೆ ಅಥವಾ ಚಿಕಿತ್ಸೆಯ ವೆಚ್ಚದ ಬಗೆಗಿನ ನಿಮ್ಮ ಚಿಂತೆ ಅಥವಾ ಹತಾಶೆಯನ್ನು ಮಗುವಿಗೆ ಎಂದೂ ಗೊತ್ತುಪಡಿಸದಿರಿ. ತಾಯ್ತಂದೆಯ ಆತಂಕವು ಮಗುವನ್ನು ಕೂಡ ಆತಂಕಕ್ಕೊಳಪಡಿಸಬಹುದು. ಸೋರಿಯಾಸಿಸ್ ಮತ್ತು
ದೈಹಿಕ ಸಂಬಂಧ
ಸೋರಿಯಾಸಿಸ್ ಒಂದು ಸೋಂಕುರೋಗವಲ್ಲ. ಹೀಗಾಗಿ ಸೋರಿಯಾಸಿಸ್ ರೋಗಿಯೊಂದಿಗೆ ಆಪ್ತ ದೈಹಿಕ ಸ್ಪರ್ಶ ಮತ್ತು ಲೈಂಗಿಕ ಸಂಪರ್ಕಗಳು ನಿಷಿದ್ಧವಲ್ಲ. ವೈವಾಹಿಕ ಸಂಗಾತಿಗಳಲ್ಲಿ ಯಾರಾದರೊಬ್ಬರು ಸೋರಿಯಾಸಿಸ್ ಪೀಡಿತರಾಗಿದ್ದಲ್ಲಿ, ಇನ್ನೊಬ್ಬರಿಗೆ ಈ ಕಾಯಿಲೆಯ ಬಗ್ಗೆ ವೈದ್ಯಕೀಯ ಆಪ್ತಸಮಾಲೋಚನೆ ಒದಗಿಸಬೇಕು ಮತ್ತು ಅವರ ಕಳವಳ ಮತ್ತು ಶಂಕೆಗಳನ್ನು ವೃತ್ತಿಪರವಾಗಿ ಪರಿಹರಿಸಬೇಕು. ಸಂಗಾತಿಗಳ ನಡುವೆ ಉತ್ತಮ ಪರಸ್ಪರ ಅರಿವು ಮತ್ತು ವಿಶ್ವಾಸ ಇದ್ದು, ಪರಸ್ಪರ ಸಂಯುಕ್ತ ಪ್ರಯತ್ನದಿಂದ ಸೋರಿಯಾಸಿಸ್ ನಿರ್ವಹಣೆ ನಡೆಯಬೇಕು. ಸೋರಿಯಾಸಿಸ್ ಇರುವ ವಿವಾಹಾಸಕ್ತ ವಯಸ್ಕ ವ್ಯಕ್ತಿ, ವಿವಾಹಕ್ಕೆ ಮುಂದುವರಿಯುವ ಮುನ್ನ ಸಂಭಾವ್ಯ ಸಂಗಾತಿಯ ಜತೆಗೆ ತನಗಿರುವ ಸಮಸ್ಯೆ ಮತ್ತು ಅದರ ಸ್ವರೂಪದ ಬಗೆಗೆ ಮುಕ್ತವಾಗಿ ವಿಚಾರ ವಿನಿಮಯ ನಡೆಸುವುದು ವಿಹಿತ. ಸ್ತ್ರೀ ಸೋರಿಯಾಸಿಸ್ ರೋಗಿಗಳ ಪಾಲಿಗೆ, ಗರ್ಭಿಣಿಯರಾಗಲು ಮತ್ತು ಆರೋಗ್ಯವಂತ ಮಕ್ಕಳನ್ನು ಪಡೆಯಲು ಸೋರಿಯಾಸಿಸ್ ಒಂದು ತಡೆಯಲ್ಲ. ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಕೆಲವೊಮ್ಮೆ ಸೋರಿಯಾಸಿಸ್ ಉಲ್ಬಣಗೊಳ್ಳಬಹುದು, ಆದರೆ ಅದನ್ನು ಸೂಕ್ತವಾಗಿ ನಿಭಾಯಿಸಬಹುದಾಗಿದೆ. ಉಪಸಂಹಾರ
ಸೋರಿಯಾಸಿಸ್ ಒಂದು ದೀರ್ಘಕಾಲೀನ ಆರೋಗ್ಯ ಸಮಸ್ಯೆಯಾಗಿದ್ದು, ವಿವಿಧ ತೀವ್ರತೆಯ ಸ್ವರೂಪಗಳಲ್ಲಿ ಗೋಚರಕ್ಕೆ ಬರುತ್ತದೆ. ಸೋರಿಯಾಸಿಸ್‌ನ ಉಲ್ಬಣಾವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸಲು ಚಿಕಿತ್ಸೆಯಿದೆಯಾದರೂ ಸಂಪೂರ್ಣ ಗುಣ ಕಾಣುವುದನ್ನು ಖಚಿತಪಡಿಸುವುದು ಕಷ್ಟಸಾಧ್ಯ. ಸೋರಿಯಾಸಿಸ್ ಹೊಂದಿರುವ ವ್ಯಕ್ತಿಗಳು ಜೀವನದ ಬಗ್ಗೆ ಧನಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಮತ್ತು ಬಹಳ ಮುಖ್ಯವಾಗಿ, ವೈದ್ಯರ ಸಲಹೆ ಸೂಚನೆಗಳನ್ನು ಸರಿಯಾಗಿ ಪರಿಪಾಲಿಸಬೇಕು. ನಾವು ಜತೆಯಾಗಿ ಸೋರಿಯಾಸಿಸ್ ಅನ್ನು ಗೆಲ್ಲಬಹುದು. ಸೋರಿಯಾಸಿಸ್ ಗುರುತಿಸುವುದು ಹೇಗೆ?
ಹೆಚ್ಚಾಗಿ ಮಣಿಗಂಟು, ಮೊಣಕಾಲು, ತಲೆಬುರುಡೆ ಮತ್ತು ದೇಹದ ಕೆಳಭಾಗದಲ್ಲಿ, ಅಲ್ಲಲ್ಲಿ ಚರ್ಮ ತುರಿಕೆಯಿಲ್ಲದ, ಹುರುಪೆಗಳೇಳುವ ಕೆಂಪಾಗಿ ಉಬ್ಬಿಕೊಂಡ ಭಾಗವಾಗಿ ಸೋರಿಯಾಸಿಸ್ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ತುರಿಕೆ ಸಹಿತವಾಗಿಯೂ ಇದು ಇರಬಹುದು, ಇನ್ನು ಕೆಲವರಲ್ಲಿ ಕೆಂಬಣ್ಣ ಮತ್ತು ಹುರುಪೆಗಳೇಳುವುದು ಹೆಚ್ಚಿರಬಹುದು. ಸಾಮಾನ್ಯವಾಗಿ ಇದರ ಜತೆಗೆ ಉಗುರು ಕೂಡ ರೂಪಗೆಟ್ಟಿರುತ್ತದೆ – ಒರಟಾಗಿರುತ್ತದೆ, ದಪ್ಪಗಾಗಿರುತ್ತದೆ, ಹಳದಿ ಬಣ್ಣಕ್ಕೆ ತಿರುಗಿರುತ್ತದೆ ಹಾಗೂ ಉಗುರಿನ ಕೆಳಭಾಗದ ಆಧಾರ ಚರ್ಮದಿಂದ ಸಡಿಲಗೊಂಡಿರುತ್ತದೆ. ಕೆಲವರಲ್ಲಿ ಲಘು ಸ್ವರೂಪದಿಂದ ತೀವ್ರ ಸ್ವರೂಪದವರೆಗಿನ ಸಂದುನೋವು ಕೂಡ ಇರುತ್ತದೆ. ಸಾಮಾನ್ಯವಾಗಿ ಬಾಧೆಗೀಡಾಗುವ ಸಂದುಗಳೆಂದರೆ, ಕೈಗಳ ಸಂದುಗಳು ಹಾಗೂ ಮೊಣಕಾಲು ಮತ್ತು ಮಣಿಗಂಟು. ಸೋರಿಯಾಸಿಸ್ ಅನೇಕ ವಿಧದ ತೀವ್ರತೆಗಳಲ್ಲಿ- ಒಂದೆರಡು ಕಲೆಗಳಿಂದ ಹಿಡಿದು ಇಡೀ ದೇಹದ ಚರ್ಮವೆಲ್ಲ ಕಲೆಯಿಂದ ತುಂಬಿಹೋಗುವವರೆಗೆ – ಇರಬಹುದಾಗಿದೆ. ಕೆಲವೊಮ್ಮೆ ಬೊಕ್ಕೆ ಸೋರಿಯಾಸಿಸ್ ಅಥವಾ ಪಸ್ಟುಲಾರ್ ಸೋರಿಯಾಸಿಸ್ ಎಂಬ ಇನ್ನೊಂದು ವಿಧದ ಸೋರಿಯಾಸಿಸ್ ಕೂಡ ಉಂಟಾಗುವುದಿದೆ. ಇದರಲ್ಲಿ ದೇಹವಿಡೀ ಬ್ಯಾಕ್ಟೀರಿಯಾ ರಹಿತವಾದ ಬೊಕ್ಕೆಗಳಿಂದ ತುಂಬಿಕೊಳ್ಳುತ್ತದೆ. ಎರಿಥ್ರೊಡರ್ಮಿಕ್ ಸೋರಿಯಾಸಿಸ್ ಎಂಬ ಇನ್ನೊಂದು ವಿಧವಿದೆ, ಇದರಲ್ಲಿ ಇಡೀ ದೇಹ ಕೆಂಪಗಾಗಿ ಹುರುಪೆಗಳೇಳುತ್ತವೆ, ಜ್ವರ ಮತ್ತು ನಡುಕ ಕೂಡ ಉಂಟಾಗುತ್ತದೆ. ಆದರೆ ಎಲ್ಲ ವಿಧದ ಸೋರಿಯಾಸಿಸ್‌ಗಳಿಗೂ ಚಿಕಿತ್ಸೆಯಿದೆ.
ಸೋರಿಯಾಸಿಸ್ ಪೀಡಿತರಾದ ಅನೇಕರು ಬೊಜ್ಜುಳ್ಳವರಾಗಿರುತ್ತಾರೆ, ಮಧುಮೇಹಿಗಳೂ ಆಗಿರುತ್ತಾರೆ, ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿ ಅಧಿಕ ಕೊಲೆಸ್ಟರಾಲ್ ಹೊಂದಿರುತ್ತಾರೆ. ಸೋರಿಯಾಸಿಸ್ ಇರುವುದು ಖಚಿತವಾದರೆ ನೀವೇನು ಮಾಡಬಹುದು?
ಮೊತ್ತಮೊದಲನೆಯದಾಗಿ, ಖನ್ನರಾಗದಿರುವುದು ಅಥವಾ ಈ ಸಮಸ್ಯೆಯ ಬಗ್ಗೆ ಅತಿಯಾಗಿ ಕಳವಳಗೊಳ್ಳದಿರುವುದು. ಏಕೆ ಎಂದರೆ, ಆತಂಕ, ಖನ್ನತೆ ಅಥವಾ ಒತ್ತಡದಿಂದ ಉಲ್ಬಣಗೊಳ್ಳುವ ಆರೋಗ್ಯ ಸಮಸ್ಯೆಗಳಲ್ಲಿ ಸೋರಿಯಾಸಿಸ್ ಕೂಡ ಒಂದಾಗಿರುವ ಕಾರಣ ಇದು ಬಹಳ ಮುಖ್ಯ. ಇದು ಸೋಂಕುರೋಗವಲ್ಲವಾದುದರಿಂದ ಕುಟುಂಬ ಸದಸ್ಯರಿಗೆ, ಗೆಳೆಯ ಗೆಳತಿಯರಿಗೆ ಅಥವಾ ಸಹೋದ್ಯೋಗಿಗಳಿಗೆ ಅವರನ್ನು ಸ್ಪರ್ಶಿಸುವುದರಿಂದ ಯಾ ಅವರೊಂದಿಗೆ ಇರುವುದರಿಂದ ಹರಡುವುದಿಲ್ಲ. ನಿಮಗೆ ಸೋರಿಯಾಸಿಸ್
ಇದೆ ಎಂಬ ಶಂಕೆಯಿದ್ದಲ್ಲಿ
ಏನು ಮಾಡಬೇಕು?
ಗಾಬರಿಗೊಳ್ಳಬೇಕಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗನೆ ಚರ್ಮವೈದ್ಯರ ಜತೆಗೆ ಸಮಾಲೋಚಿಸಿ. ಸೋರಿಯಾಸಿಸ್‌ನಂತೆಯೇ ಕಾಣಿಸುವ ಚರ್ಮದ ಶಿಲೀಂಧ್ರ ಸೋಂಕು, ಚರ್ಮದ ಅಲರ್ಜಿ ಪ್ರತಿಕ್ರಿಯೆಯಾಗಿರುವ ಡರ್ಮಟೈಟಿಸ್ ಅಥವಾ ಘರ್ಷಣೆ ಯಾ ಉಜ್ಜುವಿಕೆಯಿಂದ ಉಂಟಾಗುವ ಚರ್ಮ ದಪ್ಪಗಟ್ಟುವಿಕೆಯಂತಹ ಚರ್ಮರೋಗಗಳಿವೆ. ಇಂತಹ ಸಮಸ್ಯೆಗಳ ವ್ಯತ್ಯಾಸವನ್ನು ಚರ್ಮರೋಗ ತಜ್ಞ ಸುಲಭವಾಗಿ ಗುರುತಿಸಬಲ್ಲರು ಹಾಗೂ ಚರ್ಮದ ಬಯಾಪ್ಸಿ ಎಂಬ ಸರಳ ಪರೀಕ್ಷೆಯನ್ನು ನಡೆಸಿ ರೋಗಪತ್ತೆಯನ್ನು ಖಚಿತಪಡಿಸಿಕೊಳ್ಳಬಲ್ಲರು. ಸೋರಿಯಾಸಿಸ್ ಸಹಿತ ಮೇಲ್ಕಂಡ ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆಯಿದೆ. – ಡಾ| ಸ್ಮಿತಾ ಪ್ರಭು
ಅಸೋಸಿಯೇಟ್ ಪ್ರೊಫೆಸರ್,
ಚರ್ಮರೋಗ ಶಾಸ್ತ್ರ ವಿಭಾಗ,
ಕೆ.ಎಂ.ಸಿ., ಮಣಿಪಾಲ.